ಮಾಣಿ :- ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು ಇದರ ವಿಶುಕುಮಾರ್ ದತ್ತಿನಿಧಿ ಸಮಿತಿ ವತಿಯಿಂದ ಕೊಡ ಮಾಡುವ 2022ನೇ ಸಾಲಿನ ವಿಶುಕುಮಾರ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 02 ಅಕ್ಟೋಬರ್ 2022 ರ ಆದಿತ್ಯವಾರದಂದು ಯುವವಾಹಿನಿ (ರಿ.)ಮಾಣಿ ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನ ಮಾಣಿ ಇಲ್ಲಿ ನೆರವೇರಿತು. ಸಾಹಿತಿ ಹಾಗೂ ವಿಮರ್ಶಕರಾದ ಡಾ.ಬಿ.ಜನಾರ್ದನ ಭಟ್ ಇವರಿಗೆ ಈ ಬಾರಿಯ ವಿಶುಕುಮಾರ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಲೇಖಕ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಡಾ.ನರೇಂದ್ರ ರೈ ದೇರ್ಲರವರು ಮಾತನಾಡಿ ” ಜಾತ್ಯಾತೀತ ಸಮಾಜ ನಿರ್ಮಿಸುವಲ್ಲಿ ಸಮರ್ಥ ಲೇಖಕನ ಪಾತ್ರ ಬಹುಮುಖ್ಯವಾಗಿದೆ. ನಾವು ಏನು ಎನ್ನುವುದು ನಮಗೆ ತಿಳಿದಾಗ ಸಮಾಜದಲ್ಲಿ ನಾವು ಮಾದರಿಯಾಗಬಹುದು. ವಿಶುಕುಮಾರ್ ಕನ್ನಡದ ಶ್ರೇಷ್ಠ ಸಾಹಿತಿ. ಕರಾವಳಿಯಲ್ಲಿ ಪಾಂಡಿತ್ಯಗಳು ಮನುಷ್ಯ ಮನುಷ್ಯನನ್ನು ಜೋಡಿಸುವ ಕಾರ್ಯ ಮಾಡದಿರುವುದು ವಿಷಾದನೀಯ ಎಂದು ನುಡಿದರು.
ಸಾಹಿತಿ ಡಾ. ಬಿ. ಜನಾರ್ದನ ಭಟ್ ಅವರಿಗೆ ವಿಶು ಕುಮಾರ್ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಿ, ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ವಿಶ್ರಾಂತ ಪ್ರಾಂಶುಪಾಲ ಡಾ. ಮಾಧವ ಭಟ್ ಮಾತನಾಡಿ ಸಾಹಿತ್ಯ ಬರಹಗಳನ್ನು ಓದುತ್ತಿರುವವರು ಅಪರೂಪವಾಗುತ್ತಿರುವ ಸನ್ನಿವೇಶದಲ್ಲಿ ಡಾ.ಜನಾರ್ದನ ಭಟ್ ಅವರ ಸಾಹಿತ್ಯ ಸಾಧನೆ ವಿಶೇಷವಾಗಿದೆ. ಕನ್ನಡ ನಾಡಿನ ಮೇರು ಸಾಹಿತಿ ವಿಶುಕುಮಾರ್ ಅವರ ಹೆಸರಲ್ಲಿ ಪ್ರಶಸ್ತಿ ನೀಡುತ್ತಿರುವುದು ಅವರ ಜೀವನ ಮೌಲ್ಯ ಹೆಚ್ಚಿಸಿದೆ ಎಂದರು. ಮಂಗಳೂರು ಶ್ರೀ ಗೋಕರ್ಣನಾಥೇಶ್ವರ ಕಾಲೇಜು ವಾಣಿಜ್ಯ ವಿಭಾಗ ಮುಖ್ಯಸ್ಥೆ ಡಾ. ಆಶಾಲತಾ ಎಸ್ ಸುವರ್ಣ ಅವರು ಸಮೀಕ್ಷ ಶಿರ್ಲಾಲು ಅವರಿಗೆ ಡಾ. ಪ್ರಭಾಕರ ನೀರುಮಾರ್ಗ ಯುವ ಸಾಹಿತಿ ಪ್ರಶಸ್ತಿ ಪ್ರದಾನ ಮಾಡಿದರು. ಡಾ. ತ್ರಿವೇಣಿ ರಮೇಶ್ ರವರು ಸನ್ಮಾನ ಪತ್ರವನ್ನು ವಾಚಿಸಿದರು.
ಇದೇ ಸಂದರ್ಭದಲ್ಲಿ ‘ಯುವಸ್ಫೂರ್ತಿ ಭರವಸೆಯ ಬೆಳಕು’ ಪುಸ್ತಕ ಬಿಡುಗಡೆಯಾಯಿತು. ಕಾರ್ಯಕ್ರಮವನ್ನು ಮಾಣಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಅಧ್ಯಕ್ಷ ಶ್ರೀ ಸುರೇಶ್ ಸೂರ್ಯರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು ವಹಿಸಿದರು. ಯುವವಾಹಿನಿ(ರಿ.) ಮಾಣಿ ಘಟಕದ ಅಧ್ಯಕ್ಷ ಜಯಂತ ಬರಿಮಾರು ಮತ್ತು ಕೇಂದ್ರ ಸಮಿತಿಯ ಪ್ರದಾನ ಕಾರ್ಯದರ್ಶಿ ಶ್ರೀ ಸತೀಶ್ ಕಿಲ್ಪಾಡಿ ಉಪಸ್ಥಿತರಿದ್ದರು. ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಂಗವಾಗಿ ನಡೆಸಿದ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ ಲತೀಶ್ ಎಂ.ಸಂಕೋಳಿಗೆ, ದ್ವಿತೀಯ ಬಹುಮಾನ ಪಡೆದ ಸುಪ್ರೀತಾ ಚರಣ್ ಪಾಲಪ್ಪೆ, ತೃತೀಯ ಸ್ಥಾನ ಗಳಿಸಿದ ಅರ್ಚನ ಎಂ ಬಂಗೇರ, ತೀರ್ಪುಗಾರರ ಮೆಚ್ಚುಗೆ ಪಡೆದ ಯಶಸ್ವಿನಿ ಕುಳಾಯಿ ಕವನ ವಾಚಿಸಿದರು. ಸೆಲ್ಫಿ ಉತ್ತರ ಸ್ಪರ್ಧೆಯಲ್ಲಿ ನಯನ ನೆಕ್ಕಿತ್ತಡ್ಕ ಕಡಬ, ಅರ್ಚನ ಎಂ ಬಂಗೇರ ಕುಂಪಲ, ರತಿ ಮಾಣಿ ಬಹುಮಾನ ಪಡೆದರು. ರಸಪ್ರಶ್ನೆ ಸ್ಪರ್ಧೆಯಲ್ಲಿ ಉಡುಪಿ ಘಟಕ ಪ್ರಥಮ, ಹಾಗೂ ಕೊಲ್ಯ ಘಟಕ ದ್ವಿತೀಯ ಬಹುಮಾನ ಪಡೆಯಿತು.ಅತೀ ಹೆಚ್ಚು ಸದಸ್ಯರ ಪಾಲ್ಗೊಳ್ಳುವಿಕೆಗಾಗಿ ಮಂಗಳೂರು ಘಟಕ ಮತ್ತು ಅತೀ ದೂರದಿಂದ ಆಗಮನಕ್ಕಾಗಿ ಬೆಂಗಳೂರು ಘಟಕ ವಿಶೇಷ ಬಹುಮಾನ ಪಡೆದು ಕೊಂಡವು. ಮಾಣಿ ಘಟಕದ ಸದಸ್ಯರ ನಾಡಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ, ದತ್ತಿ ನಿಧಿ ಸಮಿತಿ ಸಂಚಾಲಕ ಪ್ರಶಾಂತ ಅನಂತಾಡಿ ಸ್ವಾಗತಿಸಿದರು. ಟಿ.ಶಂಕರ ಸುವರ್ಣ ಪ್ರಸ್ತಾವನೆಗೈದರು. ಮುದ್ದು ಮೂಡುಬೆಳ್ಳೆ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿದರು. ಸಮಿತಿಯ ಕಾರ್ಯದರ್ಶಿ ಜೀವನ್ ಕೊಲ್ಯ ವಂದಿಸಿದರು. ರೇಣುಕಾ ಕಣಿಯೂರು, ಸ್ಮಿತೇಶ್ ಬಾರ್ಯ ಕಾರ್ಯಕ್ರಮ ನಿರೂಪಿಸಿದರು.