ಸಾಧಕಿ
ಸಾಧಿಸುವ ಛಲ, ನಿರಂತರ ಪರಿಶ್ರಮ, ನಿರ್ದಿಷ್ಟ ಗುರಿ, ಆತ್ಮ ವಿಶ್ವಾಸದೊಂದಿಗೆ ಏನನ್ನಾದರೂ ಸಾಧಿಸಬಹುದೆನ್ನುವುದಕ್ಕೆ ಬಿಲ್ಲವ ಕುವರಿ ಸುಪ್ರೀತಾ ಪೂಜಾರಿ ಒಂದು ನಿದರ್ಶನ. ಪವರ್ ಲಿಫ್ಟಿಂಗ್‌ನಂತಹ ಕಠಿಣ ತರಬೇತಿ ಬೇಡುವ ಕ್ರೀಡೆಯಲ್ಲಿ ಸಾಧನೆಯ ಹಾದಿಯಲ್ಲಿದ್ದಾರೆ ನಮ್ಮ ಹೆಮ್ಮೆಯ ಸುಪ್ರೀತಾ ಪೂಜಾರಿ.
ಒಂದೆಡೆ ಚಿಕ್ಕಂದಿನಿಂದಲೇ ಅಂಟಿಕೊಂಡು ಬಂದ ಬಡತನ, ಇನ್ನೊಂದೆಡೆ ಕ್ರೀಡೆಯ ಬಗ್ಗೆ ಆಸಕ್ತಿ, ಇವೆರಡನ್ನೂ ಜೊತೆ ಜೊತೆಯಾಗಿಯೇ ಅನುಭವಿಸಿ ಕೊನೆಗೂ ತಾನು ಅಂದುಕೊಂಡಿದ್ದನ್ನು ಸಾಧಿಸುವ ಹಾದಿಯಲ್ಲಿದ್ದಾರೆ ಈ ನಮ್ಮ ವಿಶಿಷ್ಟ ಸಾಧಕಿ. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡು ತಾಯಿಯ ಮಮತೆಯಲ್ಲೇ ಬೆಳೆದ ಇವರಿಗೆ ಆಸರೆ ಸೋದರ ಮಾವ ಕೃಷ್ಣಪ್ಪ ಪೂಜಾರಿ. ಮಂಗಳೂರು ಮಹಾನಗರಪಾಲಿಕೆಯಲ್ಲಿ ಚಾಲಕರಾಗಿರುವ ಇವರದ್ದು ಬಡ ಕುಟುಂಬ. ಇಬ್ಬರು ಮಕ್ಕಳ ಪೋಷಣೆಯ ಭಾರ ಇವರಿಗಿದೆ. ಜೊತೆಗೆ ಸುಪ್ರೀತಾಳನ್ನೂ ತನ್ನ ಮಗಳಂತೆ ಬೆಳೆಸುವ ಸಹೃದಯಿ.
ಮಂಗಳೂರಿನ ಆಕಾಶಭವನದ ದಿ| ವಿಜಯಪೂಜಾರಿ ಮತ್ತು ಶೈಲಜಾ ದಂಪತಿಗಳ ಏಕೈಕ ಪುತ್ರಿಯಾದ ಸುಪ್ರೀತಾ ಕಡುಬಡತನದಲ್ಲೇ ಬೆಳೆದವರು. ಇವರಿಗೆ ಸ್ವಂತ ಮನೆ ಅಥವಾ ನಿವೇಶನ ಇಲ್ಲ. ಮರದ ಕೆಲಸ ಮಾಡಿ ಕುಟುಂಬ ನಿರ್ವಹಿಸುತಿದ್ದ ತಂದೆ ಇವರು ಚಿಕ್ಕವರಿರುವಾಗಲೇ ಅನಾರೋಗ್ಯದಿಂದ ವಿಧಿವಶರಾದರು. ಬಳಿಕ ತಾಯಿ ಬೀಡಿ ಕಟ್ಟಿ ಮಗಳನ್ನು ಪ್ರೀತಿಯಿಂದ ಸಾಕಿದ್ದಾರೆ.
ಬಾಲ್ಯದಿಂದಲೇ ಕೊಕ್ಕೋ, ಕಬಡ್ಡಿ ಮುಂತಾದ ಆಟೋಟಗಳಲ್ಲಿ ಆಸಕ್ತಿ ಹೊಂದಿದ್ದ ಸುಪ್ರೀತಾ ನಗರದ ಬೆಸೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಪ್ರೌಢಶಾಲಾ ಮಟ್ಟದಿಂದ ಬಿ.ಕಾಂ. ಪದವಿವರೆಗೆ ಶಿಕ್ಷಣವನ್ನು ಪಡೆದಿದ್ದಾರೆ. ಕಾಲೇಜು ಹಂತದಲ್ಲಿ ಪವರ್ ಲಿಫ್ಟಿಂಗ್‌ನತ್ತ ಗಮನ ಹರಿಸಿದರು. ದೈವದತ್ತವಾದ ಉತ್ತಮ ದೇಹದಾರ್ಢ್ಯತೆಯನ್ನು ಹೊಂದಿರುವ ಸುಪ್ರೀತಾರಿಗೆ ಅಲ್ಲಿ ತನ್ನ ಪ್ರತಿಭೆಯ ವಿಕಸನಕ್ಕೆ ಉತ್ತಮ ವಾತಾವರಣ ಸಿಕ್ಕಿತು. ಅಲ್ಲಿನ ದೈಹಿಕ ಶಿಕ್ಷಣ ನಿರ್ದೇಶಕರ ಸೂಕ್ತ ಮಾರ್ಗದರ್ಶನದಿಂದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಹಲವು ಬಹುಮಾನಗಳು, ಸಾಲು ಸಾಲು ಚಿನ್ನದ ಪದಕಗಳು ಕೊರಳಿಗೆ ಬಿದ್ದವು. ಜೊತೆಗೆ ರಾಷ್ಟ್ರಮಟ್ಟದಲ್ಲಿ 3 ಬಾರಿ ’ಬಲಾಢ್ಯ ಮಹಿಳೆ’ ಎಂಬ ಗೌರವಕ್ಕೆ ಪಾತ್ರರಾದರು.
ಇಷ್ಟೆಲ್ಲಾ ಸಾಧನೆ, ಯಶಸ್ಸಿನ ನಡುವೆಯೂ ತನ್ನ ತರಬೇತಿ, ಪ್ರಯಾಣ, ಪೌಷ್ಟಿಕ ಆಹಾರ, ಕ್ರೀಡಾ ಉಡುಪುಗಳು, ಅಗತ್ಯ ಸಾಮಗ್ರಿಗಳಿಗಾಗಿ ಹಪಹಪಿಸುವ ಪರಿಸ್ಥಿತಿ ಇದ್ದೇ ಇತ್ತು. ಒಂದು ಹಂತದಲ್ಲಿ ಯಾರೋ ದಾನಿಗಳು ನೀಡಿದ್ದ 5,000 ರೂಪಾಯಿಯಲ್ಲಿ ಒಂದು ಹಳೆಯ ಸ್ಕೂಟರನ್ನು ಖರೀದಿಸಿದರು. ತನ್ನ ಓಡಾಟಕ್ಕೂ ಬಳಸಿದರು. ಬಿಡುವಿನ ವೇಳೆಯಲ್ಲಿ ಹೆಣ್ಣು ಮಕ್ಕಳಿಗೆ ಚಾಲನ ತರಬೇತಿಯನ್ನು ನೀಡುತ್ತಾ ಈ ರೀತಿ ದುಡಿದ ಹಣದಿಂದ ತನ್ನ ಅಗತ್ಯತೆಗಳನ್ನು ಪೂರೈಸುತ್ತಾ ಸಂಜೆ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನೂ ಮುಂದುವರಿಸಿ ಬಿ.ಕಾಂ. ಪದವಿಯನ್ನೂ ಪಡೆದರು. ಜೊತೆಗೆ ಸ್ಥಳೀಯ ಶಾಲಾ ಮಕ್ಕಳಿಗೆ ಉಚಿತವಾಗಿ ಕೊಕ್ಕೋ ಮತ್ತು ಕಬಡ್ಡಿ ತರಬೇತಿಯನ್ನೂ ನೀಡುತ್ತಾ ತನ್ನ ಕ್ರೀಡಾ ಪ್ರೇಮವನ್ನು ಬೆಳೆಸುತ್ತಾ ಬಂದಿರುತ್ತಾರೆ. ಕಾಲೇಜು ಶಿಕ್ಷಣ ಮುಗಿಸಿದ ಬಳಿಕವೂ ತನ್ನ ಆಸಕ್ತಿಯ ಕ್ರೀಡೆ ಪವರ್ ಲಿಫ್ಟಿಂಗ್‌ನ ಅಭ್ಯಾಸವನ್ನು ಮುಂದುವರಿಸಿದರು. ದಕ್ಷಿಣ ರೈಲ್ವೇ ತಂಡದ ತರಬೇತುದಾರ ವಿನೋದ್ ಬೋಳಾರ್ ಅವರು ಸುಪ್ರೀತಾಗೆ ಕೋಚ್ ಆಗಿ ಇನ್ನಷ್ಟು ಸಾಧನೆ ಮಾಡಲು ದಾರಿ ತೋರಿದರು. ಪವರ್ ಲಿಫ್ಟಿಂಗ್ ಎಸೋಸಿಯೇಶನ್‌ನ ರಾಜ್ಯ ಕಾರ್ಯದರ್ಶಿ ಸತೀಶ್ ಕುಮಾರ್ ಕುದ್ರೋಳಿ ಕೂಡ ಸುಪ್ರೀತಾ ಸಾಧನೆಗೆ ಪ್ರೋತ್ಸಾಹ ನೀಡಿದ್ದಾರೆ.
ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಲು ಸಾಲು ಪದಕಗಳು ಬರತೊಡಗಿದ ಬಳಿಕ ತನ್ನ ಗುರಿಯನ್ನು ಅಂತರ್ರಾಷ್ಟ್ರೀಯ ಮಟ್ಟದತ್ತ ಏರಿಸಿದರು. ಇದರ ಫಲಶ್ರುತಿಯೇ 2011ರ ಡಿಸೆಂಬರ್‌ನಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಜೂನಿಯರ್‍ಸ್ ಮತ್ತು ಸೀನಿಯರ್‍ಸ್ ಎರಡೂ ವಿಭಾಗದಲ್ಲಿ ಸ್ಪರ್ಧಿಸಿ ಒಟ್ಟು 8ಚಿನ್ನದ ಪದಕಗಳನ್ನು ಬಾಚಿದರು. ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಆಸರೆ ಚಾರಿಟೇಬಲ್ ಟ್ರಸ್ಟ್, ಬೆಸೆಂಟ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು, ಕೆಲವು ಗಣ್ಯರು ಆರ್ಥಿಕ ಸಹಾಯ ನೀಡಿದ್ದರು. ಇವರ ಸಾಧನೆಗಾಗಿ ರಾಜ್ಯ ಸರಕಾರ ೫೦,೦೦೦ ರೂಪಾಯಿ ಪ್ರೋತ್ಸಾಹಧನವನ್ನೂ ನೀಡಿತು.
ಬಿಲ್ಲವ ಸಮಾಜದ ಹೆಮ್ಮೆಯ ಕುವರಿ ಸುಪ್ರೀತಾರವರ ಸಾಧನೆಯನ್ನು ಸಮಾಜ ಗುರುತಿಸಿತು. ಸನ್ಮಾನ್ಯ ಶ್ರೀ ಬಿ. ಜನಾರ್ದನ ಪೂಜಾರಿಯವರ ಮುತುವರ್ಜಿಯಿಂದ ಮಾನ್ಯ ಶ್ರೀ ಜಯ ಸಿ. ಸುವರ್ಣರವರ ಕಾಳಜಿಯಿಂದ ಪ್ರತಿಷ್ಠಿತ ಭಾರತ್ ಕೊ-ಅಪರೇಟಿವ್ ಬ್ಯಾಂಕಿನಲ್ಲಿ ಉದ್ಯೋಗ ಕೂಡ ದೊರಕಿತು. 2012ರ ನವೆಂಬರ್ 4ರಂದು ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ಜರಗಿದ ಯುವವಾಹಿನಿಯ ’ರಜತ ಮಹೋತ್ಸವ’ ಸಮಾರಂಭದಲ್ಲಿ ಕು| ಸುಪ್ರೀತಾರವರನ್ನು ಅದ್ಧೂರಿಯಾಗಿ ಸನ್ಮಾನಿಸಲಾಯಿತು. ಸುಪ್ರೀತಾರವರಿಗೆ ಇದೊಂದು ಅಪೂರ್ವ ಕ್ಷಣ. ಬಳಿಕ ಹಲವಾರು ಸಂಘ-ಸಂಸ್ಥೆಗಳೂ ಅವರನ್ನು ಸನ್ಮಾನಿಸಿ ಗೌರವಿಸಿದವು. ಯುವವಾಹಿನಿಯ ಚಟುವಟಿಕೆಗಳಿಗೆ ಮಾರು ಹೋದ ಸುಪ್ರೀತಾ ಅದರ ಸದಸ್ಯರಾಗ ಬಯಸಿದರು. ಯುವವಾಹಿನಿ ಮಂಗಳೂರು ಮಹಿಳಾ ಘಟಕಕ್ಕೆ ಸೇರ್ಪಡೆಗೊಂಡು ಇದೀಗ ಸದಸ್ಯರೆಲ್ಲರ ಅಚ್ಚುಮೆಚ್ಚಿನವರಾಗಿದ್ದಾರೆ.
ಮುಂದೆ 2014 ರಲ್ಲಿ ಕೆನಡಾದಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟ ಮತ್ತು 2015 ರಲ್ಲಿ ಹಾಂಕಾಂಗ್‌ನಲ್ಲಿ ನಡೆದ ವಿಶ್ವ ಪವರ್ ಲಿಫ್ಟಿಂಗ್ ಸ್ಪರ್ಧಾಕೂಟದಲ್ಲಿ ಭಾಗವಹಿಸಲು ತಯಾರಿ ನಡೆಸಿದರೂ ಅವರಿಗೆ ಸಕಾಲದಲ್ಲಿ ಆರ್ಥಿಕ ನೆರವು ದೊರೆಯಲಿಲ್ಲ.
2016 ರ ಏಷ್ಯನ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್ ಭಾರತದಲ್ಲೇ ನಡೆದಿತ್ತು. ಜೂನ್ 7ರಿಂದ 12ರ ತನಕ ರಾಜಸ್ಥಾನದ ಉದಯಪುರದಲ್ಲಿ ನಡೆದ ಕ್ರೀಡಾ ಕೂಟದಲ್ಲಿ ಸುಮಾರು 29 ಏಷಿಯನ್ ರಾಷ್ಟ್ರಗಳು ಭಾಗವಹಿಸಿದ್ದು ಪ್ರತಿಕೂಲ ಹವಾಮಾನ ಮತ್ತು ಕಠಿಣ ಸ್ಪರ್ಧೆಯ ನಡುವೆಯೂ 72 ಕೆ.ಜಿ. ದೇಹ ತೂಕದ ವಿಭಾಗದಲ್ಲಿ ಸ್ಪರ್ಧಿಸಿ ಕಂಚಿನ ಪದಕ ಗೆದ್ದು ಭಾರತಕ್ಕೆ, ಕರ್ನಾಟಕಕ್ಕೆ, ಜಿಲ್ಲೆಗೆ, ವಿಶೇಷವಾಗಿ ಬಿಲ್ಲವ ಸಮುದಾಯಕ್ಕೆ ಕೀರ್ತಿ ತಂದಿದ್ದಾರೆ. ಅಲ್ಲದೆ ಅದಕ್ಕೆ ಪೂರ್ವಭಾವಿಯಾಗಿ ನಡೆದ ಅರ್ಹತಾ ಸ್ಪರ್ಧೆಯಲ್ಲಿ ಮೊದಲಿಗರಾಗಿ ಆಯ್ಕೆಗೊಂಡು ಭಾರತ ತಂಡದ ನಾಯಕಿಯಾಗಿಯೂ ಆಯ್ಕೆಗೊಂಡಿರುತ್ತಾರೆ. ಕ್ರೀಡಾ ಕೂಟದಲ್ಲಿ ಚಿನ್ನ ಗಳಿಸುವ ಗುರಿ ಇದ್ದರೂ ರಾಜಸ್ಥಾನದ ಪ್ರತಿಕೂಲ ಹವಾಮಾನದಲ್ಲಿ ಸಾಕಷ್ಟು ಅಭ್ಯಾಸ ಮಾಡಲಾಗದೆ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಈ ಕ್ರೀಡಾಕೂಟಕ್ಕೆ ತೆರಳುವಾಗಲೂ ಹಲವು ದಾನಿಗಳು, ಸಂಘ ಸಂಸ್ಥೆಗಳು ಆರ್ಥಿಕ ನೆರವನ್ನು ನೀಡಿದವು. ಮುಖ್ಯವಾಗಿ ಯುವವಾಹಿನಿ, ಬಿಲ್ಲವರ ಮಹಾಮಂಡಲ, ಇನ್ನಿತರ ಸಂಘಗಳು ನೆರವು ನೀಡಿ ಪ್ರೋತ್ಸಾಹಿಸಿದವು. ಇವರೆಲ್ಲರನ್ನೂ ಕೃತಜ್ಞತೆಯಿಂದ ಸ್ಮರಿಸುತ್ತಾರೆ ಸುಪ್ರೀತಾರವರು.
ಸುಪ್ರೀತಾ ಪೂಜಾರಿಯವರ ಪ್ರತಿಭೆಗೆ ನೀರೆರೆಯುವ ಕೆಲಸವನ್ನು ಹಲವು ಮಂದಿ ದಾನಿಗಳು ಮಾಡಿದ್ದರಿಂದ ಅವರು ಇಂದು ಈ ಸಾಧನೆ ಮಾಡಲು ಸಾಧ್ಯವಾಗಿದೆ. ಶ್ರೀಯುತರಾದ ಜನಾರ್ದನ ಪೂಜಾರಿ, ಜಯ ಸಿ. ಸುವರ್ಣ, ಕೃಷ್ಣ ಜೆ. ಪಾಲೆಮಾರ್, ನಾಗರಾಜ ಶೆಟ್ಟಿ, ಗೋಪಾಲಕೃಷ್ಣ, ಡಾ| ಆಶಾ ಜ್ಯೋತಿ ರೈ ಸೇರಿದಂತೆ ಹಲವರು ಆರ್ಥಿಕ ನೆರವನ್ನು ನೀಡಿದ್ದಾರೆ. ತನ್ನ ಕ್ರೀಡಾಸಕ್ತಿಗೆ ಸೂಕ್ತ ಆರ್ಥಿಕ ಬೆಂಬಲ, ಪ್ರೋತ್ಸಾಹ ಸಿಕ್ಕಿದರೆ ಇನ್ನಷ್ಟು ಪದಕಗಳನ್ನು ದೇಶಕ್ಕಾಗಿ ಗೆದ್ದು ತರುತ್ತೇನೆ ಎಂಬ ಅಚಲವಾದ ಆತ್ಮವಿಶ್ವಾಸ ಅವರದ್ದು. ಆ ನಿಟ್ಟಿನಲ್ಲಿ ಮುಂದಿನ ಏಷ್ಯನ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ ಮತ್ತು ವಿಶ್ವ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ನಿರಂತರ ಪರಿಶ್ರಮದೊಂದಿಗೆ ಚಿನ್ನ ಗಳಿಸುವ ಗುರಿಯನ್ನು ಹೊಂದಿದ್ದಾರೆ. ತನ್ನ ಕ್ರೀಡಾಸಕ್ತಿಯನ್ನು ಪ್ರೋತ್ಸಾಹಿಸುವ ಒಳ್ಳೆಯ ವರ ಸಿಕ್ಕಿದರೆ ವಿವಾಹವಾಗುವ ಇಂಗಿತವನ್ನೂ ಹೊಂದಿರುವ ಛಲಗಾರ್ತಿ ಕು| ಸುಪ್ರೀತಾ ಪೂಜಾರಿಯವರಿಗೆ ಸರಕಾರದ ಅನುದಾನ ಸಹೃದಯಿಗಳ ಬೆಂಬಲ, ಸಮಾಜ ಬಾಂಧವರ ಪ್ರೋತ್ಸಾಹ ಬೇಕಾಗಿದೆ. ಅವರ ಕ್ರೀಡಾ ಬದುಕನ್ನು ಪೋಷಿಸುವ ಸರಕಾರಿ ಯಾ ಖಾಸಗಿ ಉದ್ಯೋಗ ಬೇಕಾಗಿದೆ. ಎಲ್ಲರ ಸಹಕಾರದಿಂದ ಸುಪ್ರೀತಾರ ಕನಸು ನನಸಾಗಲಿ, ಅವರ ಬಾಳು ಬೆಳಗಲಿ, ಸಮಾಜಕ್ಕೆ ಇನ್ನಷ್ಟು ಹೆಮ್ಮೆಯ ಗರಿಗಳು ಮೂಡಲಿ ಎಂಬುವುದೇ ನಮ್ಮೆಲ್ಲರ ಹಾರೈಕೆ.
– ಸಾಧು ಪೂಜಾರಿ