ಕೆಂಜಾರು: ಯುವವಾಹಿನಿ (ರಿ ) ಕೆಂಜಾರು – ಕರಂಬಾರು ಘಟಕದ ವತಿಯಿಂದ 6 ನೇ ವರ್ಷದ ಶ್ರೀ ಕೃಷ್ಣ ವೇಷ ಸ್ಪರ್ಧೆ (ಮುದ್ದು ಕೃಷ್ಣ, ತುಂಟ ಕೃಷ್ಣ, ಬಾಲಕೃಷ್ಣ, ರಾಧಾ-ಕೃಷ್ಣ ಹಾಗೂ ಯಶೋಧ ಕೃಷ್ಣ) ಒಟ್ಟು 5 ವಿಭಾಗಗಳಲ್ಲಿ ಶ್ರೀ ದೇವಿ ಭಜನಾ ಮಂದಿರ ಕೆಂಜಾರು- ಕರಂಬಾರು ಇದರ ಹೊರಾಂಗಣದ ಮುಕ್ತ ವೇದಿಕೆಯಲ್ಲಿ 25-08-2024 ರಂದು ಜರಗಿತು.
ಬೆಳಿಗ್ಗೆ 9.30 ಕ್ಕೆ ಶ್ರೀ ದೇವಿಗೆ ಪೂಜೆ ಸಲ್ಲಿಸಿ, ಉದ್ಘಾಟನಾ ಸಭಾ ಕಾರ್ಯಕ್ರಮ ಜರಗಿತು. ಘಟಕದ ಅಧ್ಯಕ್ಷ ವಿನೋದ್ ಕುಮಾರ್ ಅಧ್ಯಕ್ಷತೆಯನ್ನು ವಹಿಸಿದ್ದರು. ಕರಂಬಾರು ಕೋರ್ದಬ್ಬು ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಘಟಕದ ಹಿರಿಯ ಮಾರ್ಗದರ್ಶಕರೂ ಆದ ಜಗನ್ನಾಥ ಸಾಲಿಯಾನ್ ಉದ್ಘಾಟಿಸಿದರು. ಬಜಪೆ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ಇದರ ಉಪಾಧ್ಯಕ್ಷರಾದ ಶೇಖರ್ ಪೂಜಾರಿ ಕರಂಬಾರು, ಶ್ರೀ ದೇವಿ ಭಜನಾ ಮಂದಿರದ ಮಾಜಿ ಅಧ್ಯಕ್ಷರಾದ ಶೇಖರ್ ಬಂಗೇರ, ಕಾರ್ಯದರ್ಶಿ ಲೋಕೇಶ್ ಕುಂದರ್ , ಕಲೆ- ಸಾಂಸ್ಕೃತಿಕ – ಸಾಹಿತ್ಯ ನಿರ್ದೇಶಕಿ ಕುಮಾರಿ ತೃಪ್ತಿ, ಶ್ರೀಮತಿ ಶಕುಂತಲಾ, ಕಾರ್ಯದರ್ಶಿ ಮಿಥುನ್ ಕುಮಾರ್ ವೇದಿಕೆಯಲ್ಲಿದ್ದರು.
ಅಧ್ಯಕ್ಷರು ಬಂದಂತಹ ಅತಿಥಿಗಣ್ಯರನ್ನು ಸ್ವಾಗತಿಸಿದರು. ಉದ್ಘಾಟನಾ ಭಾಷಣ ಮಾಡಿದ ಜಗನ್ನಾಥ ಸಾಲಿಯಾನ್ ಅವರು ಯುವವಾಹಿನಿ ಕೆಂಜಾರು ಘಟಕವು ಹತ್ತು ಹಲವು ಸಮಾಜಮುಖಿ ಸೇವೆಗಳಲ್ಲಿ ತೊಡಗಿ ಇದೀಗ ಪುಟಾಣಿ ಮಕ್ಕಳಿಗೆ 6 ನೇ ಬಾರಿಗೆ ಶ್ರೀ ಕೃಷ್ಣ ವೇಷ ಸ್ಪರ್ಧೆ ನಡೆಸುತ್ತಿದ್ದು , ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಒಳ್ಳೆಯ ವೇದಿಕೆಯಾಗಿದೆ ಎಂದು ಶ್ಲಾಘಿಸಿದರು.
ತೀರ್ಪುಗಾರರಾಗಿ ನಮ್ಮ ಸಮಾಜದ ಶಿಕ್ಷಕಿಯಾಗಿರುವ ಶ್ರೀಮತಿ ನವೀನ ಕುಮಾರಿ, ಹಾಗೂ ಇನ್ನೋರ್ವ ಸಾಧಕಿ ಉಪನ್ಯಾಸಕಿ ಡಾ.ಶಿಲ್ಪ ದಿನೇಶ್ ಉತ್ತಮ ತೀರ್ಪು ನೀಡಿದರು. ಅವರು ತಮ್ಮ ಜೀವನದಲ್ಲಿ ಮಾಡಿದ ಸಾಧನೆಗೆ ಘಟಕದ ಪರವಾಗಿ ಇಬ್ಬರೂ ಸಾಧಕಿಯರನ್ನು ಗೌರವಿಸಿ ಸನ್ಮಾನಿಸಲಾಯಿತು.
ಒಟ್ಟು 5 ವಿಭಾಗದಲ್ಲಿ ಸುಮಾರು 44 ಸ್ಪರ್ಧಾಳುಗಳು ಭಾಗವಹಿಸಿದ್ದರು. ಪ್ರತಿ ವಿಭಾಗದಲ್ಲಿಯೂ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲಾಯಿತು. ಸಮಾರೋಪ ಸಮಾರಂಭದಲ್ಲಿ ಹಿರಿಯ ಭಜನಾ ಗುರುಗಳಾದ ಯಾದವ ಸುವರ್ಣ ಬಜ್ಪೆ , ವೇದಿಕೆಯಲ್ಲಿದ್ದ ಗಣ್ಯರು ವಿಜೇತರಿಗೆ ಪ್ರಶಸ್ತಿ ವಿತರಿಸಿದರು.
ಕಾರ್ಯದರ್ಶಿ ಮಿಥುನ್ ಕುಮಾರ್ ಅವರು ವಂದನಾರ್ಪಣೆಗೈದರು. ಘಟಕದ ಮಾಜಿ ಅಧ್ಯಕ್ಷರಾದ ಗಣೇಶ್ ಅರ್ಬಿ ಇವರು ಕಾರ್ಯಕ್ರಮ ನಿರೂಪಿಸಿದರು.