ಮಂಗಳೂರು: ಪಣಂಬೂರು-ಕುಳಾಯಿ ಘಟಕದ ವತಿಯಿಂದ ಶಿವಗಿರಿ ಯಾತ್ರೆಯು ದಿನಾಂಕ 27-04-2024 ರಿಂದ 30-04-2024 ವರೆಗೆ ನಡೆಯಿತು. 27-04-2024 ಶನಿವಾರ ಸಂಜೆ 6 ಗಂಟೆಗೆ 46 ಯಾತ್ರಾರ್ಥಿಗಳು ಮಾವೇಲಿ ರೈಲಿನ ಮೂಲಕ ಪ್ರಯಾಣ ಬೆಳೆಸಿ, 28 ರಂದು ಬೆಳಗ್ಗೆ ವರ್ಕಳ ಶಿವಗಿರಿಗೆ ತಲುಪಿದರು. ಬ್ರಹ್ಮ ಶ್ರೀ ನಾರಾಯಣ ಗುರುಗಳು ಸ್ಥಾಪಿಸಿದ ಶಾರದಾ ಮಾತೆಯ ದರ್ಶನ ಪಡೆದು ಪೂಜೆಯನ್ನು ನೆರವೇರಿಸಿ, ಕ್ಷೇತ್ರದಲ್ಲಿ, ಜರಗುತ್ತಿರುವ ಅಕ್ಷರಾಭ್ಯಾಸ, ಸರಳ ವಿವಾಹ ಪದ್ದತಿಯ ವಿಚಾರವನ್ನು ತಿಳಿದುಕೊಂಡೆವು. ನಂತರ ಗುರುಗಳು ವಾಸಿಸಿದ ಮನೆಯನ್ನು ಸಂದರ್ಶಸಿ ಅವರು ಉಪಯೋಗಿಸುತಿದ್ದ ಪರಿಕರಗಳನ್ನು ವೀಕ್ಷಣೆ ಮಾಡಿ, ಶಿವಗಿರಿಯ ಮಹತ್ವವನ್ನು ಎಲ್ಲರಿಗೂ ತಿಳಿಯಪಡಿಸಲಾಯಿತು.
ಶಿವಗಿರಿ ಕ್ಷೇತ್ರದ ಸಮೀಪವೇ ಇರುವ, ದೇಶ ವಿದೇಶಗಳಲ್ಲಿ ಅಧ್ಯಯನ ಮಾಡಿದ ಗುರುಗಳ ಶಿಷ್ಯ ನಟರಾಜ ಗುರುಗಳ ಪುಸ್ತಕ ಸಂಗ್ರಹಣ ಕೇಂದ್ರಕ್ಕೆ ಭೇಟಿ ನೀಡಿ ನಾರಾಯಣ ಗುರುಗಳ ಬಗ್ಗೆ ಸಾಕಷ್ಟು ಮಾಹಿತಿ ತಿಳಿದು ಕೊಳ್ಳುವಂತಾಯಿತು .
ಮಧ್ಯಾಹ್ನ 1:00 ಗಂಟೆಗೆ ಗುರುಗಳ ಜನ್ಮಸ್ಥಳ ಚಂಬಳಾoತಿಗೆ ಪ್ರಯಾಣ ಬೆಳೆಸಿ, ಗುರುಗಳು ವಾಸಿಸುತಿದ್ದ ಮನೆಯನ್ನು ವೀಕ್ಷಿಸಿದರು. ಅಲ್ಲಿ ಹಳೆಯ ಕಾಲದ ಮನೆಯು ಯಾವುದೇ ಆಧುನಿಕತೆಯ ಶೈಲಿಗೆ ನವೀಕರಿಸದೆ, ಮೂಲ ಮನೆಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ ಜೋಪಾನವಾಗಿ ಇಟ್ಟಿರುವುದನ್ನು ಗಮನಿಸಿದರು.
ನಂತರ ಪ್ರಯಾಣ ನಾರಾಯಣ ಗುರುಗಳು ಸ್ಥಾಪಿಸಿದ ಕುನ್ನುoಪಾರ ಸುಬ್ರಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿ ಚರ್ಮದ ಕಾಯಿಲೆಗೆ ಸಂಬಂಧಿಸಿದಂತೆ ವಿಶೇಷ ಪೂಜೆ ಮಾಡಿಸಿ, ನಂತರ ಸಹ ಭೋಜನ. ಅಲ್ಲೇ ತುಸು ವಿಶ್ರಾಂತಿ ಪಡೆದರು.
ನಂತರ ಗುರುಗಳು ಪ್ರಪ್ರಥಮವಾಗಿ ತನ್ನ ದಿವ್ಯ ಹಸ್ತದಲ್ಲಿ ಸ್ಥಾಪಿಸಿದ ಅರವಿಪುರಂ ಶಿವ ದೇವಸ್ಥಾನಕ್ಕೆ ಭೇಟಿ ನೀಡಿ, ಅಲ್ಲೇ ಪಕ್ಕದಲ್ಲಿರುವ ನೆಯ್ಯಾರ್ ನದಿಯಲ್ಲಿ ಸ್ನಾನ ಮಾಡಿ, ಬ್ರಹ್ಮ ಶ್ರೀ ನಾರಾಯಣ ಗುರುಗಳು ಸ್ಥಾಪಿಸಿದ ಶಿವಲಿಂಗ ದರ್ಶನ ಮಾಡಿದರು ಅಲ್ಲಿ ಯಾವುದೇ ಜಾತಿ ಧರ್ಮಗಳಿಲ್ಲದೆ, ಎಲ್ಲಾ ವರ್ಗದವರನ್ನು ತನ್ನ ಶಿಷ್ಯರಾಗಿ ಸ್ವೀಕರಿಸಿದ ಬಗ್ಗೆ ದಾಖಲೆಗಳನ್ನು ವೀಕ್ಷಿಸಿದರು. ಅದಲ್ಲದೇ, ಸಾಮಾಜಿಕ ಚಿಂತನೆಯ ಬಗ್ಗೆ ಅವರು ಕೈಗೊಂಡ ಹಲವಾರು ವಿಚಾರಗಳನ್ನು ತಿಳಿದುಕೊಂಡು, ಸಂಜೆ ಕನ್ಯಾಕುಮಾರಿ ಕ್ಷೇತ್ರಕ್ಕೆ ದರ್ಶನ ಮಾಡಿದ ನಂತರ ತಂಡ ಮರುತ್ವ ಮಲೈ ಆಶ್ರಮಕ್ಕೆ ಪ್ರಯಾಣ ಬೆಳಿಸಿ ಅಲ್ಲಿ ರಾತ್ರಿ ತಂಗಿದರು.
29 ರಂದು ಬೆಳಗ್ಗೆ 5:00 ಗಂಟೆಗೆ ಆಶ್ರಮದಲ್ಲಿ ನಾರಾಯಣ ಗುರುಗಳ ಸ್ತೋತ್ರ ಪಠಣ, ಸತ್ಸಂಗ, ಹಾಗೂ ಭಜನೆಯಲ್ಲಿ ಪಾಲ್ಗೊಂಡು ಮಂಗಳಾರತಿಯ ನಂತರ 6:00 ಗಂಟೆಗೆ ಮರುತ್ವ ಮಲೈ ಬೆಟ್ಟವನ್ನು ಏರಿದೆವು. ಎಲ್ಲಾ ಯಾತ್ರಾರ್ಥಿಗಳು ಉತ್ಸಾಹದಿಂದ ಬೆಟ್ಟವನ್ನು ಏರಿದರು. ಅಲ್ಲಿ ಗುರುಗಳು ಲೋಕ ಕಲ್ಯಾಣಕ್ಕಾಗಿ ಆರು ವರ್ಷಗಳ ಕಾಲ ತಪಸ್ಸು ಮಾಡಿದ ಗುಹೆಯನ್ನು ಸಂದರ್ಶಿಸಿ. ಅಲ್ಲೇ ಸಮೀಪವೇ ಇದ್ದ ಹನುಮಾನ್ ದೇವಾಲಯದಲ್ಲಿ ಪೂಜೆ ನೆರವೇರಿಸಿದೆವು. ಎಲ್ಲಾ ಯಾತ್ರಾರ್ಥಿಗಳು ಬೆಟ್ಟದಿಂದ ಕೆಳಗೆ ಇಳಿದು ಬೆಳಗಿನ ಉಪಹಾರ ಮುಗಿಸಿ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದರ ಧ್ಯಾನ ಕೇಂದ್ರಕ್ಕೆ ನಾವೆಯ ಮೂಲಕ ಭೇಟಿ ನೀಡಿದರು. ಮಧ್ಯಾಹ್ನ 2:00 ಗಂಟೆಗೆ ಮರುತ್ವ ಮಲೈ ಆಶ್ರಮದಲ್ಲಿ ಮದ್ಯಾಹ್ನದ ಮಹಾಪೂಜೆ ನಂತರ ಅನ್ನ ಪ್ರಸಾದ ಸ್ವೀಕರಿಸಿ, 3:30 ಶ್ರೀ ಅನಂತ ಪದ್ಮನಾಭ ದೇವಾಲಯಕ್ಕೆ ಭೇಟಿ ನೀಡಿ ನಂತರ ಮಾವೇಲಿ ಎಕ್ಸ್ ಪ್ರೆಸ್ ರೈಲಿನ ಮೂಲಕ ಪ್ರಯಾಣ ಮಾಡಿ ಮಂಗಳೂರಿಗೆ ವಾಪಸ್ಸಾದರು.
ಈ ಯಾತ್ರೆಯಿಂದ ನಾರಾಯಣ ಗುರುಗಳ ಬಗ್ಗೆ ಓದಿನಲ್ಲಿ ತಿಳಿದಿದ್ದರೂ, ಕೆಲವೊಂದು ವಿಚಾರ-ಧಾರೆಗಳನ್ನು ಸ್ಥಳ ವೀಕ್ಷಣೆಯ ಮೂಲಕ ಯಾತ್ರಾರ್ಥಿಗಳು ತಿಳಿದುಕೊಂಡರು. ಯಾತ್ರೆಯ ಸಂಚಾಲಕರಾಗಿ ಘಟಕದ ಮಾಜಿ ಅಧ್ಯಕ್ಷರುಗಳಾದ ರವಿಚಂದ್ರ ಕೋಡಿಕಲ್ ಮತ್ತು ಸುರೇಶ್ ಪೂಜಾರಿ ಮತ್ತು ಸಹ ಸಂಚಾಲಕರಾಗಿ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ಯಶವಂತ್ ಕುಮಾರ್ ವಹಿಸಿದ್ದರು. ಯುವವಾಹಿನಿ(ರಿ.) ಮಂಗಳೂರು ಘಟಕದ ಸದಸ್ಯರಾದ ಸದಾನಂದ ಪೂಜಾರಿಯವರು ನಾರಾಯಣ ಗುರುಗಳ ಬಗ್ಗೆ ಮಹತ್ವ ವಿಚಾರದಾರೆಯನ್ನು ಯಾತ್ರಾರ್ಥಿಗಳಿಗೆ ತಿಳಿಯಪಡಿಸಿದರು.
ಈ ಯಾತ್ರೆಯಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ತತ್ವಾದರ್ಶದಂತೆ, ಯಾವುದೇ ಜಾತಿಗೆ ಸೀಮಿತವಾಗಿರದೇ ಇತರ ಸಮಾಜದವರಿಗೂ ಗುರುಗಳ ಬಗ್ಗೆ ತಿಳಿಯ ಪಡಿಸುವ ನಿಟ್ಟಿನಲ್ಲಿ ಬಿಲ್ಲವ, ಬಂಟ, ಕ್ರೈಸ್ತ, ಹೀಗೆ ಬೇರೆ ಬೇರೆ ಸಮುದಾಯದ ಒಟ್ಟು 46 ಸದಸ್ಯರು ಯತ್ರಾರ್ಥಿಗಳಾಗಿ ಪಾಲ್ಗೊಂಡಿದ್ದರು.