ಕೊಲ್ಯ: ಯುವವಾಹಿನಿಯಿಂದ ನಮಗೇನು ಸಿಗುತ್ತದೆ ಎನ್ನುವುದರ ಬದಲು ಯುವವಾಹಿನಿಗೆ ಸೇರಿ ನಾವು ಏನನ್ನು ಪಡೆಯಬಹುದು, ಹೇಗೆ ಬೆಳೆಯಬಹುದು, ಆ ಮೂಲಕ ಸಮಾಜಕ್ಕೆ ಯಾವ ರೀತಿಯ ಕೊಡುಗೆ ನೀಡಬಹುದು ಇಂತಹ ಮನೋಚಿಂತನೆಯನ್ನು ಸದಸ್ಯರಾಗಿ ಸೇರುವ ಯುವವಾಹಿನಿ ಬಂಧುಗಳು ಬೆಳೆಸಿಕೊಳ್ಳಬೇಕೆಂದು ಯುವವಾಹಿನಿ ( ರಿ) ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು ಶ್ರೀ ನರೇಶ್ ಸಸಿಹಿತ್ಲು ತಿಳಿಸಿದರು.
07-07-2024ರಂದು ಬ್ರಹ್ಮಶ್ರೀ ನಾರಾಯಣ ಗುರು ಸಭಾಂಗಣ ಕೊಲ್ಯದಲ್ಲಿ ಯುವವಾಹಿನಿ (ರಿ) ಕೊಲ್ಯ ಘಟಕಕ್ಕೆ ಹೊಸ ಸದಸ್ಯರಾಗಿ ಸೇರ್ಪಡೆಗೊಂಡವರಿಗೆ ಯುವವಾಹಿನಿ ಸಂಘಟನೆಯ ಬಗ್ಗೆ ಮಾಹಿತಿಯನ್ನು ನೀಡಲು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಅವರು, ನಮಗೆ ಬದುಕಿನ ಕುರಿತು ಒಂದು ನಿರ್ಧಿಷ್ಟ ಗುರಿ ಇರಬೇಕು. ಆ ಗುರಿಯನ್ನು ಮುಟ್ಟಲು ನಿರಂತರ ಪರಿಶ್ರಮ ಪಡೆದು ಮುಂದೆ ಸಮಾಜದಲ್ಲಿ ಉತ್ತಮ ನಾಯಕರಾಗಬೇಕೆಂದು ಸ್ಫೂರ್ತಿಯುತ ಮಾತುಗಳಿಂದ ಹುರಿದುಂಬಿಸಿದರು. ಸಭೆಯಲ್ಲಿ ಕೊನೆಯ ಆಸನದಲ್ಲಿ ಕುಳಿತವರು ಮುಂದೊಂದು ದಿನ ಮನೋಬಲದಿಂದ ಜೊತೆಗೆ ಜನರ ವಿಶ್ವಾಸವನ್ನು ಗಳಿಸಿಕೊಂಡು ಉನ್ನತೋನ್ನತ ಹುದ್ದೆಗಳನ್ನು ಅಲಂಕರಿಸಬೇಕು, ಬಡವರ ಕಣ್ಣೀರೊರೆಸುವ ಕಾರ್ಯಗಳನ್ನು ಸಂಘಟನೆಯ ಮೂಲಕ ಕಾರ್ಯಗತಗೊಳಿಸಬೇಕೆಂದು, ಅದಕ್ಕೆ ಪೂರಕವಾದ ಕಥೆ ಮತ್ತು ಉಪಕಥೆಗಳನ್ನು ಪೋಣಿಸಿ ಅರ್ಥಪೂರ್ಣ, ಚಿಂತನಾರ್ಹ ವಿಚಾರಧಾರೆಯನ್ನು ಹರಿಸಿದರು.
ಮಾಹಿತಿ ಕಾರ್ಯಾಗಾರದ ನಂತರ ಮುಕ್ತ ಸಂವಾದ ನಡೆಸಲಾಯಿತು. ಘಟಕದ ಸದಸ್ಯರು ತಮ್ಮಲ್ಲಿದ್ದ ಕೆಲವೊಂದು ಸಂದೇಹಗಳಿಗೆ ಸಂಪನ್ಮೂಲ ವ್ಯಕ್ತಿಯಿಂದ ಸಮರ್ಪಕ ಮಾಹಿತಿಯನ್ನು ಪಡೆದುಕೊಂಡರು. ಇದೇ ಸಂದರ್ಭದಲ್ಲಿ 30.06.2024 ರಂದು ಘಟಕದ ಸದಸ್ಯರಿಗಾಗಿ ನಡೆಸಲಾದ ಕೆಸರು ಗದ್ದೆ ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕೆಸರುಗದ್ದೆ ಕ್ರೀಡೆ ನಡೆಸಲು ತಮ್ಮ ಕೃಷಿ ಮಾಡುವ ಗದ್ದೆಯಲ್ಲಿ ಅವಕಾಶ ಕಲ್ಪಿಸಿದ ಘಟಕದ ಮಾಜಿ ಕಾರ್ಯದರ್ಶಿ ಶ್ರೀ ಲತೀಶ್ ಪಾಪುದಡಿ ಮತ್ತು ಮನೆಯವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಕೆಸರುಗದ್ದೆ ಕ್ರೀಡೆಗೆ ವಿವಿಧ ರೀತಿಯಲ್ಲಿ ಸಹಕರಿಸಿದ ಕೆಲವೊಂದು ಸದಸ್ಯರಿಗೆ ಹೂವನ್ನು ನೀಡಿ ಗೌರವಿಸಲಾಯಿತು.
ಘಟಕದ ಕ್ರೀಡಾ ಕಾರ್ಯದರ್ಶಿ ಶ್ರೀಮತಿ ಸಾರಿಕಾ ಜೀವನ್ ಬೆರಿಕೆ ಮತ್ತು ಘಟಕದ ಕಾರ್ಯದರ್ಶಿ ಶ್ರೀ ಜೀವನ್ ಕೊಲ್ಯ ಬಹುಮಾನ ವಿತರಣೆಯ ಕಾರ್ಯಕ್ರಮ ನೆರವೇರಿಸಿದರು.
ಯುವವಾಹಿನಿ (ರಿ) ಕೊಲ್ಯ ಘಟಕದ ಅಧ್ಯಕ್ಷರು ಸರ್ವರನ್ನು ಸ್ವಾಗತಿಸಿ, ಸಂಪನ್ಮೂಲ ವ್ಯಕ್ತಿ, ಬಹುಮುಖ ಪ್ರತಿಭೆಯ ಶ್ರೀ ನರೇಶ್ ಕುಮಾರ್ ಸಸಿಹಿತ್ಲುರವರ ಸಾಧನೆಯ ಸಂಕ್ಷಿಪ್ತ ವಿವರಣೆಯನ್ನು ನೀಡಿದರು. ಘಟಕದ ಕಾರ್ಯದರ್ಶಿ ಶ್ರೀ ಜೀವನ್ ಕೊಲ್ಯ ಧನ್ಯವಾದ ಸಮರ್ಪಿಸಿದರು.