ಉಡುಪಿ :- ಸಾಮಾಜಿಕ ಕಾಳಜಿಯೊಂದಿಗೆ ಸಮಾಜದ ದುರ್ಬಲರಿಗೆ ನೆರವು ಚಾಚುವ ಯುವವಾಹಿನಿಯ ಸಮಾಜಮುಖಿ ಚಿಂತನೆಯು ನನಗೆ ಇಷ್ಟವಾಗಿದ್ದು ತಮ್ಮ ಬಿಡುವಿನ ಸಮಯದಲ್ಲಿ ನಾನು ಕೂಡ ಯುವವಾಹಿನಿಯಲ್ಲಿ ತೊಡಗಿಸಿಕೊಳ್ಳುವ ಭರವಸೆಯ ಬಗ್ಗೆ ಮಾತನಾಡುತ್ತಾ, ನಮ್ಮ ಮನೆಯ ಮಕ್ಕಳನ್ನು ಇತಿಮಿತಿಯಲ್ಲಿ ಬೆಳೆಸಬೇಕು, ಮಾದಕ ವ್ಯಸನದಿಂದ ದೂರವಿರಿಸಿ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಯುವ ಸಮುದಾಯ ಕೈ ಜೋಡಿಸಬೇಕು ಎಂದು ಉಡುಪಿಯ ಸೈಬರ್ ಕ್ರೈಂ ಇನ್ಸ್‌ಪೆಕ್ಟರ್ ಮಂಜುನಾಥ್ ರವರು ನುಡಿದರು. ಅವರು ದಿನಾಂಕ 18 ಸೆಪ್ಟೆಂಬರ್ 2022ರ ಭಾನುವಾರ ಯುವವಾಹಿನಿ ಉಡುಪಿ ಘಟಕದ ಯುವವಾಹಿನಿ ಸಭಾಂಗಣದಲ್ಲಿ ಜರಗಿದ 2022 – 23 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಮಂಜುನಾಥ ಆಯುರ್ವೇದ ಆಸ್ಪತ್ರೆ ಉಡುಪಿ, ಇದರ ವೈದ್ಯಕೀಯ ಅಧೀಕ್ಷಕರಾದ ಡಾ. ನಾಗರಾಜ್. ಎಸ್, ಮಾತನಾಡಿ ಯುವ ಜನತೆಗ ಒಳ್ಳೆಯ ವಿದ್ಯಾಭ್ಯಾಸ ಮಾಡಿ, ಸ್ವತಂತ್ರರಾಗಿ ಉತ್ತಮ ಸಮಾಜ ಕಟ್ಟಲು ಸಲಹೆ ನೀಡಿದರು. ಪದಗ್ರಹಣದ ಸಭಾಧ್ಯಕ್ಷತೆಯನ್ನು ಪ್ರವೀಣ್ ಡಿ ಪೂಜಾರಿಯವರು ವಹಿಸಿ, ಆಗಮಿಸಿದ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿ, ಗತ ವರ್ಷದಲ್ಲಿ ಸಮಾಜಮುಖಿ ಚಿಂತನೆಯ ಕಾರ್ಯಕ್ರಮಗಳನ್ನು ನಡೆಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿಯೊಂದಿಗೆ ಪದ ಪ್ರದಾನ ವನ್ನು ಯಶಸ್ವಿಯಾಗಿ ನಡೆಸಿ, ಕಳೆದ ವರ್ಷದಲ್ಲಿ ಉತ್ತಮ ಕಾರ್ಯಕ್ರಮ ನೀಡಿದ ಪ್ರವೀಣ್ ಡಿ ಪೂಜಾರಿ ನೇತೃತ್ವದ ತಂಡಕ್ಕೆ ಅಭಿನಂದನೆ ಸಲ್ಲಿಸಿ , ನೂತನ ಅಧ್ಯಕ್ಷರಾದ ಮಹಾಬಲ ಅಮೀನ್ ಇವರ ತಂಡಕ್ಕೆ ಶುಭ ಕೋರಿದರು. ಮಾಜಿ ಅಧ್ಯಕ್ಷರಾದ ರಘುನಾಥ್ ಮಾಬಿಯನ್ ರವರು ಪ್ರಾಸ್ತಾವಿಕ ಮಾತನಾಡಿ ಉಡುಪಿ ಘಟಕ ನಡೆದು ಬಂದ ಹಾದಿಯ ವಿವರಗಳನ್ನು ನೀಡಿದರು.
ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಯವರಾದ ದೀಪಕ್ ಕುಮಾರ್ ಎರ್ಮಾಳ್ ನೂತನ ತಂಡಕ್ಕೆ ಶುಭಾಶಯ ಕೋರಿದರು. ವಿವಿಧ ಘಟಕದಿಂದ ಸದಸ್ಯರು ಪಾಲ್ಗೊಂಡು, ಕಾರ್ಕಳ ಘಟಕ ಪರವಾಗಿ ಅಧ್ಯಕ್ಷರಾದ ತಾರಾನಾಥ್ ಕೋಟ್ಯಾನ್ ಶುಭ ಕೋರಿದರು. ನಿರ್ಗಮಿತ ಅಧ್ಯಕ್ಷರಾದ ಪ್ರವೀಣ್ ಡಿ ಪೂಜಾರಿ ಇವರನ್ನು ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಲಾಯಿತು. ನೂತನ ಅಧ್ಯಕ್ಷರಾದ ಮಹಾಬಲ ಅಮೀನ್ ರವರು ಮಾತನಾಡಿ ಎಲ್ಲ ಮಾಜಿ ಅಧ್ಯಕ್ಷರುಗಳ ಹಾಗೂ ಸದಸ್ಯರ ಸಹಕಾರ ಬಯಸಿದರು. ದಯಾನಂದ ಕರ್ಕೇರರವರು ಕಾರ್ಯದರ್ಶಿಯ ನೆಲೆಯಲ್ಲಿ ಗತ ವರ್ಷದ ವರದಿಯನ್ನು ಮಂಡಿಸಿದರು. ಸಭಾಧ್ಯಕ್ಷರಾದ ಪ್ರವೀಣ್. ಡಿ. ಪೂಜಾರಿಯವರು ಬಂದಂತಹ ಅತಿಥಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ನೂತನ ಕಾರ್ಯದರ್ಶಿ ವಿನೋದ್ ಮಂಚಿ ವಂದನಾರ್ಪಣೆಗೈದರು. ಶ್ರೀಲಕ್ಷ್ಮೀ ಹಾಗೂ ಸಾರಿಕಾರವರು ಕಾರ್ಯಕ್ರಮ ನಿರೂಪಿಸಿದರು.
ಘಟಕದ ಸಲಹೆಗಾರರಾದ ಶಂಕರ್ ಪೂಜಾರಿ ದ್ವಾರಕಾ, ಸಂಗಮ್ ಹೋಟೆಲ್‌ನ ಮಾಲೀಕರಾದ ಸುರೇಂದ್ರ ಕೋಟ್ಯಾನ್, ಪಡುಬಿದ್ರಿ ಘಟಕದ ಸದಸ್ಯರು, ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಸಂತೋಷ್ ಕುಮಾರ್, ಸ್ಥಾಪಕ ಅಧ್ಯಕ್ಷರಾದ ಚಂದ್ರಶೇಖರ್ ಉದ್ಯಾವರ, ಮಾಜಿ ಅಧ್ಯಕ್ಷರು, ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಸಹ ಭೋಜನದ ಮುಖಾಂತರ ಕಾರ್ಯಕ್ರಮ ಮುಕ್ತಾಯಗೊಂಡಿತು.