ಕೊಲ್ಯ: ಬೇಸಿಗೆ ಶಿಬಿರಗಳು ಮಕ್ಕಳ ಸೃಜನಾತ್ಮಕ ಚಟುವಟಿಕೆಗಳಿಗೆ ಸಹಕಾರಿಯಾಗಿದೆ. ಮಕ್ಕಳು ಮೊಬೈಲ್, ಟಿವಿಯಿಂದ ಹೊರಗಡೆ ಬಂದು ಬೇರೆ ಬೇರೆ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಹವ್ಯಾಸ ಉತ್ತಮಪಡಿಸಲು ಸಹಕಾರಿಯಾಗಲಿದೆ ಎಂದು ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ .ಕೆ. ಪೂಜಾರಿ ಹೇಳಿದರು.
ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ಯುವವಾಹಿನಿಯ ಕೊಲ್ಯ ಘಟಕದ ನೇತೃತ್ವದಲ್ಲಿ, ಬಿಲ್ಲವ ಸೇವಾ ಸಮಾಜ ಟ್ರಸ್ಟ್(ರಿ.) ಕೊಲ್ಯ ಇವರ ಸಹಕಾರದಲ್ಲಿ, ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇವರ ಪ್ರಾಯೋಜಕತ್ವದಲ್ಲಿ 15-05-2014 ರಿಂದ 18-05-2024ರ ವರೆಗೆ ನಾಲ್ಕು ದಿನಗಳ ಕಾಲ ಬಿಲ್ಲವ ಸಂಘ ಕೊಲ್ಯ ಇಲ್ಲಿ ನಡೆದ ಮಕ್ಕಳ ಬೇಸಿಗೆ ಶಿಬಿರದ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಯಾದ ಸಚಿನ್ ಹೆಗ್ಡೆ ಶಿಬಿರದ ನೇತೃತ್ವ ವಹಿಸಿದ ಯುವವಾಹಿನಿ ಘಟಕಕ್ಕೆ ಅಭಿನಂದನೆ ಸಲ್ಲಿಸಿದರು. ಇಂತಹ ಶಿಬಿರಗಳಿಂದ ಮಕ್ಕಳಲ್ಲಿ ಉತ್ತಮ ಮೌಲ್ಯ, ಕೌಶಲ್ಯ ಬೆಳೆಯಲು ಸಾಧ್ಯ, ಯುವವಾಹಿನಿಯು ಇಂತಹ ಅರ್ಥಪೂರ್ಣ ಶಿಬಿರಗಳನ್ನು ಇನ್ನೂ ಹೆಚ್ಚು ಆಯೋಜಿಸಲಿ ಎಂದು ಕರೆ ನೀಡಿದರು. ಶಿಬಿರದಲ್ಲಿ ಪೇಪರ್ ಕ್ರಾಫ್ಟ್, ಮುಖವಾಡ ತಯಾರಿ, ಚಿತ್ರ ಕಲೆ, ಹದಿಹರೆಯದ ಸಮಸ್ಯೆ, ಹೂಜೋಡಣೆ, ತ್ಯಾಜ್ಯ ವಿಲೇವಾರಿ, ಅಜ್ಜಿಕತೆ, ಬೆಂಕಿ ಇಲ್ಲದೆ ಅಡುಗೆ, ಕಸದಿಂದ ರಸ ಹೀಗೆ ವಿವಿಧ ವಿಷಯದಲ್ಲಿ ಬೇರೆ ಬೇರೆ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು.
ಕೊಲ್ಯ ಯುವವಾಹಿನಿ ಘಟಕದ ಪ್ರಥಮ ಉಪಾಧ್ಯಕ್ಷರಾದ ಸುಧಾ ಸುರೇಶ್, ಘಟಕದ ನಿಕಟ ಪೂರ್ವ ಅಧ್ಯಕ್ಷರಾದ ಸುಂದರ್ ಸುವರ್ಣ, ಬ್ಯಾಂಕ್ ಒಫ್ ಬರೋಡ ಮಂಗಳೂರು ಇದರ ಸ್ಥಾಪಕ ಶಾಖೆಯ ಅಧಿಕಾರಿ ಮೋಹನ್ ಆಳ್ವ, ಕೇಂದ್ರ ಸಮಿತಿಯ ಪ್ರಚಾರ ನಿರ್ದೇಶಕರಾದ ಪೃಥ್ವಿ ರಾಜ್ ಉಪಸ್ಥಿತರಿದ್ದರು. ಶಿಬಿರದ ಅನಿಸಿಕೆಯನ್ನು ಮಕ್ಕಳು, ಪೋಷಕರು ಸಭೆಯಲ್ಲಿ ಹಂಚಿದರು. ಇದೇ ಸಂದರ್ಭದಲ್ಲಿ ಮಕ್ಕಳು ಮಾಡಿದ ಕಲಾಕೃತಿ, ಆಹಾರ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಅದ್ವಿತ್ ಕಾರ್ಯಕ್ರಮ ನಿರೂಪಿಸಿ, ಹಿತಾಶ್ರೀ ಸ್ವಾಗತಿಸಿ, ಪ್ರಣವಿ ಧನ್ಯವಾದಗೈದರು. ಯುವವಾಹಿನಿ ಘಟಕದ ಕಾರ್ಯದರ್ಶಿ ಜೀವನ್ ಕೊಲ್ಯ ಹಾಗೂ ಮಂಗಳೂರು ವಿಶ್ವ ವಿದ್ಯಾಲಯ ಕೊಣಾಜೆ ಇಲ್ಲಿಯ ಸಮಾಜ ಕಾರ್ಯ ವಿದ್ಯಾರ್ಥಿಗಳು ಶಿಬಿರದ ಚಟುವಟಿಕೆ ಸಂಯೋಜಿಸಿದರು.