ಕೊಲ್ಯ: ಅಂದು ರವಿವಾರ, ಮೂಡಣದ ಆಗಸದ ತುಂಬಾ ಕರಿಮುಗಿಲು ಮುಸುಕಿತ್ತು. ಬಾನ ಭಾಸ್ಕರ ಮೋಡಗಳ ಮರೆಯಲ್ಲಿ ಎಲ್ಲೋ ಮರೆಯಾಗಿದ್ದ. ಧೋ….ಎಂದು ಸುರಿಯುತ್ತ ವರುಣ ದೇವ ವಸುಂಧರೆಯ ಮಡಿಲಿನಲ್ಲಿ ಜೋರಾಗಿ ಆರ್ಭಟಿಸುತ್ತಿದ್ದ. ಕೆಸರುಗದ್ದೆಯಲ್ಲಿ ಆಡಲು ಅಣಿಯಾಗಿದ್ದ ಯುವವಾಹಿನಿ ಸದಸ್ಯರು ಹಾಗೂ ಸದಸ್ಯರ ಮಕ್ಕಳಲ್ಲಿ ವರ್ಷಧಾರೆ ನಿಲ್ಲಬಹುದೆ ಎನ್ನುವ ಒಂದು ರೀತಿಯ ಆತಂಕ ಮನೆಮಾಡಿತ್ತು. ಕೊನೆಗೂ ಹತ್ತು ಗಂಟೆಯ ನಂತರ ವರುಣದೇವ ಶಾಂತನಾಗಿ ನಮ್ಮೆಲ್ಲರಲ್ಲೂ ಭರವಸೆಯ ಆಶಾಕಿರಣ ಮೂಡಿಸಿದ.
ಯುವವಾಹಿನಿ (ರಿ) ಕೊಲ್ಯ ಘಟಕದ ವತಿಯಿಂದ ದಿನಾಂಕ 30/06/2024 ಭಾನುವಾರದಂದು ಮಾಡೂರಿನ ಹಚ್ಚ ಹಸುರಿನ ಪ್ರಕೃತಿಯ ನಡುವೆ, ಜುಳು ಜುಳು ಹರಿಯುವ ತೊರೆಯ ಬದಿಯ ಪಾಪುದಡಿಯ ನಮ್ಮ ಸದಸ್ಯರ ತಂದೆಯವರಾದ ಶ್ರೀ ರಾಮ ಪೂಜಾರಿಯವರ ಕೊಳಕೆ ಗದ್ದೆಯಲ್ಲಿ ಕೆಸರು ಗದ್ದೆಯಲ್ಲಿ ಆಟದ ಚಾಲನೆಗೆ ನಾವೆಲ್ಲರು ಸಜ್ಜಾದೆವು. ಪ್ರಗತಿಪರ ಕೃಷಿಕರಾದ ಶ್ರೀ ರಾಮ ಪೂಜಾರಿಯವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿ ಶುಭ ಹಾರೈಸಿದರು.
ಪ್ರತಿಯೊಬ್ಬರ ಮೈ ಕೈ ಒಮ್ಮೆ ಕೆಸರಾಗಬೇಕು, ಕೆಸರಿನಲ್ಲಿ ಇರುವ ಔಷಧಿಯ ಗುಣಗಳು ಚರ್ಮ ವ್ಯಾಧಿ ತಡೆಗಟ್ಟಲು ಸಹಕಾರಿ, ಮಕ್ಕಳಿಗೆ ಗದ್ದೆ ಕೆಸರಿನ ಮಹತ್ವ ತಿಳಿಸಬೇಕು, ಹಳ್ಳಿಯ ಕೃಷಿ ವಿಚಾರಗಳು, ಹಳ್ಳಿಯ ಆಟಗಳ ಬಗ್ಗೆ ಮಕ್ಕಳಿಗೆ ವಿವರಿಸಬೇಕು ಎಂದು ತಿಳಿಸಿದರು.
ಯುವವಾಹಿನಿ (ರಿ) ಕೊಲ್ಯ ಘಟಕದ ಸದಸ್ಯರು, ಸದಸ್ಯರ ಕುಟುಂಬ ಬಂಧುಗಳು, ಸದಸ್ಯರ ಮಕ್ಕಳು ಹೀಗೆ ಹಿರಿಯ ಕಿರಿಯರೆಲ್ಲರೂ ಕೆಸರಿನಲ್ಲಿ ಎದ್ದು, ಬಿದ್ದು ಆಟವಾಡಿ ಪುಳಕಿತರಾದರು. ಮುಮ್ಮುಖ ಓಟ, ಹಿಮ್ಮುಖ ಓಟ, ಪಾಲೆ ಓಟ, ತೆಂಗಿನ ಕಾಯಿ ರಿಲೇ, ಹಗ್ಗ ಜಗ್ಗಾಟ, ತಿಪ್ಪಿ ಓಟ, ಉಪ್ಪು ಮೂಟೆ ಹೀಗೆ ಮಕ್ಕಳಿಗೆ, ಪುರುಷರಿಗೆ ಹಾಗೂ ಮಹಿಳೆಯರಿಗೆ ವಿವಿಧ ವಿಭಾಗಗಳಲ್ಲಿ ಆಟೋಟಗಳನ್ನು ನಡೆಸಲಾಯಿತು. ನಮ್ಮ ಘಟಕದ ಸದಸ್ಯರಾದ ಶ್ರೀ ಲತೀಶ್ ಪಾಪುದಡಿ ಇವರ ಹಗಲಿರುಳ ಶ್ರಮದಿಂದ ಸಿದ್ಧಗೊಂಡ ಕೆಸರಿನ ಗದ್ದೆಯಲ್ಲಿ ಓಡಾಡಿದ ಕ್ಷಣಗಳು ಅವಿಸ್ಮರಣೀಯ ಅನುಭವವನ್ನು ನೀಡಿತು.
ಭಾಗವಹಿಸಿದ ಸರ್ವರೂ ಕೇಸರ್ಡೊಂಜಿ ಗೊಬ್ಬು ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡು , ಘಟಕದ ಸದಸ್ಯರಾದ ಶ್ರೀ ಮಹೇಶ್ ಕನೀರುತೋಟ ಸಿದ್ಧಪಡಿಸಿದ ಕೃತಕ ಮಳೆಯ ಚಪ್ಪರದಡಿ ನೃತ್ಯ ಮಾಡಿ ಕುಣಿದು ಕುಪ್ಪಳಿಸಿದರು.
ಯುವವಾಹಿನಿ (ರಿ) ಕೊಲ್ಯ ಘಟಕದ ಅಧ್ಯಕ್ಷರಾದ ಶ್ರೀ ಲತೀಶ್ ಎಂ.ಸಂಕೋಳಿಗೆ ಸರ್ವರಿಗೂ ಸ್ವಾಗತ ಕೋರಿದರು, ಕಾರ್ಯದರ್ಶಿ ಶ್ರೀ ಜೀವನ್ ಕೊಲ್ಯ ಧನ್ಯವಾದ ಗೈದರು. ಘಟಕದ ಕ್ರೀಡಾ ನಿರ್ದೇಶಕರಾದ ಶ್ರೀಮತಿ ಸಾರಿಕಾ ಜೀವನ್ ಸ್ಪರ್ಧೆಯ ರೂಪು ರೇಷೆ ಸಿದ್ದಪಡಿಸಿದರು. ಘಟಕದ ಸದಸ್ಯರಾದ ಶ್ರೀ ಸಚಿನ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಸದಸ್ಯರಾದ ಶ್ರೀಮತಿ ಸವಿತಾ ಸಂತೋಷ್, ಶಿರಲ್ ಕೊಲ್ಯ, ಶಶಿಕಾಂತ್ ಪರ್ಯತ್ತೂರು, ಶಶಿಧರ್ ಮಾಡೂರು ಶೇಖರ್ ಮಾಡೂರು ಹಾಗೂ ಸರ್ವ ಸದಸ್ಯರು , ಸದಸ್ಯ ಬಂಧುಗಳು ಮತ್ತು ಮಾಜಿ ಅಧ್ಯಕ್ಷರುಗಳು ಸಹಕಾರ ನೀಡಿದರು.
ಕೇಂದ್ರ ಸಮಿತಿಯ ಸಂಘಟನಾ ನಿರ್ದೇಶಕರು ಹಾಗೂ ಘಟಕದ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಸುಂದರ್ ಸುವರ್ಣ, ಕೇಂದ್ರ ಸಮಿತಿಯ ನಾರಾಯಣ ಗುರು ತತ್ವ ಪ್ರಚಾರ ಹಾಗೂ ಅನುಷ್ಠಾನ ನಿರ್ದೇಶಕರು ಮತ್ತು ಘಟಕದ ಮಾಜಿ ಅಧ್ಯಕ್ಷರಾದ ಶ್ರೀ ಮೋಹನ್ ಮಾಡೂರ್, ಘಟಕದ ಸ್ಥಾಪಕ ಅಧ್ಯಕ್ಷರಾದ ಶ್ರೀ ಸುರೇಶ್ ಬಿಲ್ಲವ, ಘಟಕದ ಪ್ರಥಮ ಉಪಾಧ್ಯಕ್ಷರಾದ ಶ್ರೀಮತಿ ಸುಧಾ ಸುರೇಶ್, ದ್ವಿತೀಯ ಉಪಾಧ್ಯಕ್ಷರಾದ ಶ್ರೀ ನಿತಿನ್ ಕರ್ಕೇರ, ಘಟಕದ ಪದಾಧಿಕಾರಿಗಳು, ಸದಸ್ಯರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ಘಟಕದ ಸಂಘಟನಾ ನಿರ್ದೇಶಕರಾದ ಶ್ರೀ ಭಾಸ್ಕರ್ ಮಡ್ಯಾರ್ ಇವರ ನೇತೃತ್ವದಲ್ಲಿ, ಶಶಿಧರ್ ಮಾಡೂರು ಮತ್ತು ಮನೆಯವರ ಸಹಕಾರದೊಂದಿಗೆ ಶುಚಿ ರುಚಿಯಾದ ಮುಂಜಾನೆಯ ಉಪಹಾರ ಮತ್ತು ಮಧ್ಯಾಹ್ನದ ಸವಿ ಭೋಜನ ಮೈ ಮನಕ್ಕೆ ಖುಷಿ ನೀಡಿತು.
ಒಟ್ಟಿನಲ್ಲಿ ದಿನನಿತ್ಯ ಯಾಂತ್ರಿಕ ಜೀವನದಿಂದ ಬೇಸತ್ತು ದಣಿದಿದ್ದ ನಮ್ಮ ಸದಸ್ಯರಿಗೆ ಮತ್ತು ಸದಸ್ಯ ಬಂಧುಗಳಿಗೆ ಈ ಕೆಸರು ಗದ್ದೆಯ ಆಟದ ಹಳ್ಳಿಯ ಜನಪದ ಕ್ರೀಡೆಯಲಿ ಮಿಂದೆದ್ದು ಮತ್ತೆ ನಮ್ಮನ್ನು ಬಾಲ್ಯಕ್ಕೆ ಕರೆದೊಯ್ಯಿತು, ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಮನದ ನೋವನ್ನು ಮರೆಸಿ ಸಂತಸದ ಕಡಲಲ್ಲಿ ತೇಲಾಡಿಸಿತು.