ಮೂಡುಬಿದಿರೆ : ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ಜಗತ್ತಿಗೆ ಸಾರಿದ ನಾರಾಯಣಗುರುಗಳು ಅಸ್ಪ್ರಶ್ಯತೆಯ ವಿರುದ್ಧ ಮೌನ ಕ್ರಾಂತಿಯ ಮೂಲಕ ಸಾಮಾಜಿಕ ಸುಧಾರಣೆಯನ್ನು ತನ್ನ ಜೀವಿತಾವಧಿಯಲ್ಲೇ ಸಾಧಿಸಿ ತೋರಿಸಿದ ಮನುಕುಲದ ಪರಿವರ್ತನಾ ಚಿಂತನೆಯ ವಿಶ್ವಗುರು ಬ್ರಹ್ಮಶ್ರೀ ನಾರಾಯಣಗುರುಗಳು ಎಂದು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಮ್.ಮೋಹನ್ ಆಳ್ವ ಅಭಿಪ್ರಾಯ ಪಟ್ಟರು.
ಅವರು ದಿನಾಂಕ 28-08-2024ನೇ ಬುಧವಾರದಂದು ಬ್ರಹ್ಮಶ್ರೀ ನಾರಾಯಣಗುರುಗಳ 170ನೇ ಜನ್ಮ ದಿನಾಚರಣೆಯ ಪ್ರಯುಕ್ತ ಯುವವಾಹಿನಿ ಮೂಡುಬಿದಿರೆ ಘಟಕದ ಆಶ್ರಯದಲ್ಲಿ, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ ಮೂಡುಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ಆಯೋಜಿಸಿದ್ದ ಮೂಡುಬಿದಿರೆ ತಾಲೂಕು ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಶ್ರೀ ನಾರಾಯಣ ಗುರುಗಳ ಭಾವಚಿತ್ರ ರಚನೆ, ಪ್ರಬಂಧ ಹಾಗೂ ಭಾಷಣ ಸ್ಪರ್ಧೆಯ ಗುರು ಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಾರಾಯಣಗುರುಗಳು ಲೋಕಶಾಂತಿಯ ಹರಿಕಾರರು, ಮಹಾತ್ಮ ಗಾಂದಿ, ವಿಶ್ವ ಕವಿ ರವೀಂದ್ರನಾಥ್ ಟಾಗೋರ್ ರಂತಹ ಮಹಾನ್ ನಾಯಕರು ಗುರುಗಳ ಬಳಿ ಮಾರ್ಗದರ್ಶನ ಪಡೆಯುತ್ತಿದ್ದರು ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಶಾಸಕರಾದ ಉಮನಾಥ್ ಕೋಟ್ಯಾನ್ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಯುವವಾಹಿನಿ ಮೂಡುಬಿದಿರೆ ಘಟಕದ ಅಧ್ಯಕ್ಷ ಶಂಕರ್ ಎ.ಕೋಟ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗುರುಗಳ ಜನ್ಮದಿನಾಚರಣೆಯ ಪ್ರಯುಕ್ತ ಗುರುಸ್ಮರಣೆ ಕಾರ್ಯಕ್ರಮದಲ್ಲಿ ನಡೆಸುವ ಸ್ಪರ್ಧೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸ್ಪರ್ಧಿಸುವ ಮೂಲಕ ಯುವವಾಹಿನಿಯಲ್ಲಿ ಹೊಸ ದಾಖಲೆ ಸೃಷ್ಟಿಸಿದೆ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಹರೀಶ್ ಕೆ. ಪೂಜಾರಿ ತಿಳಿಸಿದರು.
ಉದ್ಯಮಿ ನಾರಾಯಣ ಪಿ. ಎಂ., ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ.ಕೆ., ಯುವವಾಹಿನಿ ಮೂಡುಬಿದಿರೆ ಘಟಕದ ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಅಶೋಕ್ ಬಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
925 ಸ್ಪರ್ಧಿಗಳ ದಾಖಲೆ ಬರೆದ ಗುರುಸ್ಮರಣೆ
ಬ್ರಹ್ಮಶ್ರೀ ನಾರಾಯಣಗುರುಗಳ ಜನ್ಮದಿನಾಚರಣೆ ಪ್ರಯುಕ್ತ ಮೂಡುಬಿದಿರೆ ತಾಲೂಕು ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ನಾರಾಯಣ ಗುರುಗಳ ಭಾವಚಿತ್ರ ರಚನೆಗೆ 700 ವಿದ್ಯಾರ್ಥಿಗಳು, ಪ್ರಬಂಧ ಸ್ಪರ್ಧೆಗೆ 162 ಹಾಗೂ ಹಾಗೂ ಭಾಷಣ ಸ್ಪರ್ಧೆಗೆ 60 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 925 ದಾಖಲೆ ಸಂಸ್ಥೆಯ ವಿದ್ಯಾರ್ಥಿಗಳು ಸ್ಪರ್ಧಿಸಿ ಗುರುಸ್ಮರಣೆ ಅಭೂತಪೂರ್ವ ಯಶಸ್ಸು ಕಂಡಿತು.
ಯುವವಾಹಿನಿ ಮೂಡುಬಿದಿರೆ ಘಟಕದ ಅಧ್ಯಕ್ಷ ಶಂಕರ್ ಎ. ಕೋಟ್ಯಾನ್ ಸ್ವಾಗತಿಸಿದರು, ಕಾರ್ಯದರ್ಶಿ ಗಿರೀಶ್ ಕೋಟ್ಯಾನ್ ವಂದಿಸಿದರು. ಹನಿ ಆನಂದ್ ಕಾರ್ಯಕ್ರಮ ನಿರೂಪಿಸಿದರು.