ಕೊಲ್ಯ: ಕೊಲ್ಯ ಘಟಕದ ಸರ್ವ ಸದಸ್ಯರ ಪ್ರೀತಿ ಅಭಿಮಾನಕ್ಕೆ ನಾನು ಮೂಕಳಾಗಿದ್ದೇನೆ, ಮಾತು ಮೌನವಾಗಿದೆ ಹೃದಯ ತುಂಬಿ ಬಂದಿದೆ. ಸಂತೋಷವನ್ನು ವ್ಯಕ್ತ ಪಡಿಸಲು ನನ್ನಲ್ಲಿ ಪದಗಳಿಲ್ಲ ಎಂದು ಆನಂದ ಬಾಷ್ಪಿತರಾಗಿ ಕೊಲ್ಯ ಘಟಕದಲ್ಲಿ ಡಿಸೆಂಬರ್ 27 ರಂದು ನಡೆದ ಸಾಪ್ತಾಹಿಕ ಸಭೆಯಲ್ಲಿನ ಬೀಳ್ಕೊಡುಗೆಯ ಸನ್ಮಾನದ ಕುರಿತು ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ನಯನಾ ಸುರೇಶ್ ಅವರು ಬಾವುಕರಾಗಿ ಮತನಾಡಿದರು.
ಸಂಘಟನಾ ಕಾರ್ಯದರ್ಶಿಯಾಗಿ ಕೊಲ್ಯ ಘಟಕಕ್ಕೆ ಪ್ರೋತ್ಸಾಹ ನೀಡಿ ಸಹಕರಿಸಿದ ಶ್ರೀಮತಿ ನಯನಾ ಸುರೇಶ್ ರವರನ್ನು ಯುವವಾಹಿನಿ(ರಿ.) ಕೊಲ್ಯ ಘಟಕದ ಸಾಪ್ತಾಹಿಕ ಸಭೆಯಲ್ಲಿ ಸಂಪ್ರದಾಯಬದ್ಧವಾಗಿ ಬೀಳ್ಕೊಡುಗೆಯ ಗೌರವ ನೀಡಲಾಯಿತು. ಘಟಕದ ಮಹಿಳಾ ಸದಸ್ಯರು ಹಣೆಗೆ ಸಿಂಧೂರ ಹಚ್ಚಿ, ಆರತಿಯನ್ನು ಬೆಳಗಿ, ಬಳೆಯನ್ನು ತೊಡಿಸಿದರು. ಪ್ರೀತಿಯ ದ್ಯೋತಕವಾಗಿ ಹೂವು ಮತ್ತು ಸೀರೆಯನ್ನು ನೀಡಲಾಯಿತು.
ಸಂಘಟನಾ ಕಾರ್ಯದರ್ಶಿ ನಯನಾ ಸುರೇಶ್ ರವರು ನಮ್ಮೊಂದಿಗೆ ಮಾತೆಯಂತೆ, ಹಿರಿಯಕ್ಕನಾಗಿ ಒಂದೇ ಕುಟುಂಬದ ಸದಸ್ಯರಂತೆ ಬೆರೆತು ಅಪಾರ ಪ್ರೋತ್ಸಾಹವನ್ನು ನೀಡಿದ್ದಾರೆ. ಅವರ ಸಹಕಾರಕ್ಕೆ ನಾವು ಚಿರಋಣಿಗಳೆಂದು ಕೊಲ್ಯ ಘಟಕದ ಅಧ್ಯಕ್ಷರು ಲತೀಶ್ ಎಂ ಸಂಕೋಳಿಗೆಯವರು ಸಂತಸ ವ್ಯಕ್ತಪಡಿಸಿದರು.
ಘಟಕದ ಮಾಜಿ ಅಧ್ಯಕ್ಷರು ಹಾಗೂ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕುಸುಮಾಕರ ಕುಂಪಲರವರು ತಮ್ಮ ಅವಧಿಯಲ್ಲಿ ಸಹಕರಿಸಿದ ನಯನಾ ಸುರೇಶ್ ರವರನ್ನು ಗೌರವಿಸಿ, ಮಾತೃಸ್ವರೂಪಿಯ ಬಗ್ಗೆ ನಾಲ್ನುಡಿಗಳನ್ನಾಡಿದರು.
ಸಾಪ್ತಾಹಿಕ ಸಭೆಯಲ್ಲಿ ಕೊಲ್ಯ ಘಟಕದ ಪ್ರಥಮ ಉಪಾಧ್ಯಕ್ಷರಾದ ಸುಧಾ ಸುರೇಶ್, ನಿಕಟಪೂರ್ವ ಅಧ್ಯಕ್ಷರಾದ ಸುಂದರ್ ಸುವರ್ಣ, ದ್ವಿತೀಯ ಉಪಾಧ್ಯಕ್ಷರಾದ ನಿತಿನ್ ಕರ್ಕೆರ, ಕೋಶಾಧಿಕಾರಿ ವಿನುತಾ ಪಾಂಡಿಹಿತ್ಲು, ಸ್ಥಾಪಕಾಧ್ಯಕ್ಷರಾದ ಸುರೇಶ್ ಬಿಲ್ಲವ, ಮಾಜಿ ಅಧ್ಯಕ್ಷರುಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಜೀವನ್ ಕೊಲ್ಯ ಧನ್ಯವಾದ ಸಮರ್ಪಿಸಿದರು.