ಉಡುಪಿ :- ತುಳುನಾಡು ಭಾವನಾತ್ಮಕ ಕುಟುಂಬ ಪದ್ಧತಿಯನ್ನು ಹೊಂದಿದ್ದು ಇಲ್ಲಿನ ಆಚಾರ ವಿಚಾರಗಳು, ಸಂಸ್ಕೃತಿಯ ಉಳಿವಿಗೆ ಇದರ ಪಾತ್ರ ಮಹತ್ವದ್ದಾಗಿದೆ. ಜಾನಪದ ಕ್ಷೇತ್ರದಲ್ಲಿ ಮಾಡಿದ ಕೆಲಸಕ್ಕೆ ಇಂದು ನನಗೆ ಸಾರ್ಥಕ್ಯದ ಕ್ಷಣವಾಗಿದೆ, ಅದೇ ರೀತಿ ತುಳುನಾಡಿನ ಜಾನಪದ ಹಾಗೂ ಸಂಸ್ಕ್ರತಿಯ ಉಳಿವಿಗೆ ಯುವವಾಹಿನಿಯ ಕೊಡುಗೆ ಅನನ್ಯ ಎಂದು ಜಾನಪದ ವಿದ್ವಾಂಸರೂ, ಸಂಶೋಧಕರಾದ ಕೆ.ಎಲ್. ಕುಂಡಂತಾಯ ಇವರು ನುಡಿದರು. ಅವರು ಯುವವಾಹಿನಿ ಉಡುಪಿ ಘಟಕದ ವತಿಯಿಂದ ದಿನಾಂಕ 20 ನವೆಂಬರ್ 2022ರ ರವಿವಾರದಂದು ಉಡುಪಿಯ ಚಿಟ್ಪಾಡಿಯ ಲಕ್ಷ್ಮೀ ಸಭಾ ಭವನದಲ್ಲಿ ಜರಗಿದ ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ ಪ್ರದಾನ ಸಮಿತಿಯ ವತಿಯಿಂದ ಕೊಡ ಮಾಡುವ ಜಾನಪದ ವಿದ್ವಾಂಸ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಕಲಾ ಪೋಷಕ ಎಸ್.ಕೆ. ಸಾಲ್ಯಾನ್ ಬೆಳ್ಳಣ್ಣು ಅವರಿಗೆ ಜಾನಪದ ಕಲಾವಿದ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಲಾ ಪೋಷಕ ಎಸ್.ಕೆ. ಸಾಲ್ಯಾನ್ ಯುವವಾಹಿನಿ ಹಾಗೂ ಬನ್ನಂಜೆ ಬಾಬು ಅಮೀನ್ ರವರ ಸೇವಾ ಮನೋಭಾವದ ಕಾರ್ಯವೈಖರಿಯನ್ನು ಶ್ಲಾಘಿಸಿ ಇದಕ್ಕೆ ಪೂರಕವಾಗಿ ವಿನಿಯೋಗಿಸಲು ಪ್ರಶಸ್ತಿಯ ಮೊತ್ತಕ್ಕೆ ತನ್ನ ಪಾಲನ್ನು ಸೇರಿಸಿ ಅಧ್ಯಕ್ಷರಿಗೆ ಹಸ್ತಾಂತರಿಸಿದರು.
ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಹಾಗೂ ಭಜನಾ ಕಲಾವಿದ ಸುರೇಶ್ ಆಚಾರ್ಯ ಕಿದಿಯೂರು ಇವರಿಗೆ ಗೌರವ ಸನ್ಮಾನ ನೆರವೇರಿಸಲಾಯಿತು. ಬಂಟ್ವಾಳ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಡಾl ತುಕರಾಂ ಪೂಜಾರಿ ಪ್ರಶಸ್ತಿ ಪ್ರದಾನ ಮಾಡಿದರು. ತೆಂಕನಿಡಿಯೂರು ಕಾಲೇಜು ಪ್ರಾದ್ಯಾಪಕರಾದ ಡಾ| ದುಗ್ಗಪ್ಪ ಕಜೆಕಾರ್ ಅಭಿನಂದನ ಭಾಷಣ ಮಾಡಿದರು. ಯುವವಾಹಿನಿ ಕೇಂದ್ರ ಸಮಿತಿ ,ಮಂಗಳೂರು ಇದರ ದ್ವೀತಿಯ ಉಪಾಧ್ಯಕ್ಷರಾದ ಹರೀಶ್ ಕೆ. ಪೂಜಾರಿ, ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಉಪಸ್ಥಿತರಿದ್ದರು. ಉಡುಪಿ ಯುವವಾಹಿನಿ ಅಧ್ಯಕ್ಷರಾದ ಮಹಾಬಲ ಅಮೀನ್ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಸಹಕರಿಸಿದವರನ್ನು ಸ್ಮರಿಸಿಕೊಂಡು ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಉಲ್ಲೇಖಿಸಿದರು. ಪ್ರಶಸ್ತಿ ಆಯ್ಕೆ ಸಮಿತಿ ಸಂಚಾಲಕರಾದ ಭಾಸ್ಕರ ಸುವರ್ಣ ಸ್ವಾಗತಿಸಿದರು.
ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರಾದ ಮುದ್ದು ಮೂಡುಬೆಳ್ಳೆ ಪ್ರಸ್ತಾವಿಸಿದರು.ಕೇಂದ್ರ ಸಮಿತಿ ಮಾಜಿ ಅಧ್ಯಕ್ಷರಾದ ಸಂತೋಷ್ ಕುಮಾರ್, ಕೇಂದ್ರ ಸಮಿತಿ ಕಲೆ ಸಾಂಸ್ಕೃತಿಕ ನಿರ್ದೇಶಕರಾದ ಜಗದೀಶ್ ಕುಮಾರ್, ಮಾಜಿ ಅಧ್ಯಕ್ಷರಾದ ನಾರಾಯಣ ಬಿ.ಎಸ್, ಸುಪ್ರೀತ್ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಕಾರ್ಯದರ್ಶಿ ವಿನೋದ್ ಮಂಚಿ ವಂದಿಸಿದರು.ದಯಾನಂದ ಕರ್ಕೇರ ನಿರೂಪಿಸಿದರು.