ಸಾಂಸ್ಕೃತಿಕ ಚಟುವಟಿಕೆಗಳು ಸಂಘಟನೆಗೆ ಪೂರಕ ವಾತಾವರಣ ನಿರ್ಮಾಣ ಮಾಡಲಿದೆ, ಈ ನಿಟ್ಟಿನಲ್ಲಿ ಯುವವಾಹಿನಿಯ ಡೆನ್ನಾನ ಡೆನ್ನನ ಸಾಂಸ್ಕೃತಿಕ ಸೌರಭದ ಯಶಸ್ಸು ಸಂಘಟನೆಯ ಯಶಸ್ಸು ಎಂದು ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ತಿಳಿಸಿದರು. ಅವರು 21 ಆಗಸ್ಟ್ 2022ರಂದು ಕಟಪಾಡಿ ವಿಶ್ವನಾಥ ಕ್ಷೇತ್ರದ ಸಪ್ತಗಿರಿ ಸಭಾಂಗಣದಲ್ಲಿ ರಾಜ್ಯಾದ್ಯಂತ 33 ಘಟಕಗಳನ್ನು ಹೊಂದಿರುವ ಪ್ರತಿಷ್ಠಿತ ಯುವವಾಹಿನಿ ಸಂಸ್ಥೆಯ ಸದಸ್ಯರ ಪ್ರತಿಭೆ ಅನಾವರಣಗೊಳಿಸುವ ನಿಟ್ಟಿನಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಉಡುಪಿ ಯುವವಾಹಿನಿ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕೃತಿಕ ಸೌರಭ ಡೆನ್ನಾನ ಡೆನ್ನನ-2022 ರ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸಾಂಸ್ಕೃತಿಕ ಲೋಕದಲ್ಲಿ ರಚನಾತ್ಮಕವಾಗಿ ತೊಡಗಿಸಿಕೊಂಡ ಯುವವಾಹಿನಿ ಸಂಘಟನಾತ್ಮಕ ಗೆಲುವಿಗೆ ಅಡಿಪಾಯವಾಗಲಿದೆ : ಪದ್ಮರಾಜ್
ಸಾಂಸ್ಕೃತಿಕ ಲೋಕದಲ್ಲಿ ರಚನಾತ್ಮಕವಾಗಿ ತೊಡಗಿಸಿಕೊಂಡ ಯುವವಾಹಿನಿ ಸಂಸ್ಥೆ ಆಯೋಜಿಸಿದ ಡೆನ್ನಾನ ಡೆನ್ನನ ಸಂಘಟನಾತ್ಮಕ ಗೆಲುವಿಗೆ ಅಡಿಪಾಯವಾಗಲಿದೆ. ಯುವವಾಹಿನಿಯ ಪ್ರತಿಭಾನ್ವಿತ ಸದಸ್ಯರ, ಪ್ರತಿಭಾ ಪ್ರದರ್ಶನಕ್ಕೆ ಡೆನ್ನಾನ ಸಾಂಸ್ಕೃತಿಕ ಸೌರಭ ಅತ್ಯುತ್ತಮ ವೇದಿಕೆ, ಸದಸ್ಯರ ಯೋಚನಾ ಸಾಮರ್ಥ್ಯ, ಕಲಾ ಚಾತುರ್ಯ ನಮಗೆಲ್ಲರಿಗೂ ಹೆಗ್ಗಳಿಕೆಯ ವಿಚಾರ, ಸ್ಪರ್ಧೆಯ ಫಲಿತಾಂಶ ಏನೇ ಇರಲಿ, ಕೊನೆಯಲ್ಲಿ ಗೆಲ್ಲುವುದು ಯುವವಾಹಿನಿ ಇಲ್ಲಿ ಎಲ್ಲರೂ ವಿಜೇತರೆ.. ಎಲ್ಲರೂ ಅದೃಷ್ಟವಂತರೇ… ಯಾಕೆಂದರೆ ನಮ್ಮ ಸಮಾಜದ ಒಂದು ಪ್ರಮುಖ ಕ್ಷೇತ್ರ, ಅದರಲ್ಲೂ ಉಡುಪಿ ಜಿಲ್ಲೆಯಲ್ಲಿ ಬಿಲ್ಲವ ಸಮಾಜದ ಶಕ್ತಿಕೇಂದ್ರ ವಾದಂತಹ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ಬಂದು ಕಲಾ ಸೇವೆ ನೀಡುವ ಸದವಕಾಶ ದೊರೆತಿರುವುದು ನಮ್ಮ ಸದಸ್ಯರ ಪುಣ್ಯವೇ ಸರಿ. ಎಂದು ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮಾರಾಜ್ ಆರ್ ತಿಳಿಸಿದರು. ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ಡೆನ್ನಾನ ಡೆನ್ನನ -2022 ವಿಜೇತರು : ಯುವವಾಹಿನಿಯ 20 ಘಟಕಗಳು ಸ್ಪರ್ಧಿಸಿದ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಘಟಕ ಪ್ರಥಮ ಬಹುಮಾನ, ಹಳೆಯಂಗಡಿ ಘಟಕ ದ್ವಿತೀಯ, ಪಣಂಬೂರು ಕುಳಾಯಿ ಘಟಕ ತೃತೀಯ ಬಹುಮಾನ ಪಡೆಯಿತು. ವೈಯಕ್ತಿಕವಾಗಿ ಶ್ರೇಷ್ಠ ನಿರ್ವಹಣೆ ನೀಡಿದ ನಿರ್ಮಿತಾ ಹಳೆಯಂಗಡಿ ಘಟಕ, ಶ್ರವಣ್ ಕುಮಾರ್ ಪಡುಬಿದ್ರಿ ಘಟಕ, ಚಂದ್ರಹಾಸ್ ಬೆಳ್ತಂಗಡಿ ಘಟಕ, ಯುವರಾಜ್ ಬೆಳ್ತಂಗಡಿ ಘಟಕ ಮತ್ತು ರಿದ್ವಿ ಡಿ ಪೂಜಾರಿ ಪಣಂಬೂರು ಕುಳಾಯಿ ಘಟಕ, ಮೋಕ್ಷ ಮಾಣಿ ಘಟಕ ಬಾಲ ನಟ ವಿಶೇಷ ಬಹುಮಾನ ಪಡೆದರು. ಆಗಸ್ಟ್ ತಿಂಗಳಲ್ಲಿ ನಡೆಸಲಾಗಿದ್ದ ಸಾಹಿತ್ಯ ಸೌರಭ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಚಿತ್ರಕಲೆ, ಭಾಷಣ, ಪ್ರಬಂಧ ಏರ್ಪಡಿಸಲಾಗಿದ್ದು, ಇದರ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸ್ಪರ್ಧೆಯಲ್ಲಿ ಸುಮಾರು 800 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ನಾರಾಯಣಗುರು ಅರ್ಬನ್ ಕೋ- ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾದ ಹರಿಶ್ಚಂದ್ರ ಅಮೀನ್, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಗೀತಾಂಜಲಿ ಸುವರ್ಣ, ಉಡುಪಿ ಜಿಲ್ಲೆಯ ಬಿಲ್ಲವ ಪರಿಷತ್ ಅಧ್ಯಕ್ಷರಾದ ನವೀನ್ ಅಮೀನ್ ಶಂಕರಪುರ, ಕಾಪು ಬಿಲ್ಲವರ ಸಹಾಯಕ ಸಂಘದ ಗೌರವ ಅಧ್ಯಕ್ಷರಾದ ಪ್ರಭಾಕರ ಪೂಜಾರಿ, ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ದೀಪಕ್ ಕುಮಾರ್ ಎರ್ಮಾಳ್, ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷರಾದ ಪ್ರವೀಣ್ ಡಿ.ಪೂಜಾರಿ, ಮಹಾಬಲ ಅಮೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸ್ಪರ್ಧೆಯ ತೀರ್ಪುಗಾರರರು
ಪ್ರಶಾಂತ್ ಉದ್ಯಾವರ, ಸಂತೋಷ್ ಶೆಟ್ಟಿ ಹಿರಿಯಡ್ಕ, ಇಂದ್ರಾಳಿ ಸ್ವಪ್ನ ಮಂಗಳೂರು ಇವರುಗಳು ಡೆನ್ನಾನ ತೀರ್ಪುಗಾರರಾಗಿ ಭಾಗವಹಿಸಿದ್ದರು. ಅಮಿತಾಂಜಲಿ ಕಿರಣ್ ಸಾಹಿತ್ಯ ಸೌರಭ ತೀರ್ಪುಗಾರರನ್ನು ಪರಿಚಯಿಸಿದರು., ಉಡುಪಿ ಘಟಕದ ಕಾರ್ಯದರ್ಶಿ ದಯಾನಂದ ಕರ್ಕೇರ ಉಗ್ಗೆಲ್ ಬೆಟ್ಟು ಡೆನ್ನಾನ ತೀರ್ಪುಗಾರರನ್ನು ಪರಿಚಯಿಸಿದರು. ಕೇಂದ್ರ ಸಮಿತಿಯ ಪ್ರಥಮ ಉಪಾಧ್ಯಕ್ಷರಾದ ರಾಜೇಶ್ ಬಿ ಇವರು ಸೆಲ್ಪಿ ಕಂಟೆಸ್ಟ್ , ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಥಮ ಆತಿಥಿ ಹಾಗೂ ಅದೃಷ್ಟ ಶಾಲಿ ಆತಿಥಿ ವಿಜೇತರ ಫಲಿತಾಂಶ, ಕೇಂದ್ರ ಸಮಿತಿಯ ಕಲೆ, ಸಾಹಿತ್ಯ, ಸಾಂಸ್ಕೃತಿಕ ನಿರ್ದೇಶಕರಾದ ಜಗದೀಶ್ ಕುಮಾರ್ ಉಡುಪಿ, ಸಾಹಿತ್ಯ ಸೌರಭ ವಿಜೇತರ ಫಲಿತಾಂಶ ಹಾಗೂ ಡೆನ್ನಾನ ಸಂಚಾಲಕರಾದ ಅಶೋಕ್ ಕೋಟ್ಯಾನ್ ಉಡುಪಿ ಡೆನ್ನಾನ ಡೆನ್ನನ 2022 ವಿಜೇತರ ಫಲಿತಾಂಶ ಪ್ರಕಟಿಸಿದರು
ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷರಾದ ಪ್ರವೀಣ್ ಡಿ. ಪೂಜಾರಿ ಸ್ವಾಗತಿಸಿದರು.ಮಾಣಿ ಘಟಕದ ಕಾರ್ಯದರ್ಶಿ ರೇಣುಕಾ ಕಣಿಯೂರು ಮತ್ತು ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಸತೀಶ್ ಕಿಲ್ಪಾಡಿ ವಂದಿಸಿದರು.