ಕೊಲ್ಯ: ಯುವವಾಹಿನಿ(ರಿ.) ಕೊಲ್ಯ ಘಟಕದ ಆಶ್ರಯದಲ್ಲಿ ಒಂದು ದಿನದ ಕುಟುಂಬ ಮಿಲನಕ್ಕೆ 68 ಸದಸ್ಯ ಬಂಧುಗಳ ತಂಡ, ದಿನಾಂಕ 19-05-2024ನೇ ರವಿವಾರದಂದು ಬೆಳಿಗ್ಗೆ 7.30ಕ್ಕೆ ಬ್ರಹ್ಮಶ್ರೀ ನಾರಾಯಣಗುರು ಧ್ಯಾನ ಮಂದಿರದ ಮುಂದೆ ಪ್ರಾರ್ಥನೆಯನ್ನು ಸಲ್ಲಿಸಿ, ಹಿರಿಯರು, ಕಿರಿಯರು, ಮಕ್ಕಳೆಲ್ಲರ ಜೊತೆಗೆ ಬ್ರಹ್ಮಾವರದ ರಿಲ್ಯಾಕ್ಸ್ ಪಾರ್ಕ್ ಗೆ ಬಸ್ಸಿನಲ್ಲಿ ಪ್ರಯಾಣ ಬೆಳೆಸಿದೆವು.
ಘಟಕದ ಅಧ್ಯಕ್ಷರು ಪ್ರವಾಸಕ್ಕೆ ಬಂದಿದ್ದ ಸರ್ವ ಬಂಧುಗಳನ್ನೂ ಆತ್ಮೀಯವಾಗಿ ಸ್ವಾಗತಿಸಿದರು. ಪ್ರವಾಸದ ತಾಣ ತಲುಪುವವರೆಗೂ ಬಸ್ಸಿನಲ್ಲಿ ಹಾಡು, ಅಂತ್ಯಾಕ್ಷರಿಗಳ ರಸದೌತಣವನ್ನು ಯುವವಾಹಿನಿ ಬಂಧುಗಳು ಉಣಬಡಿಸಿದರು. ಈ ಗುಂಗಿನಲ್ಲೇ ತೇಲಾಡಿದ್ದ ಕೆಲವೇ ಕ್ಷಣಗಳಲ್ಲಿ ಬ್ರಹ್ಮಾವರದ ರಿಲ್ಯಾಕ್ಸ್ ಪಾರ್ಕ್ ಬಂದೇ ಬಿಟ್ಟಿತು.
ಬಸ್ಸಿನಿಂದ ಇಳಿಯುತ್ತಿದ್ದಂತೆ, ಮುಂಜಾನೆಯ ಮೋಡ ಕವಿದ ವಾತಾವರಣದ ನಡುವೆ ತುಂತುರು ಮಳೆಹನಿಯ ಸಿಂಚನ ನಮ್ಮೆಲ್ಲರಿಗೂ ಸ್ವಾಗತವನ್ನು ನೀಡಿತು. ಬೆಳಗಿನ ಲಘು ಉಪಾಹಾರವನ್ನು ಸೇವಿಸಿದ ನಂತರ, ಇದ್ದಕ್ಕಿದ್ದಂತೆ ವರುಣ ದೇವನ ತೀವ್ರತೆ ಸ್ವಲ್ಪ ಮಟ್ಟಿಗೆ ಜೋರಾದಾಗ ಒಂದು ಕ್ಷಣ ಆತಂಕ ಎದುರಾದರೂ, ಕ್ಷಣ ಮಾತ್ರದಲ್ಲಿ ಮಳೆ ಮಾಯವಾದಾಗ ಎಲ್ಲರ ಮೊಗದಲ್ಲೂ ಖುಷಿಯ ಅಲೆ ಎದ್ದು ಕಾಣುತ್ತಿತ್ತು.
ಸುಂದರವಾದ ಕಡಲ ತೀರದ ಬದಿಯಲ್ಲಿ ನಮ್ಮನ್ನು ರಿಲ್ಯಾಕ್ಸ್ ಪಾರ್ಕ್ ಗೆ ಕೊಂಡೊಯ್ಯಲು ಅಂದ ಚಂದದ ಬೋಟು ನಮಗಾಗಿ ಕಾಯುತ್ತಿತ್ತು. ನಾವು ಎರಡು ತಂಡವಾಗಿ ಬೋಟಿನಲ್ಲಿ ಸಾಗಿ, ನದಿಯ ಮೂಲಕ ನಾಲ್ಕೂ ಸುತ್ತಲೂ ನೀರಿನಿಂದ ಆವರಿಸಿರುವ ರಿಲ್ಯಾಕ್ಸ್ ಪಾರ್ಕ್ ಗೆ ಬಂದಿಳಿದೆವು.
ಅಬ್ಬಾ! ಒಂದು ಕ್ಷಣ ಅಲ್ಲಿಯ ದೃಶ್ಯಗಳನ್ನು ಕಂಡು ಮೂಕವಿಸ್ಮಿತರಾದೆವು. ಬ್ರಹ್ಮನ ಸೃಷ್ಟಿಯ ಸುಂದರ ಲೋಕವೊಂದು ನಮ್ಮ ಕಣ್ಮುಂದೆ ತೆರೆದಂತಿತ್ತು. ಸುತ್ತಲೂ ನೀರಿನಿಂದ ಆವರಿಸಿರುವ ಆ ದ್ವೀಪದಲ್ಲಿ ಪ್ರಕೃತಿ ಸಹಜವಾದ ದೃಶ್ಯಗಳು ಮನಮೋಹಕವಾಗಿತ್ತು.
ರಿಲ್ಯಾಕ್ಸ್ ಪಾರ್ಕ್ ನ ಮ್ಯಾನೇಜರ್ ನಮ್ಮನ್ನು ಆತ್ಮೀಯವಾಗಿ ಬರಮಾಡಿಕೊಂಡು, ಮನೋರಂಜನೆಯ ಆಟವನ್ನು ಆಡಿಸುವ ಮೂಲಕ ಎಲ್ಲರಲ್ಲೂ ನವೋಲ್ಲಾಸವನ್ನು ತುಂಬಿದರು.
ಜಾರುಬಂಡಿಗಳು, ತೂಗುಯ್ಯಾಲೆಗಳು, ಹಗ್ಗದ ಮೇಲಿನ ನಡಿಗೆ, ಬಲೆಯೊಳಗೆ ಹಾರಾಟ, ಚೀರಾಟ ಎಲ್ಲವೂ ನಮ್ಮನ್ನು ಬಾಲ್ಯದ ಸುಂದರ ಲೋಕಕ್ಕೆ ಕರೆದೊಯ್ಯಿತು. ಮಕ್ಕಳ ಖುಷಿಗಂತೂ ಎಲ್ಲೆಯೇ ಇರಲಿಲ್ಲ. ಕಿಂದರಿಜೋಗಿಯ ಜೊತೆ ಚಿಣ್ಣರು ಕುಣಿದಾಟ, ನಲಿದಾಟವಾಡಿದಂತೆ ನಮ್ಮ ಬಂಧುಗಳು ಹಿರಿಯರು, ಕಿರಿಯರೆನ್ನದೆ ಸಣ್ಣ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಸಂಭ್ರಮಪಟ್ಟರು.
ಮನೋರಂಜನೆಗೆ ಆಡಿದ ಮಹಿಳೆಯರ ತ್ರೋಬಾಲ್ ಪಂದ್ಯಾಟದಲ್ಲಿ, ನಮ್ಮಂತೆ ಪ್ರವಾಸಕ್ಕೆ ಬಂದಿರುವ ಬ್ರಹ್ಮಾವರದ ಮತ್ತೊಂದು ಮಹಿಳೆಯರ ತಂಡದ ವಿರುದ್ಧ ಆಡಿದ ನಮ್ಮ ಮಹಿಳೆಯರ ಹುರುಪು, ಉತ್ಸಾಹ ಒಂದು ಹೊಸ ತ್ರೋಬಾಲ್ ತಂಡವನ್ನೆ ಕಟ್ಟಲು ನಾಂದಿ ಹಾಡಿದಂತಿತ್ತು.
ಪುರುಷರ ಮತ್ತು ಮಹಿಳೆಯರ ಹಗ್ಗ ಜಗ್ಗಾಟ ಪಂದ್ಯದ ಮೋಜು ನೋಡಲು ತುಂಬಾ ಖುಷಿಯಾಗುತ್ತಿತ್ತು. ಮೂಸಂಬಿಯನ್ನು ಹಣೆಯ ಮೇಲೆ ಇಟ್ಟು ಓಡುವ ಗಮ್ಮತ್ತು ನಗೆ ಉಕ್ಕಿಸುತ್ತಿತ್ತು. ರಂಗು ರಂಗಿನ ರಿಂಗಿನ ಆಟ ಮನಸ್ಸಿಗೆ ಮುದ ನೀಡಿತ್ತು.
ಮಧ್ಯಾಹ್ನದ ಊಟದ ನಂತರ, ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು, ಕೆಲವರು ನದಿ ನೀರಿಗಿಳಿದು ಈಜುತ್ತಾ, ಮುಳುಗುತ್ತಾ ಸಂತಸ ಪಟ್ಟರು. ಮತ್ತೆ ಕೆಲವರು ಪಾರ್ಕಿನ ಸುತ್ತಲೂ ಸುತ್ತಾಡಿಕೊಂಡು, ನಲಿದಾಡಿದರು.
ನೀರಿಗೆ ಇಳಿದು ಆಟವಾಡಿದ ಮಕ್ಕಳ ಖುಷಿಗೆ ಪಾರವೇ ಇರಲಿಲ್ಲ. ಮಕ್ಕಳೊಂದಿಗೆ ದೊಡ್ಡವರು ಮಕ್ಕಳಾಗಿ ಮಕ್ಕಳಾಟ ಮಾಡುತ್ತಿದ್ದ ದೃಶ್ಯ ನೋಡಲು ಖುಷಿ ಕೊಡುತ್ತಿತ್ತು. ಬೋಟಿನಲ್ಲಿ ಹಾಯಾಗಿ ವಿಹರಿಸುತ್ತಿದ್ದ ಬಂಧುಗಳನ್ನು, ಬೋಟನ್ನು ಮಗುಚಿ ನೀರಿಗೆ ಬೀಳಿಸುವ ಹುಚ್ಚಾಟ, ತುಂಟಾಟ ಎಲ್ಲವೂ ಮತ್ತೆ ಮತ್ತೆ ಬಾಲ್ಯವನ್ನು ನೆನಪಿಸುತ್ತಿತ್ತು. ಈ ಮಧ್ಯೆ ನೀರಿಗೆ ಬಿದ್ದು ಮೂಗಿನೊಳಗೆ ನೀರು ಹೋಗಿ ಅರೆಕ್ಷಣ ಕಷ್ಟಪಟ್ಟವರ ಸ್ಥಿತಿ ಅಯ್ಯೋ ಪಾಪ ಅನಿಸಿದರೂ ಮೋಜಿನಾಟದಲ್ಲಿ ಅವೆಲ್ಲವೂ ಮಾಮುಲಿ ಅನಿಸುತ್ತಿತ್ತು.
ನೀರಿನಲ್ಲಿ ಆಟವಾಡಿದ ನಂತರ, ರೈನ್ ಡ್ಯಾನ್ಸ್ (ಮಳೆ ನೃತ್ಯ) ಎಲ್ಲರಿಗೂ ಖುಷಿ ಕೊಟ್ಟಿತು. ಒಂದೊಂದು ಹಾಡಿಗೂ ಬಂಧುಗಳು, ಮಕ್ಕಳು ಕುಣಿದು ಕುಪ್ಪಳಿಸಿದ ಚಿತ್ರಣ ಮನೋಜ್ಞವಾಗಿತ್ತು.
ರೈನ್ ಡ್ಯಾನ್ಸ್ ನಂತರ, ಎಲ್ಲರೂ ಶುಚಿರ್ಭೂತರಾಗಿ ಸಂಜೆಯ ಉಪಹಾರವನ್ನು ಸೇವಿಸಿದೆವು. ಬಾನ ಭಾಸ್ಕರ ಪಡುವಣ ಶರಧಿ ತೀರಕ್ಕೆ ಆಗಮಿಸುತ್ತಿದ್ದಂತೆ, ನದಿ ತೀರದಿಂದ ನಮ್ಮ ನಿರ್ಗಮನದ ಬಾಗಿಲುಗಳು ತೆರೆದುಕೊಳ್ಳಲು ಪ್ರಾರಂಭವಾಯಿತು. ಪಾರ್ಕಿನ ಮ್ಯಾನೇಜರ್ ನದಿ ತೀರಕ್ಕೆ ಭೇಟಿ ನೀಡಿದ ಯುವವಾಹಿನಿ (ರಿ) ಕೊಲ್ಯ ಘಟಕಕ್ಕೆ ಪ್ರೀತಿ ಪೂರ್ವಕ ಧನ್ಯವಾದಗಳನ್ನು ನೀಡಿದರು. ನಮ್ಮ ಘಟಕದ ಅಧ್ಯಕ್ಷರು ಪಾರ್ಕಿನ ಮ್ಯಾನೇಜರ್ ಮತ್ತು ಸಿಬ್ಬಂದಿ ವರ್ಗದವರಿಗೆ ಹೃದಯಸ್ಪರ್ಶಿ ಧನ್ಯವಾದಗಳನ್ನು ಅರ್ಪಿಸಿದರು. ಈ ಕಿರುಪ್ರವಾಸವನ್ನು ಯಶಸ್ವಿಯಾಗಿ ಆಯೋಜನೆ ಮಾಡಿ, ಸಮರ್ಥ ರೀತಿಯಲ್ಲಿ ಮುನ್ನಡೆಸಿದ ಘಟಕದ ಕ್ರೀಯಾಶೀಲ ಕಾರ್ಯದರ್ಶಿ ಶ್ರೀ ಜೀವನ್ ಕೊಲ್ಯರವರಿಗೆ ಈ ಸಂದರ್ಭದಲ್ಲಿ ವಿಶೇಷವಾದ ಧನ್ಯವಾದಗಳನ್ನು ನೀಡಲಾಯಿತು.
ದಿನದ ಕಾಯಕವನ್ನು ಮುಗಿಸಿದ ದಿನಮಣಿಯು ವಿಶ್ರಮಿಸಲು ಅಣಿಯಾಗುತ್ತಿದ್ದಂತೆ, ನಾವೆಲ್ಲರೂ ನದಿಯ ತೀರದಿಂದ ಭಾರವಾದ ಹೆಜ್ಜೆಯೊಂದಿಗೆ ಮರಳ ಮೇಲೆ ಹೆಜ್ಜೆಯಿಡುತ, ಪಾರ್ಕಿನ ಸಿಬ್ಬಂದಿ ವರ್ಗದವರಿಗೆ ಕೈಬೀಸಿಕೊಂಡು ಬೋಟಿನತ್ತ ಮರಳಿದೆವು. ಗಜಗಾಮಿನಿಯಂತೆ ನೀರ ಮೇಲೆ ಸಾಗಿ ಬಂದ ಬೋಟು ನಮ್ಮನ್ನು ಸ್ವಸ್ಥಾನಕ್ಕೆ ತೆರಳಲು ಮರಳಿ ತೀರಕ್ಕೆ ತಂದುಬಿಟ್ಟಿತು. ಒಂದು ದಿನದ ಮಧುರ ಕ್ಷಣಗಳನ್ನು ಮೆಲುಕು ಹಾಕುತ್ತಾ, ಭಾರವಾದ ಹೃದಯದೊಂದಿಗೆ ನಾವು ಮತ್ತೆ ವಾಸ್ತವಕ್ಕೆ ಮರಳಿ ಮನೆಯತ್ತ ಸಂಚರಿಸಿದೆವು. ನಾಲ್ಕು ದಿನಗಳ ಈ ಬದುಕ ಸಂತೆಯಲ್ಲಿ ನಿತ್ಯವೂ ಕಾಡುತ್ತಿರುವ ಮನಸ್ಸಿನ ನೋವಿಗೆ ಇಂತಹ ಪ್ರವಾಸಗಳು ಉಪಶಮನದ ಜೌಷಧಿಯಾಗಿ ಮತ್ತೆ ಮತ್ತೆ ಸಿಗುವಂತಾಗಲಿ ಎನ್ನುವ ಆಶಯದೊಂದಿಗೆ ಎಲ್ಲರಿಗೂ ವಂದನೆಗಳು.