ಕೂಳೂರು :- ಈ ಭೂಮಿಯ ಮೇಲೆ ಯಾರನ್ನು ಬೇಕಾದರೂ ಸೋಲಿಸಬಹುದು ಆದರೆ ಒಬ್ಬ ಭಾರತ ಮಾತೆಯ ಕೆಚ್ಚೆದೆಯ ಸೈನಿಕನನ್ನು ಎಂದಿಗೂ ಸೋಲಿಸಲು ಸಾಧ್ಯವಿಲ್ಲ ಎಂದು ಆಪರೇಷನ್ ವಿಜಯ್ ಮತ್ತು ಆಪರೇಷನ್ ಸ್ಟಾರ್ ವಿಜಯ್ ಕಾರ್ಗಿಲ್ ಯುದ್ಧದ ಪದಕ ವಿಜೇತರಾದ ಡಾ.ಪ್ರವೀಣ್ ಶೆಟ್ಟಿ ಇವರು ದಿನಾಂಕ 03 ಆಗಸ್ಟ್ 2022 ಬುಧವಾರದಂದು ಫಲ್ಗುಣಿ ಸಭಾಂಗಣ ಕೂಳೂರಿನಲ್ಲಿ ಯುವವಾಹಿನಿ (ರಿ.) ಕೂಳೂರು ಘಟಕದ ವತಿಯಿಂದ ನಡೆದ ಕಾರ್ಗಿಲ್ ವಿಜಯ ದಿವಸ್ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಆಪರೇಷನ್ ವಿಜಯ್ ಬಗ್ಗೆ ನಮಗೆ ತಿಳಿಯದ ವಿಷಯ ಹಾಗೂ ತಮ್ಮ ಅನುಭವಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳು ಆದಷ್ಟು ಸೈನ್ಯಕ್ಕೆ ಸೇರಲು ಪ್ರಯತ್ನ ಮಾಡಿ, ಸಿಗುವ ಅವಕಾಶಗಳನ್ನು ಬಳಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ ಎಂದು ಹೇಳಿದರು. ಇದು ಒಂದು ವಿಶೇಷ ಕಾರ್ಯಕ್ರಮವಾಗಿದ್ದು ಯುವವಾಹಿನಿ (ರಿ.) ಕೂಳೂರು ಘಟಕದ ಸದಸ್ಯರಿಗೆ ದೇಶದ ಮೇಲೆ ಹಾಗೂ ಸೈನಿಕರ ಮೇಲಿರುವ ಪ್ರೀತಿಯನ್ನು ತೋರಿಸುತ್ತಿದೆ ಎಂದು ಹೇಳಿದರು.
ಯುವವಾಹಿನಿ (ರಿ.) ಕೂಳೂರು ಘಟಕದ ಅಧ್ಯಕ್ಷರಾದ ದೀಕ್ಷಿತ್ ಸಿ ಎಸ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಗುರುಗಳ ಭಾವಚಿತ್ರಕ್ಕೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಘಟಕದ ಮಾಜಿ ಅಧ್ಯಕ್ಷರು ಹಾಗೂ ಮಾಜಿ ಸೈನಿಕರಾದ ಪುಷ್ಪರಾಜ್ ಕುಮಾರ್ ಕಾರ್ಗಿಲ್ ಯುದ್ಧದ ಬಗ್ಗೆ ಅಲ್ಲಿಯ ಪರಿಸ್ಥಿತಿ ಹೇಗಿತ್ತು ಎನ್ನುವ ವಿಷಯದ ಬಗ್ಗೆ ಮಾಹಿತಿ ನೀಡಿದರು. ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಭಾರತಮಾತೆಯ ಮಡಿಲನ್ನು ಸೇರಿದ ವೀರ ಯೋಧರಿಗೆ ನುಡಿ ನಮನ ಸಲ್ಲಿಸಿ ಒಂದು ನಿಮಿಷದ ಮೌನ ಪ್ರಾರ್ಥನೆ ಮಾಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿದ ಮಾಜಿ ಸೈನಿಕರಾದ ಡಾ. ಪ್ರವೀಣ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ಈ ಬಾರಿಯ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಉತ್ತೀರ್ಣರಾದ ನಮ್ಮ ಘಟಕದ ಸದಸ್ಯರ ಮಕ್ಕಳನ್ನು ಅಭಿನಂದಿಸಲಾಯಿತು. ಇತ್ತೀಚೆಗೆ ನಮ್ಮನ್ನಗಲಿದ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಪ್ರವೀಣ್ ನೆಟ್ಟಾರು ಇವರ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡುವ ನಿಟ್ಟಿನಲ್ಲಿ ನಮ್ಮ ಘಟಕದ ವತಿಯಿಂದ 10000/- ರೂ. ಗಳ ಚೆಕನ್ನು ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ್ ಅಮೀನ್ ಮಟ್ಟು ಇವರಿಗೆ ಹಸ್ತಾಂತರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಉದಯ್ ಅಮೀನ್ ಮಟ್ಟು ಅಧ್ಯಕ್ಷರು ಯುವವಾಹಿನಿ (ರಿ.) ಕೇಂದ್ರ ಸಮಿತಿ ಇವರು ಮಾತನಾಡಿ ಯುವವಾಹಿನಿ (ರಿ.) ಕೂಳೂರು ಘಟಕವು ವಿಶಿಷ್ಟ ಘಟಕವಾಗಿದ್ದು, ಯುವವಾಹಿನಿ ಧ್ಯೆಯಗಳಾದ ವಿದ್ಯೆ, ಉದ್ಯೋಗ, ಸಂಪರ್ಕದ ಜೊತೆಗೆ ದೇಶಪ್ರೇಮವನ್ನು ಬೆಳೆಸಿಕೊಂಡು ಇಂತಹ ಕಾರ್ಯಕ್ರಮ ಮಾಡುತ್ತಿದೆ. ದೇಶ ಪ್ರೇಮದ ಜೊತೆಗೆ ವಿದ್ಯೆಗೂ ಪ್ರಾಮುಖ್ಯತೆ ಕೊಟ್ಟು ವಿದ್ಯಾರ್ಥಿಗಳನ್ನು ಪುರಸ್ಕಾರ ಮಾಡಿರುವುದನ್ನು ಶ್ಲಾಘಿಸಿದರು. ಯುವವಾಹಿನಿ ಕೂಳೂರು ಘಟಕದ ಸದಸ್ಯರ ಶಿಸ್ತಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ದೀಕ್ಷಿತ್ ಸಿ ಎಸ್ ಮಾತನಾಡಿ ಕಾರ್ಗಿಲ್ ವಿಜಯ ದಿವಸ್ ಕೂಳೂರು ಘಟಕದ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಒಂದಾಗಿದ್ದು, ಸೈನಿಕರು ನಮ್ಮ ನಿಜವಾದ ಹೀರೋಗಳು. ಅವರು ಮಾಡಿದ ತ್ಯಾಗ ಬಲಿದಾನದಿಂದ ನಾವು ಇಲ್ಲಿ ಸುರಕ್ಷಿತವಾಗಿದೆ ಇದ್ದೇವೆ ಎಂದು ಹೇಳಿದರು. ಮಾಜಿ ಅಧ್ಯಕ್ಷರುಗಳು ನಡೆದ ದಾರಿಯಲ್ಲಿ ತಾನು ನಡೆಯುತ್ತಿರುವೆ ಎಂದು ಹೇಳಿ, ಇದರ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದರು. ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದ ಜೊತೆಗೆ ಇಂದು ವಿದ್ಯಾರ್ಥಿಗಳಿಗೂ ಅಭಿನಂದನೆ ಸಲ್ಲಿಸಿದ್ದು ಅಭಿನಂದನೆ ಸ್ವೀಕರಿಸಿದ ಮಕ್ಕಳು ಉತ್ತಮ ರೀತಿಯಲ್ಲಿ ಕಲಿತು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಶುಭ ಹಾರೈಸಿದರು. ವೇದಿಕೆಯಲ್ಲಿ ಮಾರ್ಗದರ್ಶಕರಾದ ಚಂದಪ್ಪ ಸನಿಲ್, ಕಾರ್ಯದರ್ಶಿ ಸುಮಾಶಿವು ಕೋಡಿಕಲ್, ಸಂಚಾಲಕರಾದ ಲೋಕೇಶ್ ಪೂಜಾರಿ ಮತ್ತು ಮನೀಶ್ ಉಪಸ್ಥಿತರಿದ್ದರು. ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಹರೀಶ್ ಪೂಜಾರಿ, ಘಟಕದ ನಿಕಟ ಪೂರ್ವ ಅಧ್ಯಕ್ಷರಾದ ನಯನ ರಮೇಶ್, ಮಾಜಿ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್, ಭಾಸ್ಕರ್ ಕೋಟ್ಯಾನ್, ಪದಾಧಿಕಾರಿಗಳು ಮತ್ತು ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಘಟಕದ ವಿದ್ಯಾನಿಧಿ ನಿರ್ದೇಶಕರಾದ ಸುಮಂಗಲಾ ಪ್ರಾರ್ಥಿಸಿದರು. ಅಧ್ಯಕ್ಷರು ಎಲ್ಲರನ್ನೂ ಸ್ವಾಗತಿಸಿದರು. ಸಂಚಾಲಕರಾದ ಲೋಕೇಶ್ ಪೂಜಾರಿ ಧನ್ಯವಾದ ಸಲ್ಲಿಸಿದರು. ಘಟಕದ ಸದಸ್ಯರಾದ ಮಧುಶ್ರೀ ಪ್ರಶಾಂತ್ ಮತ್ತು ಕಲೆ ಮತ್ತು ಸಾಹಿತ್ಯ ನಿರ್ದೇಶಕರಾದ ಶೈಲೇಶ್ ಬೈಕಂಪಾಡಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಲಘು ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು