ಉಪ್ಪಿನಂಗಡಿ : ಯುವಕರಿಗಾಗಿ ಯುವಕರಿಂದಲೇ ಸ್ಥಾಪನೆಯಾಗಿ ಇಂದು ಸಮಾಜಮುಖಿ ಕಾರ್ಯಗಳೊಂದಿಗೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಹೆಮ್ಮೆಯ ಯುವವಾಹಿನಿ ಸಂಘಟನೆಯಿಂದ ಸದೃಢ ಸಮಾಜ ನಿರ್ಮಾಣ ಮಾಡುವ ಮೂಲಕ ಮಹತ್ತರ ಹೆಜ್ಜೆಯನ್ನಿಡುತ್ತಿದೆ ಎಂದು ಪುತ್ತೂರು ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಶ್ರೀಲತಾ ಇವರು ತಿಳಿಸಿದರು.
ಅವರು ದಿನಾಂಕ 2023 ನೇ ಡಿಸೆಂಬರ್ 16, ಶನಿವಾರದಂದು ಉಪ್ಪಿನಂಗಡಿಯ ರೋಟರಿ ಭವನದಲ್ಲಿ ಜರಗಿದ ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕದ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಮನೋಹರ್ ಕುಮಾರ್‌ರವರು ವಹಿಸಿ ಪ್ರಸಕ್ತ ಸಾಲಿನಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.
2023-24ನೇ ಸಾಲಿನಲ್ಲಿ ಸ್ಥಳೀಯ ಗ್ರಾಮ ಪಂಚಾಯತ್‌ಗಳಲ್ಲಿ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಬಿಲ್ಲವ ಸಮಾಜದ ಬಂಧುಗಳನ್ನು ಹಾಗೂ ಬನ್ನೆಂಗಲ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಅಧ್ಯಕ್ಷರಾಗಿ ಆಯ್ಕೆಯಾದ ಗುಣಕರ ಆಗ್ನಾಡಿ ಮತ್ತು ಪುತ್ತೂರು ತಾಲೂಕು ಭಜನಾ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾದ ಲೋಕೇಶ್ ಬೆತ್ತೋಡಿ ಇವರನ್ನು ಗೌರವಿಸಿ ಅಭಿನಂದಿಸಲಾಯಿತು.
ನಿಕಟಪೂರ್ವ ಅಧ್ಯಕ್ಷರು ಹಾಗೂ ಆಯ್ಕೆ ಸಮಿತಿಯ ಸಂಚಾಲಕರಾದ ಕುಶಾಲಪ್ಪ ಹತ್ತುಕಳಸೆ ಇವರು ನೂತನ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಸಭೆಗೆ ಪರಿಚಯಿಸಿದರು.
ಕೇಂದ್ರ ಸಮಿತಿಯ ಅಧ್ಯಕ್ಷರಾದ ರಾಜೇಶ್ ಬಿ. ಇವರು ನೂತನ ತಂಡಕ್ಕೆ ಪ್ರಮಾಣ ವಚನ ಬೋಧಿಸಿ ಶುಭಹಾರೈಸಿದರು. ಘಟಕದ ನಾಲ್ಕು ಮಂದಿ ಸದಸ್ಯರುಗಳ ಮಕ್ಕಳು ಕ್ರೀಡಾ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಸಭೆಯಲ್ಲಿ ಅಭಿನಂಧಿಸಲಾಯಿತು. ಅದೇ ರೀತಿ ಆರ್ಥಿಕವಾಗಿ ಹಿಂದುಳಿದ ಮೂರು ಮಂದಿ ವಿದ್ಯಾರ್ಥಿಗಳಿಗೆ ಒಟ್ಟು ₹25000/- ವಿದ್ಯಾ ನಿಧಿಯನ್ನು ವಿತರಿಸಲಾಯಿತು.
ಸಾಂತ್ವನ ನಿಧಿ ಯೋಜನೆಯಿಂದ ಹಿರೇಬಂಡಾಡಿ ಗ್ರಾಮದ ಸಂಜೀವ ಪೂಜಾರಿ ಇವರ ವೈದ್ಯಕೀಯ ಚಿಕಿತ್ಸೆಗಾಗಿ ಘಟಕದಿಂದ ₹8000/- ಹಾಗೂ ಉದ್ಯಮಿ ನಟೇಶ್ ಪೂಜಾರಿ , ಬೆಂಗಳೂರು ಇವರು ನೀಡಿದ ₹5000/- ಹೀಗೆ ಒಟ್ಟು ₹13000/- ವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.
ನಾಣ್ಯಪ್ಪ ಪೂಜಾರಿ, ಶಿಲ್ಪಾ ದಂಪತಿಗಳ ಪುತ್ರ ಮಾ. ಧ್ರುವ ಪೆನ್ಸಿಲ್ ಆರ್ಟ್‌ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರವನ್ನು ಬೆಂಗಳೂರಿನ ಉದ್ಯಮಿ ನಟೇಶ್ ಪೂಜಾರಿ ಬಿಡುಗಡೆಗೊಳಿಸಿ ಮುಖ್ಯ ಆತಿಥಿಗಳಾಗಿ ಭಾಗವಹಿಸಿ ಶುಭಹಾರೈಸಿದರು. ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಯವರಾದ ಪ್ರವೀಣ್ ಓಂಕಲ್ ರವರು ನೂತನ ತಂಡಕ್ಕೆ ಶುಭಹಾರೈಸಿದರು.
ನೂತನ ಅಧ್ಯಕ್ಷರಾದ ಸೋಮಸುಂದರ ಕೊಡಿಪ್ಪಾನ ಇವರು ತಮ್ಮ ಅವಧಿಯಲ್ಲಿ ಉಪ್ಪಿನಂಗಡಿ ಯುವವಾಹಿನಿಯನ್ನು ಸಮಾಜಮುಖಿಯಾಗಿ ಬೆಳೆಸುವಲ್ಲಿ ಎಲ್ಲರ ಸಹಕಾರವನ್ನು ಯಾಚಿಸಿದರು. ಕೇಂದ್ರ ಸಮಿತಿಯ ಅಧ್ಯಕ್ಷರಾದ ರಾಜೇಶ್ .ಬಿ ಹಾಗೂ ಘಟಕದ ಅಧ್ಯಕ್ಷರಾದ ಮನೋಹರ್ ಹಾಗೂ ಮಾಧವ ಬಿ.ಕೆ ಇವರನ್ನು ಘಟಕದ ವತಿಯಿಂದ ಗೌರವಿಸಿ ಅಭಿನಂದಿಸಲಾಯಿತು.
ಘಟಕದ ಕಾರ್ಯದರ್ಶಿ ಮಾಧವ ಬಿ.ಕೆ ಪ್ರಸಕ್ತ ಸಾಲಿನ ಸಾಧನೆಗಳ ವರದಿ ಮಂಡಿಸಿದರು. ಡಾ.ರಾಜಾರಾಮ್ ಕೆ.ಬಿ ಪ್ರಸ್ತಾಪಿಸಿದರು. ಅಭಿಜ್ನಾ ಪ್ರಾರ್ಥಿಸಿ, ಅಜಿತ್ ಕುಮಾರ್ ಸ್ವಾಗತಿಸಿ, ನೂತನ ಕಾರ್ಯದರ್ಶಿ ಅನಿತಾ ಸತೀಶ್ ಧನ್ಯವಾದ ಸಲ್ಲಿಸಿದರು. ಲೋಕೇಶ್ ಬೆತ್ತೋಡಿ ಕಾರ್ಯಕ್ರಮ ನಿರ್ವಹಸಿದರು. ನಾಣ್ಯಪ್ಪ ಪೂಜಾರಿ ಸಹಕರಿಸಿದರು.