ಮಂಗಳೂರು :- ವಿಶ್ವ ವಿಖ್ಯಾತ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಮಂಗಳೂರು ದಸರಾ ಮಹೋತ್ಸವದ ಶಾರದಾ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡ ಸಾವಿರಾರು ಭಕ್ತರಿಗೆ ಯುವವಾಹಿನಿ (ರಿ.) ಮಂಗಳೂರು ಘಟಕವು ಉಚಿತ ಶರಬತ್ತು ಸೇವೆಯನ್ನು ನೀಡುವುದರೊಂದಿಗೆ ಜನಮನ ಗೆದ್ದಿತು. ಮಂಗಳೂರು ದಸರಾ ಮಹೋತ್ಸವದ ಶೋಭಾ ಯಾತ್ರೆಯ ದಿನವಾದ 05 ಅಕ್ಟೋಬರ್ 2022ರ ಬೆಳಿಗ್ಗೆಯಿಂದಲೇ ಶರಬತ್ತು ಸೇವೆಗೆ ಪೂರ್ವ ತಯಾರಿ ಕಾರ್ಯಕ್ರಮಗಳು ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಬಳಿಯಿರುವ ಎಸ್. ಎಲ್. ಡೈಮಂಡ್ ಮಳಿಗೆಯ ಅಂಗಣದಲ್ಲಿ ಘಟಕದ ಅಜೀವ ಸದಸ್ಯರಾದ ಬಾಲಕೃಷ್ಣ ಪಚ್ಚನಾಡಿಯವರ ಸಂಪೂರ್ಣ ಸಹಕಾರದಿಂದ ಪಕೋಡ ಟೆಂಟ್ ಹಾಕುವ ಮೂಲಕ ಬಿರುಸಿನಿಂದ ಪ್ರಾರಂಭವಾಯಿತು. ಮಧ್ಯಾಹ್ನ 2.00 ಗಂಟೆಯಿಂದ ಘಟಕದ ಎಲ್ಲಾ ಸದಸ್ಯರು, ಮಂಗಳೂರು ಮಹಿಳಾ ಘಟಕದ ಸದಸ್ಯರು ಹಾಗೂ ಇತರ ಘಟಕಗಳ ಹೆಚ್ಚಿನ ಸದಸ್ಯರು, ಮಕ್ಕಳು ಎಲ್ಲರೂ ಸೇರಿ ಶರಬತ್ತು ತಯಾರಿಸುವ ಕಾರ್ಯದಲ್ಲಿ ಬಹಳ ಉತ್ಸಾಹದಿಂದ ಪಾಲ್ಗೊಂಡರು. ಎಲ್ಲರಿಗೂ ಜೊತೆ ಕಾರ್ಯದರ್ಶಿಯವರಾದ ನಾರಾಯಣ ಕರ್ಕೇರರವರು ಚಾ, ತಿಂಡಿ ನೀಡಿ ಸತ್ಕರಿಸಿದರು. ಪಕೋಡ ಟೆಂಟ್ ನ ಮುಂಬಾಗದಲ್ಲಿ ಗುರು ಮಂಟಪ ಹಾಗೂ ಶರಬತ್ತು ವಿತರಣೆಗಾಗಿ ಕೌಂಟರ್ ಗಳನ್ನು ರಚಿಸಲಾಯಿತು. ಸಂಜೆ 5.00 ಗಂಟೆಗೆ ಸರಿಯಾಗಿ ಗುರು ಮಂಟಪದಲ್ಲಿ, ಘಟಕದ ಸದಸ್ಯರ ಹಾಗೂ ಭಕ್ತರ ಸಮ್ಮುಖದಲ್ಲಿ ಘಟಕದ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ಭೋಜ ಪೂಜಾರಿಯವರು ಗುರು ಪ್ರಾರ್ಥನೆಯೊಂದಿಗೆ ಗುರು ಪೂಜೆಯನ್ನು ನೆರವೇರಿಸಿದರು. ಎಸ್ ಎಲ್. ಡೈಮಂಡ್ ನ ಮಾಲಕರಾದ ಎಂ. ರವೀಂದ್ರ ಶೇಟ್ ರವರು ಗುರುಗಳಿಗೆ ಪೂಜೆ ಸಲ್ಲಿಸಿ, ದೀಪ ಬೆಳಗಿಸುವುದರ ಮೂಲಕ ಶರಬತ್ತು ಸೇವಾ ಕಾರ್ಯಕ್ರಮವನ್ನು ಉದ್ಘಾಟಿಸಿ, ನಮ್ಮ ಮಳಿಗೆಯ ಆವರಣದಲ್ಲಿ ನಡೆಯುವ, ಬಾಯಾರಿದವರಿಗೆ ಶರಬತ್ತು ನೀಡುವ ಈ ಪುಣ್ಯಕಾರ್ಯವು ಅತ್ಯಂತ ಯಶಸ್ವಿಯಾಗಲೆಂದು ಶುಭ ಹಾರೈಸಿದರು.
ರವೀಂದ್ರ ಶೇಟ್ ರವರು, ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ ಅಮೀನ್ ಮಟ್ಟುರವರು, ಕಾರ್ಯದರ್ಶಿ ಸತೀಶ್ ಕಿಲ್ಪಾಡಿ, ಉಪಾಧ್ಯಕ್ಷರಾದ ರಾಜೇಶ್ , ಕೋಶಾಧಿಕಾರಿ ಜಗದೀಶ್ ಚಂದ್ರ ಹಾಗೂ ಘಟಕದ ಅಧ್ಯಕ್ಷರಾದ ಗಣೇಶ ವಿ. ಕೋಡಿಕಲ್, ಕಾರ್ಯದರ್ಶಿ ಅಶೋಕ್ ಅಂಚನ್, ಸಂಚಾಲಕರಾದ ರಜಿತ್ ಕುಮಾರ್ ಹಾಗೂ ಸಲಹೆಗಾರರಾದ ಸುನೀಲ್ ಕುಮಾರ್ ಅಂಚನ್ ಭಕ್ತರಿಗೆ ಶರಬತ್ತು ನೀಡುವುದರ ಮೂಲಕ, ಶರಬತ್ತು ಸೇವೆಗೆ ಚಾಲನೆ ನೀಡಿದರು. ಕುದ್ರೋಳಿ ಕ್ಷೇತ್ರದ ಅಧ್ಯಕ್ಷರು ಎಚ್. ಎಸ್. ಸಾಯಿರಾಮ್, ಕಾರ್ಯದರ್ಶಿಯವರಾದ ಮಾಧವ ಸುವರ್ಣ, ಕೋಶಾಧಿಕಾರಿಯವರಾದ ಪದ್ಮರಾಜ್ ಆರ್., ಸಚಿವರಾದ ಯು. ಟಿ. ಖಾದರ್, ವಿವಿಧ ಸಂಘ ಸಂಸ್ಥೆಗಳ ಗಣ್ಯರು, ಘಟಕದ ಮಾಜಿ ಅಧ್ಯಕ್ಷರು, ವಿವಿಧ ಘಟಕಗಳ ಅಧ್ಯಕ್ಷರು ಹಾಗೂ ಮತ್ತಿತರ ಗಣ್ಯರು, ಶರಬತ್ತು ಸೇವಿಸಿ, ಶರಬತ್ತು ಸೇವೆ ಮಾಡುತ್ತಿರುವ ಯುವವಾಹಿನಿ (ರಿ.) ಮಂಗಳೂರು ಘಟಕಕ್ಕೆ ಶುಭ ಹಾರೈಸಿದರು. ಘಟಕದ ಹಾಗೂ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಯಶವಂತ ಪೂಜಾರಿಯವರು ಶರಬತ್ತು ಸೇವೆಗೆ ಸಂಪೂರ್ಣ ಕೊಡುಗೆ ನೀಡಿ, ಸಹಕರಿಸಿದ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಮಾಡಿ ಕಾರ್ಯಕ್ರಮವು ಅಚ್ಚುಕಟ್ಟಾಗಿ ಯಶಸ್ವಿಯಾಗುವಂತೆ ಸಹಕರಿಸಿದರು. ಮನಾಪದ ಮೇಯರ್ ಜಯನಂದ ಅಂಚನ್ ಹಾಗೂ ಸಿಬ್ಬಂದಿ ವರ್ಗ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ನೀಡಿ ಸಹಕರಿಸಿದರು. ಅಂದವಾಗಿ ಗುರು ಮಂಟಪವನ್ನು ಮಾಜಿ ಅಧ್ಯಕ್ಷರಾದ ಲಕ್ಷ್ಮಿ ನಾರಾಯಣ ರವರು ರಚಿಸಿ ಹಾಗೂ ಬೆಳಕಿನ ವ್ಯವಸ್ಥೆಯನ್ನು ಮಹೇಶ್ ಬೊಳೂರು ನೀಡಿ ಸಹಕರಿಸಿದರು. ಘಟಕದ ಎಲ್ಲಾ ಮಾಜಿ ಅಧ್ಯಕ್ಷರ, ಪದಾಧಿಕಾರಿಗಳ ಹಾಗೂ ಸರ್ವ ಸದಸ್ಯರ ಸಂಪೂರ್ಣ ಸಹಕಾರದೊಂದಿಗೆ ಹಾಗೂ ತನು, ಮನ, ಧನ ನೀಡಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲಾ ದಾನಿಗಳ ಸಹಕಾರದಿಂದ ಶರಬತ್ತು ಸೇವೆಯು ರಾತ್ರಿ ಸುಮಾರು 3:00 ಗಂಟೆಯವರೆಗೆ ಸಾವಿರಾರು ಭಕ್ತರಿಗೆ ನೀಡಲು ಸಾಧ್ಯವಾಯಿತು. ಘಟಕದ ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದರು.