ಮಂಗಳೂರು:- ವಿದ್ಯೆ ನಮ್ಮನ್ನು ಯಾರ ಮತ್ತು ಯಾವುದರ ಹಂಗೂ ಇಲ್ಲದೆ ಅಸಹಾಯಕತೆ ಎನ್ನುವ ಪದವೇ ಇಲ್ಲದೆ ನಮ್ಮನ್ನು ನಾವು ಬೆಳೆಸಿಕೊಳ್ಳಬೇಕು. ಅದಕ್ಕೆ ಬಡತನ, ಆರ್ಥಿಕತೆ, ಯಾವುದೂ ಅಡ್ಡಿ ಬರಬಾರದು. ನನಗೂ ಸಹಾಯ ಮಾಡುವವರಿದ್ದರೆ ನಾನೂ ಕಲಿಯುತ್ತಿದ್ದೆ ಎನ್ನುವ ವಿದ್ಯಾರ್ಥಿ ಸಮೂಹಕ್ಕೆ ಯುವವಾಹಿನಿಯ ವಿದ್ಯಾನಿಧಿ ಟ್ರಸ್ಟ್ ಸಂಜೀವಿನಿಯಾಗಿದೆ ಎಂದು ಬೆಳ್ತಂಗಡಿಯ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಮಾಣಿಂಜ ಇವರು ತಿಳಿಸಿದರು. ಅವರು ದಿನಾಂಕ 13 ಡಿಸೆಂಬರ್ 2022ರಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಗ್ಲಾಸ್ ಹೌಸ್ ನಲ್ಲಿ ಜರಗಿದ ಯುವವಾಹಿನಿ ಕೇಂದ್ರ ಸಮಿತಿ, ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ ಇದರ ಜಂಟಿ ಆಶ್ರಯದಲ್ಲಿ ನಡೆದ ವಿದ್ಯಾರ್ಥಿವೇತನ, ಅಕ್ಷರ ಪುರಸ್ಕಾರ, ಶೈಕ್ಷಣಿಕ ತರಬೇತಿ ಕಾರ್ಯಕ್ರಮದ ಆತಿಥಿಯಾಗಿ ಭಾಗವಹಿಸಿಮಾತನಾಡಿದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರರತ್ನ ಚಿತ್ತರಂಜನ್ ಬೊಳಾರ್ ಮಾತನಾಡಿ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ಬದಲು ಸಾಲದ ರೂಪದಲ್ಲಿ ಆರ್ಥಿಕ ಸಹಾಯ ನೀಡಿದಲ್ಲಿ ವಿದ್ಯಾರ್ಥಿಗಳು ಮುಂದೆ ಉದ್ಯೋಗ ಪಡೆದು ಸಮಾಜ ಸೇವೆ ಮಾಡಲು ಪ್ರೇರಣೆಯಾಗುತ್ತದೆ ಎಂದರು. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಅಧ್ಯಕ್ಷಿ ಎಚ್.ಎಸ್. ಸಾಯಿರಾಂ ಅವರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕರಾದ ಗುಣಪ್ರಸಾದ್ ಕಾರಂದೂರು ವಿದ್ಯಾರ್ಥಿಗಳು ಜೀವನ ಮೌಲ್ಯ ಹೇಗೆ ಹೆಚ್ಚಿಸುವುದು ಎಂಬುದರ ಬಗ್ಗೆ ತರಬೇತಿ ನೀಡಿದರು. ಸರ್ವಜ್ಞ ಐಎಎಸ್ ಅಕಾಡೆಮಿ ನಿರ್ದೇಶಕ ಸುರೇಶ್ ಎಂ.ಎಸ್. ವಿದ್ಯಾರ್ಥಿ ದಿಸೆಯಲ್ಲಿಯೇ ಸರಕಾರಿ ಉದ್ಯೋಗಗಳಿಗೆ ತಯಾರಿ ನಡೆಸುವ ಬಗ್ಗೆ ತರಬೇತಿ ನೀಡಿದರು.
ಮ್ಯಾನೇಜಿಂಗ್ ಟ್ರಸ್ಟಿ ಡಾ. ರಾಜಾರಾಮ್ ಕೆಬಿ ಪ್ರಸ್ತಾವಿಕವಾಗಿ ಮಾತನಾಡಿ ಅಜ್ಞಾನ, ಅಂಧಕಾರವನ್ನು ಹೋಗಲಾಡಿಸಿ ನಮ್ಮಲ್ಲಿ ಜ್ಞಾನದ ಬೆಳಕು ಮೂಡುವುದೇ ನಮಗೆ ಸಿಗುವ ಮೌಲ್ಯಾಧಾರಿತ ಶಿಕ್ಷಣ, ಶಿಕ್ಷಣದಿಂದ ವಿದ್ಯಾವಂತರಾಗಿ, ಪ್ರಜ್ಞಾವಂತರಾಗಿ ಉದ್ಯೋಗಸ್ಥರಾಗಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಅಂತಹ ಉದ್ದೇಶದಿಂದ ಅರ್ಹ ಬಡ ವಿದ್ಯಾರ್ಥಿಗಳಿಗಾಗಿ ಈ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಯುವವಾಹಿನಿಯ ಕೇಂದ್ರ ಸಮಿತಿಯ ಸಲಹೆಗಾರ ಟಿ.ನಾರಾಯಣ ಪೂಜಾರಿ ಉಪಸ್ಥಿತರಿದ್ದರು. ಮ್ಯಾನೇಜಿಂಗ್ ಟ್ರಸ್ಟಿ ಡಾ| ರಾಜಾರಾಮ್ ಕೆ.ಬಿ. ಪ್ರಸ್ತಾವಿಸಿ, ಸ್ವಾಗತಿಸಿದರು. ಯುವವಾಹಿನಿ ಕೇಂದ್ರ ಸಮಿತಿಯ ಹಾಗೂ ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್‌ನ ಉದಯ್ ಅಮೀನ್ ಮಟ್ಟು ಅಧ್ಯಕ್ಷತೆ ವಹಿಸಿದ್ದರು.
ಶ್ರೀರಕ್ಷಾ ಪ್ರಾರ್ಥಿಸಿದರು. ಟ್ರಸ್ಟಿನ ಕಾರ್ಯದರ್ಶಿ ಮನೋಜ್ ಸಾಲ್ಯಾನ್ ವಂದಿಸಿದರು. ರಾಜೇಶ್ ಬಲ್ಯ ಕಾರ್ಯಕ್ರಮ ನಿರೂಪಿಸಿದರು. ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು, ವಿವಿಧ ಘಟಕಗಳ ಅಧ್ಯಕ್ಷರು ಮತ್ತು ಸದಸ್ಯರು, ಪದಾಧಿಕಾರಿಗಳು ಸಹಕರಿಸಿದರು.
ಎಸೆಸೆಲ್ಸಿಯಲ್ಲಿ ಶೇ.100 ಹಾಗೂ ಪಿಯುಸಿಯಲ್ಲಿ ಶೇ.98ಕ್ಕಿಂತ ಹೆಚ್ಚು ಅಂಕ ಗಳಿಸಿದ ರೋಷನ್, ಶ್ರೀರಕ್ಷಾ ಎಸ್. ಎಚ್., ಮನ್ವಿತಾ ಎನ್., ಸಂಜನಾ ಡಿ. ಕೋಟ್ಯಾನ್, ಸ್ನೇಹ, ಜೆ. ಪಡುಬಿದ್ರಿ, ಯಶ್ಚಿತಾ ಅವರನ್ನು ಗೌರವಿಸಲಾಯಿತು. ಒಟ್ಟು 78 ವಿದ್ಯಾರ್ಥಿಗಳಿಗೆ ಸುಮಾರು ಮೂರುವರೆ ಲಕ್ಷದಷ್ಟು ವಿದ್ಯಾರ್ಥಿವೇತನ ವಿತರಿಸಲಾಯಿತು.