ಮೂಡಬಿದ್ರೆ: ಗುರುಗಳ ಹಿಂಬಾಲಕರಾಗಿ ಬದುಕಿದರೆ ಸಾಲದು, ಅದರೊಂದಿಗೆ ಗುರುಗಳ ತತ್ವ ಆದರ್ಶಗಳನ್ನು ನಮ್ಮ ಜೀವನದಲ್ಲಿ ಎಷ್ಟರಮಟ್ಟಿಗೆ ಅಳವಡಿಸಿಕೊಂಡಿದ್ದೇವೆ ಎಂಬುವುದನ್ನು ಅರಿವುದು ಮುಖ್ಯ ಎಂದು ರಾಜ್ಯ ಹೈಕೋರ್ಟಿನ ನಿರ್ದೇಶಿತ ಹಿರಿಯ ನ್ಯಾಯವಾದಿ ಇರುವೈಲು ತಾರನಾಥ ಪೂಜಾರಿ ರವರು ಹೇಳಿದ್ದಾರೆ.
ಅರಿವು – 2024, ಸನ್ಮಾನ, ಯುವಸಿರಿ ಪ್ರಶಸ್ತಿ ಪುರಸ್ಕಾರ ಪ್ರಧಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ತಮ್ಮ ಅನಿಸಿಕೆಯನ್ನು ನೀಡಿದರು. ವಿದ್ಯೆಯ ಮೇಲೆ ಹಿಡಿದ ಸಾಧಿಸಲು ಎಷ್ಟು ಬುದ್ಧಿವಂತರಾದರೂ ಪ್ರಯೋಜನವಿಲ್ಲ. ಅದಕ್ಕಿಂತ ಮುಖ್ಯವಾಗಿ ಪರಿಶ್ರಮ, ಶಿಸ್ತು , ಪ್ರಯತ್ನ ಅಗತ್ಯ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ನಾನು ಇಂಥ ವೇದಿಕೆಯಿಂದ ಪ್ರೋತ್ಸಾಹವನ್ನು ಪಡೆದಿದ್ದೇನೆ. ವಿದ್ಯಾರ್ಥಿಗಳು ಸಿಕ್ಕ ಪ್ರೋತ್ಸಾಹವನ್ನು ಸದುಪಯೋಗ ಪಡೆದುಕೊಂಡರೆ ಯಶಸ್ಸು ಪಡೆಯಲು ಸಾಧ್ಯ, ವಿದ್ಯಾರ್ಥಿಗಳಿಗೆ ಯುವವಾಹಿನಿಯು ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು.
ಯುವವಾಹಿನಿ(ರಿ.) ಮೂಡಬಿದ್ರೆ ಘಟಕದ ಅಧ್ಯಕ್ಷ ಶಂಕರ್ ಕೋಟ್ಯಾನ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ಭಾನುವತಿ ಶೀನಪ್ಪ ಉದ್ಘಾಟಿಸಿ, ಶುಭ ಹಾರೈಸಿದರು. ಚಿಂತಕ ಹಾಗೂ ಶಿಕ್ಷಣ ತಜ್ಞ ಅರವಿಂದ ಚೊಕ್ಕಾಡಿ ಗುರು ಸಂದೇಶ ನೀಡಿ, ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ಶಿಕ್ಷಣದ ಅಭಿರುಚಿಯ ಬಗ್ಗೆ ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ಪೂರ್ವ ತಯಾರಿಯ ಮಾರ್ಗದರ್ಶನ ನೀಡಿದರು.
2023-24ನೇ ಸಾಲಿನ ಎಸ್.ಎಸ್.ಎಲ್.ಸಿ ವಿಭಾಗದಲ್ಲಿ ಶೇಕಡ 90 ಕಿಂತ ಅಧಿಕ ಅಂಕಗಳಿಸಿದ ಬಿಲ್ಲವ ಸಮಾಜದ 30 ವಿದ್ಯಾರ್ಥಿಗಳಿಗೆ ನಗದು ಸಹಿತ ಯುವಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಎಸ್ ಎಸ್ ಎಲ್ ಸಿ ಯಲ್ಲಿ ಮೂಡಬಿದ್ರೆ ತಾಲೂಕು ವ್ಯಾಪ್ತಿಯಲ್ಲಿ ಪ್ರಥಮ ಸ್ಥಾನ ಪಡೆದ ಮಾನ್ಯ ಎನ್ ಪೂಜಾರಿ ಹಾಗೂ ಪಿಯುಸಿಯ ಮೂರು ವಿಭಾಗಗಳಲ್ಲಿ ಅತ್ಯಧಿಕ ಅಂಕ ಪಡೆದ ಮೂವರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿಶುವಲ್ ಆರ್ಟ್ಸ್ ಪದವಿಯಲ್ಲಿ ದ್ವಿತೀಯ ಸ್ಥಾನ ಪಡೆದ ಶ್ರವಣ್ ಪೂಜಾರಿ, ಯುವವಾಹಿನಿ ಮೂಡಬಿದ್ರೆ ಘಟಕದ ಮಾಜಿ ಅಧ್ಯಕ್ಷ ಹರಿಪ್ರಸಾದ್ .ಪಿ., ಜಿಮ್ ಟ್ರೈನರ್ ಹಾಗೂ ರೆಫ್ರಿಯಾಗಿರುವ ಸ್ವಾಮಿ ಪ್ರಸಾದ್ ಇವರನ್ನು ಅಭಿನಂದಿಸಲಾಯಿತು.
ಯುವ ಸ್ಪಂದನ ಯೋಜನೆಯನ್ನು 2019ರಲ್ಲಿ ಆರಂಭಿಸಿ, ಮೂರು ವರ್ಷಗಳ ಕಾಲ ಅದರ ಯಶಸ್ವಿ ಅಧ್ಯಕ್ಷರಾಗಿದ್ದ ಜಗದೀಶ್ಚಂದ್ರ ಡಿ.ಕೆ ಇವರನ್ನು ಸನ್ಮಾನಿಸಲಾಯಿತು. ಇವರಿಗೆ ಆ ಸಮಯದಲ್ಲಿ ಸಹಕಾರ ನೀಡಿದ ಸಂತೋಷ್ ಪಣಪಿಲ ಹಾಗೂ ಶೋಭಾ ಸುರೇಶ್ ಇವರನ್ನು ಅಭಿನಂದಿಸಲಾಯಿತು.
ಈ ವರ್ಷ ಯುವಸ್ಪಂದನ ಸೇವಾ ಯೋಜನೆಯ ವಿದ್ಯಾರ್ಥಿ ವೇತನಕ್ಕೆ 60ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, ಸದ್ಯದಲ್ಲಿಯೇ ಯುವವಾಹಿನಿಯ ತಂಡ ವಿದ್ಯಾರ್ಥಿಗಳ ಮನೆಗೆ ತೆರಳಿ, ವಾಸ್ತವಾಂಶವನ್ನು ಅರಿತು ನೆರವು ನೀಡುವುದಾಗಿ ಪ್ರಕಟಿಸಲಾಯಿತು. ಮೂಡಬಿದ್ರೆ ಬಿಲ್ಲವ ಸಂಘದ ಅಧ್ಯಕ್ಷ ಸುರೇಶ್ ಕೆ ಪೂಜಾರಿ, ಅಶೋಕ್ .ಬಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯುವ ಸ್ಪಂದನ ಯೋಜನೆಯ ಅಧ್ಯಕ್ಷ ನವಾನಂದ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.
ಡಾ. ಯೋಗೇಶ್ ಕೈರೋಡಿ ಮತ್ತು ಪ್ರಭಾಕರ್ ಚಾಮುಂಡಿಬೆಟ್ಟ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಗಿರೀಶ್ ಕೋಟ್ಯಾನ್ ಧನ್ಯವಾದಗೈದರು.