ಮೂಡುಬಿದಿರೆ: ಕಣ್ಣುಗಳು ನಾವು ಹೊಂದಿರುವ ಅತ್ಯಂತ ಸೂಕ್ಷ್ಮ ಅಂಗಗಳಲ್ಲಿ ಒಂದಾಗಿದೆ. ಹೆಚ್ಚಿದ ಪರದೆಯ ಸಮಯ, ಮಾಲಿನ್ಯ ಮತ್ತು ಅನಾರೋಗ್ಯಕರ ಜೀವನಶೈಲಿಯಿಂದಾಗಿ, ಕಳಪೆ ಕಣ್ಣಿನ ಆರೋಗ್ಯವು ಸಾಮಾನ್ಯ ಸಮಸ್ಯೆಯಾಗಿದೆ. ದೃಷ್ಟಿಹೀನತೆ ಮೂಲಭೂತ ದೈನಂದಿನ ಕೆಲಸಗಳನ್ನು ಅಡ್ಡಿಪಡಿಸಬಹುದು ಮತ್ತು ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ, ನಮ್ಮ ಕಣ್ಣುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಬಹಳ ಮುಖ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಟಾನ ಅಧ್ಯಕ್ಷರಾದ ಡಾ. ಮೋಹನ್ ಆಳ್ವ ತಿಳಿಸಿದರು.
ಅವರು ದಿನಾಂಕ 14-03-2024 ನೇ ಗುರುವಾರದಂದು ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಯುವವಾಹಿನಿ(ರಿ.) ಮೂಡಬಿದಿರೆ ಘಟಕ, ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜ್ ಆಸ್ಪತ್ರೆ ವಿದ್ಯಾಗಿರಿ ಮೂಡಬಿದ್ರೆ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ(ಅಂಧತ್ವ ವಿಭಾಗ) ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಉಚಿತ ನೇತ್ರ ತಪಾಸಣಾ ಶಿಬಿರದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ. ಪೂಜಾರಿ ಸಮಾರಂಭವನ್ನು ಉದ್ಗಾಟಿಸಿ ಶುಭ ಹಾರೈಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಟ್ರಸ್ಟೀ, ಆಳ್ವಾಸ್ ಹೆಲ್ತ್ ಸೆಂಟರ್‌ನ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರಾದ ಡಾ. ಹನಾ ಶೆಟ್ಟಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ. ಕೆ. ಯುವವಾಹಿನಿ ಮೂಡುಬಿದಿರೆ ಘಟಕದ ಆರೋಗ್ಯ ನಿರ್ದೇಶಕರಾದ ಅನಿತಾ ಮುಂಡ್ರೋಟ್ಟು, ವೈದ್ಯರಾದ ಡಾ. ಮಂಜುನಾಥ್, ಆಳ್ವಾಸ್ ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಾಜಿತ್ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಬಿರದಲ್ಲಿ 179 ಶಿಬಿರಾರ್ಥಿಗಳು ಈ ಶಿಬಿರದ ಪ್ರಯೋಜನ ಪಡೆದುಕೊಂಡರು. 93 ಮಂದಿಗೆ ಕನ್ನಡಕದ ವಿತರಿಸಲಾಯಿತು ಹಾಗೂ 33 ಮಂದಿಗೆ ಉಚಿತ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಶಿಫಾರಸು ಮಾಡಲಾಯಿತು. ದಿನಾಂಕ 19-03-2024 ನೇ ಮಂಗಳವಾರ ಶಸ್ತ್ರಚಿಕಿತ್ಸೆಗೆ ತೆರಳುವ ಎಲ್ಲಾ ಶಿಬಿರಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ.
ಶಿಬಿರದ ವಿಶೇಷತೆ ಯುವವಾಹಿನಿ ಮೂಡುಬಿದ್ರಿ ಘಟಕದ 5 ಮಂದಿ ಸದಸ್ಯರು ಸ್ವ ಪ್ರೇರಣೆಯಿಂದ ನೇತ್ರದಾನ ಪ್ರಕ್ರಿಯೆಗೆ ಸಹಿ ಹಾಕಿ ಎಲ್ಲರ ಪ್ರಶಂಸೆಗೆ ಪಾತ್ರರಾದರು. ಯುವವಾಹಿನಿ ಮೂಡುಬಿದಿರೆ ಘಟಕದ ಅಧ್ಯಕ್ಷರಾದ ಶಂಕರ್ ಎ.ಕೋಟ್ಯಾನ್ ಸ್ವಾಗತಿಸಿ ಧನ್ಯವಾದ ನೀಡಿದರು.