ತೋನ್ಸೆ ಗರಡಿ ಮನೆ-ಮೂಡು ತೋನ್ಸೆ ಹೊನ್ನಪ್ಪಕುದ್ರು ಇಲ್ಲಿನ ದಿ| ನಾರಾಯಣ ಪೂಜಾರಿ-ಅಮ್ಮಣ್ಣಿ ಪೂಜಾರ್ತಿ ದಂಪತಿಗಳ ಸುಪುತ್ರರಾದ ಡಾ| ನವೀನ್ ಕುಮಾರ್ ತೋನ್ಸೆಯವರು ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ತೋನ್ಸೆ ನಿಡಂಬಳ್ಳಿ ಪ್ರಾಥಮಿಕ ಶಾಲೆಯಲ್ಲಿ ಪಡೆದು ಮಿಲಾಗ್ರಿಸ್ ಹೈಸ್ಕೂಲ್‌ನಲ್ಲಿ ಪ್ರೌಢ ಹಾಗೂ ಮಿಲಾಗ್ರಿಸ್ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪೂರೈಸಿದರು.
ಮಣಿಪಾಲ ವಿಶ್ವವಿದ್ಯಾನಿಲಯದ ಕಾಲೇಜ್ ಆಫ್ ಎಲೈಡ್ ಹೆಲ್ತ್ ಸೈನ್ಸ್ ಇಲ್ಲಿ ಬಿ.ಎಸ್‌ಸಿ (MLT) ಪದವಿ ಪಡೆದ ಡಾ| ತೋನ್ಸೆಯವರು ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ ಅನಾಟಮಿಯಲ್ಲಿ ಎಂ.ಎಸ್‌ಸಿ. ಪದವಿ ಪಡೆದರು. ಪ್ರೋ| ಪ್ರಮೋದ್ ಕುಮಾರ್ (RSA) ಇವರ ಮಾರ್ಗದರ್ಶನದಲ್ಲಿ ಮಣಿಪಾಲ ವಿಶ್ವವಿದ್ಯಾನಿಲಯದಿಂದ ತನ್ನ Ph.D ಪದವಿ ಪಡೆದ ಡಾ| ನವೀನ್ ತೋನ್ಸೆಯವರು ಕಳೆದ 6 ವರ್ಷಗಳಲ್ಲಿ ಸುಮಾರು 140 ಕ್ಕೂ ಮಿಕ್ಕಿ ಸಂಶೋಧನಾ ಲೇಖನಗಳನ್ನು ಬರೆದು ಅಂತಾರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಪ್ರಕಟಿಸಿದ್ದಾರೆ. ಅಷ್ಟೇ ಅಲ್ಲದೆ ಸಿಂಗಾಪುರ, ಮಲೇಶಿಯಾ, ಸ್ಕಾಟ್‌ಲ್ಯಾಂಡ್, ಅಸ್ಟ್ರೇಲಿಯಾ, ಥಾಲ್ಯಾಂಡ್ ಹಾಗೂ ಶ್ರೀಲಂಕಾದಲ್ಲಿ ಜರಗಿದ ವಿವಿಧ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿರುತ್ತಾರೆ.
ಶರೀರ ಶಾಸ್ತ್ರ (Anatomy) ಯಲ್ಲಿ ಭಾರತ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಜ್ಞಾನವನ್ನು MBBS ವಿದ್ಯಾರ್ಥಿಗಳಿಗೆ ನೀಡಿರುವ ಡಾ| ನವೀನ್ ಓರ್ವ ಪ್ರಯೋಗಾಲಯ ತಂತ್ರಜ್ಞರಾಗಿ, ಯುನಿವರ್ಸಿಟಿ ಆಫ್ ವೆಸ್ಟಿಂಡೀಸ್‌ಗೆ ನಿಯೋಜನೆಗೊಂಡು ಅನಾಟಮಿ ಪ್ರಾಧ್ಯಾಪಕರಾಗಿ ಸಂಶೋಧನಾ ಪ್ರವೃತ್ತಿಯಿಂದ ಮಾನವ ಶರೀರದ ಹೊಸ ಹೊಸ ಅವಿಷ್ಕಾರವನ್ನು ಮಾಡುತ್ತಾ ಗೌರವಾನ್ವಿತ ಸ್ಥಾನದಲ್ಲಿ ಯುವಜನ ಮಾರ್ಗದರ್ಶಿಯಾಗಿ ಸಮಾಜಕ್ಕೆ ಹೆಮ್ಮೆ ತಂದಿದ್ದು ನಮ್ಮ ಗೌರವ ಅಭಿನಂದನೆಗಳಿಗೆ ಸರಿಯಾದ ವ್ಯಕ್ತಿಯಾಗಿದ್ದಾರೆ. ಅವರನ್ನು ಅಭಿನಂದಿಸಲು ಯುವವಾಹಿನಿಯು ಹೆಮ್ಮೆ ಪಡುತ್ತದೆ.