ಕೂಳೂರು :- ಹರಿನಾಮ ಸಂಕೀರ್ತನೆಯೇ ಸಾಕು ಎಲ್ಲರ ಪಾಪಸಂಚಯವನ್ನು ಉಪಶಮನಗೊಳಿಸಲು. ಶೃತಿ, ತಾಳ, ಲಯ ಬದ್ಧವಾಗಿ ಭಜನೆಯ ರೂಪದಲ್ಲಿ ಭಗವಂತನನ್ನು ಸೇವಿಸಬಹುದು ಹಾಗೂ ಆರಾಧಿಸಬಹುದು. ದೇವರ್ಷಿಗಳಾದ ನಾರದರು ಹೇಳುತ್ತಾರೆ ಭಗವನ್ನಾಮವು ಒಂದೇ ನನ್ನ ಪ್ರಾಣ. ಆಧ್ಯಾತ್ಮಿಕ ಅಂಧಕಾರದ ಕಲಿಯುಗದಲ್ಲಿ ಭಗವನ್ನಾಮಹೊರತು ಬೇರೆಯಾವುದೇ ಆಶ್ರಯವಿಲ್ಲ. ಕೂಳೂರು ಘಟಕದಿಂದ ಪ್ರತಿ ತಿಂಗಳ ಒಂದು ದಿನ ಸಂಪರ್ಕದ ನೆಲೆಯಲ್ಲಿ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ಆನಂದ್ ರವರ ಸಂಚಾಲಕತ್ವದಲ್ಲಿ ನಡೆಸಿಕೊಂಡು ಬರುವ ಮನೆ ಮನೆ ಭಜನೆ ಕಾರ್ಯಕ್ರಮವು ಲಕ್ಷ್ಮೀ ಪೂಜೆಯ ಪ್ರಯುಕ್ತ ಘಟಕದ ನಿಕಟ ಪೂರ್ವ ಅಧ್ಯಕ್ಷರಾದ ನಯನ ರಮೇಶ್ ಇವರ ಮನೆಯಲ್ಲಿ ದಿನಾಂಕ 30 ಸೆಪ್ಟೆಂಬರ್ 2022 ಶುಕ್ರವಾರದಂದು ಸಂಜೆ 6.30 ಗಂಟೆಗೆ ನಡೆಸಲಾಯಿತು. ಸರಿ ಸುಮಾರು 2.00 ಗಂಟೆಗಳ ಕಾಲ ಮನೆಯವರು, ಸಂಬಂಧಿಕರು ಹಾಗೂ ಸದಸ್ಯರು ಭಜನೆ ಸಂಕೀರ್ತನೆಯಲ್ಲಿ ತಲ್ಲೀನರಾಗಿದ್ದರು. ರಾತ್ರಿ 8.30 ಕ್ಕೆ ಮಂಗಳಾರತಿಯೊಂದಿಗೆ ಭಜನೆಗೆ ಮಂಗಳ ಹಾಡಲಾಯಿತು. ನಂತರ ಬಂದಿರುವ ಮುತ್ತೈದೆಯರಿಗೆ ಬಾಗಿನ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷರಾದ ದೀಕ್ಷಿತ್ ಸಿ ಎಸ್, ಮಾಜಿ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್, ಭಾಸ್ಕರ್ ಕೋಟ್ಯಾನ್ ಮಾರ್ಗದರ್ಶಕರಾದ ಚಂದಪ್ಪ ಸನಿಲ್, ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಮುಕ್ತಾಯದ ಹಂತದಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.