ಬಂಟ್ವಾಳ : ವಿದೇಶಿ ಸಂಸ್ಕೃತಿ ಬಗ್ಗೆ ಆಕರ್ಷಣೆಗೆ ಒಳಗಾಗುವ ಯುವ ಜನತೆಗೆ ವೈಜ್ಞಾನಿಕ ಕಾರಣಗಳನ್ನು ನೀಡಿ ನಮ್ಮ ಸಂಸ್ಕೃತಿ ಸಂಸ್ಕಾರಗಳ ಬಗ್ಗೆ ಮನವರಿಕೆ ಮಾಡಿದಾಗ ಯುವ ಪೀಳಿಗೆ ನಮ್ಮ ಸಂಸ್ಕೃತಿ ಸಂಸ್ಕಾರವನ್ನು ಉಳಿಸಿ ಬೆಳೆಸುವ ಹಾದಿ ಸುಗಮವಾಗಲಿದೆ ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವ ಸಂಶೋಧಕ, ಉಪನ್ಯಾಸಕ ಡಾ.ಅರುಣ್ ಉಳ್ಳಾಲ್ ಅಭಿಪ್ರಾಯ ಪಟ್ಟರು. ಅವರು ದಿನಾಂಕ 15.08.2022 ರಂದು ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣಗುರು ಸಭಾಭವನಲ್ಲಿ ಜರುಗಿದ ಆಟಿಡೊಂಜಿ ಕೂಟ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ಗಣೇಶ್ ಪೂಂಜರೆಕೋಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಉದಯ ಅಮೀನ್ ಮಟ್ಟು, ನೆಕ್ಕಿತಪುಣಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸೀತಾರಾಮ ಪೂಜಾರಿ, ಬಂಟ್ವಾಳ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ, ಉದ್ಯಮಿ ಲೋಕೇಶ್ ಕಲ್ಲಡ್ಕ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಯುವವಾಹಿನಿ ಬಂಟ್ವಾಳ ಘಟಕದ ಕಾರ್ಯದರ್ಶಿ ನಾಗೇಶ್ ಪೂಜಾರಿ ನೈಬೇಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ
ಪ್ರಗತಿಪರ ಕೃಷಿಕರಾದ ಮೋಹನ್ ಪೂಜಾರಿ ಅಗ್ರಬೈಲು, ಉದ್ಯಮಿ, ಸಂಘಟಕ, ಧಾರ್ಮಿಕ ಮುಖಂಡ ವಿಶ್ವನಾಥ ಬಿ, ಯುವ ಉದ್ಯಮಿ, ಸಂಘಟಕ ರಾಜೇಶ್ ಸುವರ್ಣ, ಪಾರಂಪರಿಕ ಮೂರ್ತೇದಾರಿಕೆಯ ತನಿಯಪ್ಪ ಪೂಜಾರಿ ಕೇದಗೆ, ಸಾಮಾಜಿಕ ಮುಂದಾಳು, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತ ನ್ಯಾಯವಾದಿ ಶೈಲಜಾ ರಾಜೇಶ್ ಇವರುಗಳನ್ನು ಸನ್ಮಾನಿಸಲಾಯಿತು. ಪ್ರತಿಮಾ ಅಂಚನ್, ಪ್ರಜಿತ್ ಅಮಿನ್, ಮಧುಸೂದನ್ ಪೂಜಾರಿ ಮದ್ವ, ನಿಕೇಶ್ ಕೋಟ್ಯಾನ್, ಸಂದೀಪ್ ಇವರುಗಳು ಪರಿಚಯಿಸಿದರು. ಮಂಗಳೂರು ತಾಲೂಕು ಬಿಲ್ಲವ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಯುವವಾಹಿನಿ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ಜಿತೇಂದ್ರ ಜೆ ಸುವರ್ಣ ಇವರನ್ನು ಅಭಿನಂದಿಸಲಾಯಿತು. ಉಪನ್ಯಾಸಕ ಚೇತನ್ ಮುಂಡಾಜೆ ಪ್ರಸ್ತಾವನೆ ಮಾಡಿದರು, ಕೂಟದ ಸಂಚಾಲಕ ಕಿರಣ್‌ರಾಜ್ ಪೂಂಜರೆಕೋಡಿ ಸ್ವಾಗತಿಸಿದರು, ಯುವವಾಹಿನಿ ಕೋಶಾಧಿಕಾರಿ ಧನುಷ್ ಮದ್ವ ಧನ್ಯವಾದ ನೀಡಿದರು, ಯತೀಶ್ ಪೂಜಾರಿ ಶಂಬೂರು ಕಾರ್ಯಕ್ರಮ ನಿರ್ವಹಿಸಿದರು.