ಸಸಿಹಿತ್ಲು :- ಸಮಾಜದ ಯುವ ಜನತೆಯ ಅಮೂಲಾಗ್ರ ಪರಿವರ್ತನೆ ಪ್ರಸ್ತುತ ದಿನದಲ್ಲಿ ತೀರಾ ಅಗತ್ಯವಾಗಿದೆ, ಇಂತಹ ಪರಿವರ್ತನೆಯು ಯುವವಾಹಿನಿಯಂತಹ ಸಂಸ್ಥೆಯಿಂದ ಮಾತ್ರ ಸಾಧ್ಯ ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಅಗ್ಗಿದಕಳಿಯ ಸಸಿಹಿತ್ಲು ಇದರ ಅಧ್ಯಕ್ಷರಾದ ಪ್ರಕಾಶ್ ಕುಮಾರ್ ಬಿಎನ್.ತಿಳಿಸಿದರು. ಅವರು ನಾರಾಯಣಗುರು ಸಮುದಾಯ ಭವನದಲ್ಲಿ ನಡೆದ ಯುವವಾಹಿನಿ (ರಿ.) ಸಸಿಹಿತ್ಲು ಘಟಕದ 2022-23 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯೆ ಉದ್ಯೋಗ ಸಂಪರ್ಕ ಎಂಬ ಮೂರು ಮುಖ್ಯ ಧ್ಯೇಯ ಇರಿಸಿಕೊಂಡ ಯುವವಾಹಿನಿ ಸಂಸ್ಥೆಯು ಹುಟ್ಟು ಪಡೆದ ಸಮಯದಲ್ಲೇ ಯುವವಾಹಿನಿ (ರಿ.) ಸಸಿಹಿತ್ಲು ಘಟಕವೂ ಹುಟ್ಟಿಕೊಂಡಿದ್ದು, ಸಾಂಸ್ಕೃತಿಕ ಮತ್ತು ಇತರ ವಿಶೇಷವಾದ ಕಾರ್ಯಕ್ರಮಗಳನ್ನು ನೀಡುವ ಮೂಲಕ ಯುವವಾಹಿನಿ ಕೂಟದಲ್ಲಿ ಶ್ರೇಷ್ಠ ಘಟಕವಾಗಿ ಗುರುತಿಸಿಕೊಂಡಿದೆ ಎಂದು, ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು ತಿಳಿಸಿದರು
ಅವರು ಸಸಿಹಿತ್ಲು ಘಟಕದ ನೂತನ ತಂಡಕ್ಕೆ ಪ್ರತಿಜ್ಞಾ ವಿಧಿ ಬೋಧಿಸಿ, ಘಟಕದಿಂದ ಗೌರವ ಸ್ವೀಕರಿಸಿ ಮಾತನಾಡಿದರು. ಈ ಬಾರಿಯ ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದು ಉತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅದೇ ರೀತಿ ಯುವವಾಹಿನಿಯಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ಸದಸ್ಯರಾದ ಮೋಹನ್‍ದಾಸ್ ಅವರನ್ನು ಸಸಿಹಿತ್ಲು ಘಟಕದ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನಕ್ಕೆ ಉತ್ತರಿಸಿದ ಅವರು ಯುವವಾಹಿನಿಯೊಂದಿಗಿನ ತನ್ನ ಅನನ್ಯ ಸಂಬಂಧ, ಯುವವಾಹಿನಿಯಿಂದ ತಾನು ಗಳಿಸಿದ ಪ್ರೀತಿಯನ್ನು ಭಾವನ್ಮಾತವಾಗಿ ಸಭೆಯ ಮುಂದಿಟ್ಟರು. ಯುವವಾಹಿನಿ ಸಸಿಹಿತ್ಲು ಘಟಕವನ್ನು ಕಳೆದೊಂದು ವರುಷದಲ್ಲಿ ಯಶಸ್ವಿಯಾಗಿ ಮುನ್ನಡೆಸಿದ ಘಟಕದ ಅಧ್ಯಕ್ಷರಾದ ಶೈಲೇಶ್ ಸಸಿಹಿತ್ಲು ಅವರನ್ನೂ ಗೌರವಿಸಲಾಯಿತು. ವೇದಿಕೆಯಲ್ಲಿ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಭಾಸ್ಕರ್ ಕೋಟ್ಯಾನ್, ಬಿಲ್ಲವರ ಹಿತವರ್ಧಕ ಸಂಘ (ರಿ.) ಸಸಿಹಿತ್ಲು ಇದರ ಅಧ್ಯಕ್ಷರಾದ ಜಗನ್ನಾಥ್ ಕೋಟ್ಯಾನ್, ಹಳೆಯಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ಧನ್‍ರಾಜ್ ಕೋಟ್ಯಾನ್, ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಸಸಿಹಿತ್ಲು ಇದರ ಮಹಿಳಾ ಸಮಿತಿ ಅಧ್ಯಕ್ಷೆ ಸರೋಜಿನಿ ಮತ್ತು ಘಟಕದ ಕಾರ್ಯದರ್ಶಿ ಚಂದ್ರಶೇಖರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಸಿಹಿತ್ಲು ಘಟಕದ ನೂತನ ಅಧ್ಯಕ್ಷರಾಗಿ ಶ್ರೀಮತಿ ಮೋಹಿನಿ ಕಾರ್ಯದರ್ಶಿಯಾಗಿ ಪ್ರತಾಪ್ ಆಯ್ಕೆಯಾಗಿ ಇತರ ಕಾರ್ಯಕಾರಿ ಸಮಿತಿ ಸದಸ್ಯರೊಂದಿಗೆ ಪ್ರಮಾಣವಚನ ಸ್ವೀಕರಿಸಿದರು. ಘಟಕದ ಮಾಜಿ ಅಧ್ಯಕ್ಷರಾದ ಎಸ್.ಆರ್ ಪ್ರದೀಪ್ ಸ್ವಾಗತಿಸಿ, ಪ್ರತಾಪ್ ವಂದಿಸಿದರು, ತಿಲಕ್‍ರಾಜ್ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದ ಮೊದಲು ಘಟಕದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.