ಪಡುಬಿದ್ರಿ : ಯುವವಾಹಿನಿ ಸಂಸ್ಥೆ ಹಲವಾರು ಸಮಾಜಮುಖಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಚುರ ಪಡಿಸುತ್ತಾ ಸಮಾಜದ ಅಭಿವೃದ್ಧಿಗಾಗಿ ದುಡಿಯುತ್ತಿರುವುದು ಸಂತಸವಾಗಿದೆ. ಪಡುಬಿದ್ರಿ ಘಟಕದ ಮುಂದಿನ ಕಾರ್ಯಕ್ರಮಗಳು ಶುಭವಾಗಲಿ ಎಂದು ಕನ್ನಂಗಾರು ಬ್ರಹ್ಮಬೈದರ್ಕಳ ಗರಡಿಯ ಅಧ್ಯಕ್ಷರಾದ ಶೀನ ಪೂಜಾರಿ ಹೇಳಿದರು. ಅವರು ದಿನಾಂಕ 18 ಸೆಪ್ಟೆಂಬರ್ 2022 ರಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಪಡುಬಿದ್ರಿ ಘಟಕದ 2022-23 ನೇ ಸಾಲಿನ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ವೈ ಸುಧೀರ್ ಕುಮಾರ್ ಮಾತನಾಡಿ, ಸಂಸ್ಥೆಯ ಪದವಿಯ ಕಾರ್ಯಾವಧಿ ಕೊನೆಯಾದಾಗ ಪದಾಧಿಕಾರಿಗಳು ಸಂತಸದಿಂದಿರದೆ ಹೊಸ ತಂಡಕ್ಕೆ ಬೆನ್ನೆಲುಬಾಗಿ ಮುಂದೆಯೂ ಸಹಕಾರ ನೀಡಿ ಹೊಸ ಕಾರ್ಯಯೋಜನೆ ನಿರ್ವಹಿಸಬೇಕು. ಹಳೆ ಬೇರು ಹೊಸ ಚಿಗುರು ಎಂಬ ಮಾತಿನಂತೆ ಪಡುಬಿದ್ರಿ ಯುವವಾಹಿನಿ ಘಟಕ ಕ್ರಿಯಾಶೀಲ ಘಟಕವಾಗಿದೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವುದರೊಂದಿಗೆ ಯುವವಾಹಿನಿಯ ಘಟಕಗಳಲ್ಲಿ ಪ್ರತಿಷ್ಠಿತವಾಗಿದೆ ಎಂದರು. ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ, ಮಾತನಾಡಿ ಯುವವಾಹಿನಿ ಶಿಸ್ತುಬದ್ಧ ವ್ಯವಸ್ಥೆ ಸಮಯ ಪರಿಪಾಲನೆ ಸಂಸ್ಥೆಯ ಗರಿಮೆಯಾಗಿದೆ. ಸಮಾಜ ಚಿಂತನೆ ನಮ್ಮಲ್ಲಿರಲಿ, ಯುವವಾಹಿನಿಯ ನಿಯಮದಂತೆ ಒಂದು ವರ್ಷದ ಅಧಿಕಾರಾವಧಿಯಲ್ಲಿ ಸಾಧ್ಯವಾದಷ್ಟು ಕಾರ್ಯಕ್ರಮಗಳು ಜರಗಲಿ ಎಂದು ಶುಭ ಹಾರೈಸಿದರು. ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಶೈಕ್ಷಣಿಕ ಆರ್ಥಿಕ ಸಹಾಯ, ಕಲಿಕಾ ಪರಿಕರ ವಿತರಿಸಲಾಯಿತು. ಘಟಕಕ್ಕೆ ಸೇರ್ಪಡೆಗೊಂಡ ನೂತನ ಸದಸ್ಯರನ್ನು ಗೌರವಿಸಲಾಯಿತು. ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು ಮತ್ತು ಘಟಕದ ಅಧ್ಯಕ್ಷರಾದ ಯಶೋದರನ್ನು ಸನ್ಮಾನಿಸಲಾಯಿತು.
ಅಧಿಕಾರ ಹಸ್ತಾಂತರ : ಘಟಕದ ಅಧ್ಯಕ್ಷರಾದ ಯಶೋದ ನಿಯೋಜಿತ ಅಧ್ಯಕ್ಷರಾದ ಶಾಶ್ವತ್ ರವರಿಗೆ ಮತ್ತು ಘಟಕದ ಕಾರ್ಯದರ್ಶಿ ವಿಧಿತ್ ನಿಯೋಜಿತ ಕಾರ್ಯದರ್ಶಿ ಡಾ | ಐಶ್ವರ್ಯ ಸಿ ಅಂಚನ್ ರವರಿಗೆ ಅಧಿಕಾರ ಹಸ್ತಾಂತರಿಸಿದರು. ಸಾಹಿತ್ಯ ಸೌರಭದ ಅಂಗವಾಗಿ ನಡೆದ ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಚಿತ್ರಾಕ್ಷಿ ಕೆ ಕೋಟ್ಯಾನ್, ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ ಪಡುಬಿದ್ರಿ ಅಧ್ಯಕ್ಷರಾದ ಯಶೋದ ವಹಿಸಿ, ಸ್ವಾಗತಿಸಿದರು. ಮಾಜಿ ಅಧ್ಯಕ್ಷರಾದ ಸುಜಿತ್ ಕುಮಾರ್ ಪ್ರಸ್ತಾವನೆಗೈದರು. ಕಾರ್ಯದರ್ಶಿ ವಿಧಿತ್ ಕುಮಾರ್ ವರದಿ ವಾಚಿಸಿದರು. ಚಿತ್ರಾಕ್ಷಿ ಕೆ ಕೋಟ್ಯಾನ್ ನೂತನ ಪದಾಧಿಕಾರಿಗಳ ಪಟ್ಟಿ ವಾಚಿಸಿದರು. ಪ್ರಸಾದ್ ವೈ ಕೋಟ್ಯಾನ್ ಮತ್ತು ತೃಪ್ತಿ ಕಾರ್ಯಕ್ರಮ ನಿರೂಪಿಸಿದರು. ಡಾ | ಐಶ್ವರ್ಯ ಸಿ ಅಂಚನ್ ವಂದಿಸಿದರು.