ಬಜಪೆ: ನಾರಾಯಣ ಗುರು ಸ್ವಾಮಿಯವರ ತತ್ವಾದರ್ಶದಂತೆ ಯುವವಾಹಿನಿಯು ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ದೈಯ್ಯಗಳೊಂದಿಗೆ ಬಡವರ ಪಾಲಿಗೆ ಆಶಾಕಿರಣವಾಗಿ, ಯುವ ಜನತೆಗೆ ಬೇಕಾಗುವಂತಹ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಈ ಸಮಾಜಕ್ಕೆ ಮಾದರಿಯಾದ ಸಂಘಟನೆಯಾಗಿದೆ ಎಂದು ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿಯಾದ ಪದ್ಮರಾಜ್ ಆರ್. ತಿಳಿಸಿದರು.
ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಗೈದು ಶುಭನುಡಿಗೈದರು. ಅವರು ದಿನಾಂಕ 03/03/2024ರಂದು ಬಜಪೆ ಸಮುದಾಯ ಭವನದಲ್ಲಿ ಯುವವಾಹಿನಿ (ರಿ.) ಬಜಪೆ ಘಟಕದ 2024-25 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.
ಯುವವಾಹಿನಿಯು ದೈವೈಕ್ಯ ಶ್ರೀ ನಿರಂಜನ ಸ್ವಾಮಿ ಸುಂಕದಕಟ್ಟೆ, ಬಜಪೆ ಇವರ ಶುಭ ಆಶೀರ್ವಾದದೊಂದಿಗೆ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಉದ್ಘಾಟನೆಯಾಗಿ ಮೂವತ್ತಾರು ವರುಷಗಳಾಗಿದ್ದು, ಈ ಸಂಘಟನೆಯು ನಮ್ಮ ಸಮಾಜದ ಯುವ ಸಮುದಾಯಕ್ಕೆ ಅತ್ಯಂತ ಪ್ರಯೋಜನಕಾರಿಯಾದ ಸಂಘಟನೆಯಾಗಿ ಬೆಳೆದು ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿ ಜಿಲ್ಲಾ ಹಾಗೂ ರಾಜ್ಯ ರಾಜ್ಯೋತ್ಸವ ಪ್ರಶಸ್ತಿಯನ್ನು ತನ್ನ ಮುಡಿಗೆರಿಸಿಕೊಂಡಿದೆ. ಇನ್ನು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಮಾಜಮುಖಿ ಕೆಲಸಗಳನ್ನು ಮಾಡಿ ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಪಡೆಯುವಂತಾಗಲಿ ಎಂದು ಮುಖ್ಯ ಅತಿಥಿಯ ನೆಲೆಯಲ್ಲಿ ಪ್ರಜ್ವಲ್ ಗುರುಪುರ ಮಾತನಾಡಿದರು.
ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ. ಪೂಜಾರಿ ಮಾತನಾಡಿ ಯುವವಾಹಿನಿ ಬಜಪೆ ಘಟಕದ ಕಾರ್ಯವೈಖರಿಯನ್ನು ಶ್ಲಾಘಿಸಿ ಕೇಂದ್ರ ಸಮಿತಿಯ ಸಹಕಾರ ನಿಮ್ಮೊಂದಿಗೆ ಸದಾ ಇದೆ ಎಂದು ಹತ್ತನೇ ವರುಷದ ಹೊಸ ತಂಡಕ್ಕೆ ಶುಭ ಹಾರೈಸಿದರು.
ಆಯ್ಕೆ ಸಮಿತಿಯ ಸಂಚಾಲಕರಾದ ಉಷಾ ಸುವರ್ಣ ನೂತನ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಸಭೆಗೆ ಪರಿಚಯಿಸಿದರು. ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ. ಪೂಜಾರಿ ಪ್ರತಿಜ್ಞಾ ವಿಧಿ ಬೋಧಿಸಿದರು. ಹೊಸ ತಂಡಕ್ಕೆ ಅಧ್ಯಕ್ಷರು ನಿರಂಜನ್ ಕರ್ಕೇರ, ಕಾರ್ಯದರ್ಶಿ, ರೋಹಿಣಿ ರಾಜೇಶ್, ಕೋಶಾಧಿಕಾರಿ ಪೂಜಾ ಕಿರಣ್ ಆಯ್ಕೆಯಾದರು.
ಸನ್ಮಾನ
ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಲ್ಲಿ ಸಾಧನೆಗೈದು 2024ರಲ್ಲಿ ಮಾನ್ಯ ರಾಷ್ಟ್ರಪತಿಯವರಿಂದ ಶ್ಲಾಘನೀಯ ಪದಕ ಪಡೆಯಲಿರುವ ಬಜಪೆ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರು ರಾಮ ಪೂಜಾರಿ ಇವರನ್ನು ಸನ್ಮಾನಿಸಲಾಯಿತು.
ಧನಸಹಾಯ
ಕಡು ಬಡತನದಲ್ಲಿದ್ದು ತನ್ನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪರಿತಪಿಸುತ್ತಿದ್ದ ಬಜಪೆ ಶಾಂತಿಗುಡ್ಡೆಯ ಶಾರದಾ ಇವರ ಪರಿಸ್ಥಿತಿಯನ್ನು ಮನಗಂಡು ಪದಗ್ರಹಣದ ವೇದಿಕೆಯಲ್ಲಿ ಧನ ಸಹಾಯವನ್ನು ನೀಡಲಾಯಿತು.
ಯುವವಾಹಿನಿ ಕೇಂದ್ರ ಸಮಿತಿಯ 2023-24 ರ ಯಶಸ್ವಿ ಅಧ್ಯಕ್ಷರು ರಾಜೇಶ್ ಬಿ. ಹಾಗೂ ಕಾರ್ಯದರ್ಶಿಯಾದ ಕುಸುಮಾಕರ ಕುಂಪಲ, ಯುವವಾಹಿನಿ ಬಜಪೆ ಘಟಕದ ಮಾಜಿ ಅಧ್ಯಕ್ಷರಾದ ಉಷಾ ಸುವರ್ಣ, ಬ್ರಹ್ಮ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ಬಜಪೆ – ಕರಂಬಾರು ಅಧ್ಯಕ್ಷರು ಶಿವರಾಮ ಪೂಜಾರಿ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಅಭಿನಂದಿಸಲಾಯಿತು. ವಿದ್ಯಾನಿಧಿಯ ಬಲವರ್ಧನೆಗಾಗಿ ಮಾಡಿದ ಲಕ್ಕಿಡಿಪ್ ವಿಜೇತರ ಡ್ರಾ ಮಾಡಲಾಯಿತು. ಪ್ರಥಮ :075, ದ್ವಿತೀಯ :519, ತೃತೀಯ :2283, ಚತುರ್ಥ :355
ಬಿಲ್ಲವ ಸಂಘ ಬಜಪೆಯ ಅಧ್ಯಕ್ಷರು ಶಿವರಾಮ ಪೂಜಾರಿ ಹಾಗೂ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಯಾದ ಪ್ರಸಾದ್ ಪಾಲನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯುವವಾಹಿನಿ ಬಜಪೆ ಘಟಕದ ಅಧ್ಯಕ್ಷರು ಮಾದವ ಸಾಲ್ಯಾನ್ ಸಭಾ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಸಭಾ ಕಾರ್ಯಕ್ರಮದಲ್ಲಿ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಈ ಸುಸಂದರ್ಭದಲ್ಲಿ ಅಮೀನ್ ಕ್ರಿಯೇಷನ್ ರವರ ದೇವರಾಜ್ ಅಮೀನ್ ಇವರ ನಿರ್ಮಾಣ ಹಾಗೂ ನಿರ್ದೇಶನದಲ್ಲಿ, ರೇಣುಕಾ ಕಣಿಯೂರು ಸಾಹಿತ್ಯಕ್ಕೆ , ಗುಣಪ್ರಸಾದ್ ಕುಕ್ಕಟ್ಟೆ ಹಾಗೂ ಪೂಜಾ ಸನಿಲ್ ಹಾಡಿರುವ ಶ್ರೀ ಸ್ವಯಂಭೂಲಿಂಗೇಶ್ವರ ದೇವರ ತುಳು ಭಕ್ತಿಗೀತೆ “ಸ್ವರ ಡಮರುಗ” ಇದರ ಟ್ರೈಲರ್ ನ್ನು ಪದ್ಮರಾಜ್ ಆರ್. ಹಾಗೂ ವೇದಿಕೆಯಲ್ಲಿದ್ದ ಗಣ್ಯರು ಸೇರಿ ಬಿಡುಗಡೆ ಮಾಡಿದರು.
ಅನನ್ಯ ಹಾಗೂ ಅಪೇಕ್ಷಾ ಪ್ರಾರ್ಥಿಸಿದರು.ಚಂದ್ರಶೇಖರ ಪೂಜಾರಿ ಸ್ವಾಗತಿಸಿದರು ಸಂಧ್ಯಾ ಕುಳಾಯಿ ಪ್ರಸ್ತಾವನೆಗೈದರು.ಕಾರ್ಯದರ್ಶಿ ದೀಕ್ಷಿತ್ ಅಮೀನ್ ವಾರ್ಷಿಕ ವರದಿ ಮಂಡಿಸಿದರು.ಪೂಜಾ ಕಿರಣ್ ಸನ್ಮಾನ ಪತ್ರ ವಾಚಿಸಿದರು. ದೇವರಾಜ್ ಅಮೀನ್ ಕಾರ್ಯಕ್ರಮವನ್ನು ನಿರೂಪಿಸಿದರು, ನಿಯೋಜಿತ ಕಾರ್ಯದರ್ಶಿ ರೋಹಿಣಿ ರಾಜೇಶ್ ಧನ್ಯವಾದಗೈದರು.