ಮಾಣಿ :- ತುಳುವರ ಬದುಕಿನ ಪ್ರತಿಯೊಂದು ಕಾರ್ಯವು ಕೆಲಸಕ್ಕೆ ಕೇಂದ್ರಿತವಾಗಿದ್ದು,ಕೆಲಸದ ಪ್ರತಿಯೊಂದು ಕ್ರಮವೇ ಆಚರಣೆಯ ಒಂದು ಭಾಗವೇ ಆಗಿರುತ್ತದೆ.ತುಳುನಾಡಿನ ಹಳೆಯ ವಸ್ತುಗಳೇ ಒಂದೊಂದು ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಯೋಗೀಶ್ ಕೈರೋಡಿಯವರು ನುಡಿದರು. ಅವರು ದಿನಾಂಕ 07 ಆಗಸ್ಟ್ 2022 ರ ಆದಿತ್ಯವಾರದಂದು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನ ಮಾಣಿ ಇಲ್ಲಿ ಯುವವಾಹಿನಿ(ರಿ.) ಮಾಣಿ ಘಟಕ ಹಮ್ಮಿಕೊಂಡ “ಆಟಿದ ತಿರ್ಲ್” ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು . ಕಾರ್ಯಕ್ರಮವನ್ನು ನೆಲ ಶುಧ್ಧಿಕರಿಸಿ,ಸುತ್ತಿಗೆ ಇಟ್ಟು ,ದೀಪ ಬೆಳಗಿಸುವುದರ ಮೂಲಕ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ(ರಿ.) ಮಾಣಿ ಇದರ ಅಧ್ಯಕ್ಷರಾದ ಸುರೇಶ್ ಸೂರ್ಯ ರವರು ಉದ್ಘಾಟಿಸಿ ಮಾತನಾಡಿದ ಅವರು ಹಿಂದೆ ಆಟಿ ತಿಂಗಳಿನಲ್ಲಿ ಬಹಳ ಕಷ್ಟ ಪಡುತ್ತಿದ್ದರು,ಊರಿನ ಅನಿಷ್ಟಗಳು ದೂರ ಮಾಡಲು ಆಟಿ ಕೆಳೆಂಜವು ಮನೆ ಮನೆಗೆ ಬರುತ್ತಿದ್ದವು,ಆದರೆ ಈಗಿನ ಕಾಲದಲ್ಲಿ ಈ ಸಂಪ್ರದಾಯ ಮರೆಯಾಗುತ್ತಿದೆ,ಹಾಗಾಗಿ ನಮ್ಮ ಸಂಸ್ಕೃತಿಯನ್ನು ಉಳಿಸಬೇಕು ಎಂದರು.ತದನಂತರ ಕೇಂದ್ರ ಸಮಿತಿಯ ಪ್ರಥಮ ಉಪಾಧ್ಯಕ್ಷರಾದ ರಾಜೇಶ್ ಬಿ.ಸಿ ರೋಡ್ ರವರು ಆಟಿ ತಿಂಗಳಿನಲ್ಲಿ ಮಾಡುತ್ತಿದ್ದ ತಿನಿಸುಗಳನ್ನು ನೆನೆಪಿಸುತ್ತ, ಆಗಿನ ಕಾಲದಲ್ಲಿ ಮನೆಯಲ್ಲೇ ಮಾಡುತ್ತಿದ್ದ ತಿನಿಸುಗಳನ್ನು ಇಂದು ಕಾರ್ಯಕ್ರಮಗಳನ್ನು ಮಾಡಿ ಎಲ್ಲ ತಿನಿಸುಗಳನ್ನು ತಂದು ತಿನ್ನುತ್ತಿದ್ದೇವೆ. ಕೇವಲ ಕಾರ್ಯಕ್ರಮಕ್ಕೆ ಇದನ್ನು ಮೀಸಲಾಗಿರಿಸದೆ, ಮನೆಯಲ್ಲಿಯೂ ತಯಾರಿಸಿ,ಅದು ಮಕ್ಕಳಿಗೂ ತಿಳಿಯುವಂತಾಗಬೇಕು ಎಂದರು. ಘಟಕದ ಅಧ್ಯಕ್ಷರಾದ ಜಯಂತ ಬರಿಮಾರು ರವರು ಘಟಕವು ಪ್ರತಿ ವರ್ಷ ಆಟಿ ತಿಂಗಳಿನ ವಿಶೇಷತೆಗಳನ್ನು ಬಿಂಬಿಸುವ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ,ಈಗಿನ ಜನಾಂಗಕ್ಕೆ ಆಟಿ ತಿಂಗಳಿನ ಬಗ್ಗೆ ತಿಳಿಯಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆಯ ವಹಿಸಿಕೊಂಡು ಮಾತನಾಡಿದರು. ವೇದಿಕೆಯಲ್ಲಿ ಘಟಕದ ಗೌರವ ಸಲಹೆಗಾರರಾದ ಯಶೋಧರ ಮಾಣಿ,ಕಾರ್ಯಕ್ರಮದ ಸಂಚಾಲಕರಾದ ಸತೀಶ್ ಕೊಪ್ಪರಿಗೆ, ಸಹ ಸಂಚಾಲಕರಾದ ಪವಿತ್ರ ಪ್ರವೀಣ್ ರವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಆಟಿ ತಿಂಗಳಿನ ತಿನಿಸುಗಳು ವಿಶೇಷ ಆರ್ಕಷಣೆಯಾಗಿತ್ತು ಮತ್ತು ಘಟಕದ ಸದಸ್ಯರು ತಿನಿಸುಗಳನ್ನು ತಮ್ಮ ಮನೆಯಲ್ಲೇ ತಯಾರಿಸಿ ಕಾರ್ಯಕ್ರಮಕ್ಕೆ ತಂದ ಎಲ್ಲ ಸದಸ್ಯರಿಗೆ ಘಟಕದ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಇತ್ತೀಚಿಗೆ ದುಷ್ಕರ್ಮಿಗಳಿಂದ ಹತ್ಯೆಯಾದ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ,ಯುವವಾಹಿನಿ(ರಿ.) ಸುಳ್ಯ ಘಟಕದ ಮಾಜಿ ಅಧ್ಯಕ್ಷರಾದ ಪ್ರವೀಣ್ ನೆಟ್ಟಾರು ರವರ ಆತ್ಮಕ್ಕೆ ಶಾಂತಿ ಸಿಗಲೆಂದು ಮೌನ ಪ್ರಾರ್ಥನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಘಟಕದ ಸದಸ್ಯೆಯಾದ ಜಯಶ್ರೀ ಪ್ರಾರ್ಥಿಸಿದರು,ಕಾರ್ಯದರ್ಶಿ ರೇಣುಕ ಕಣಿಯೂರು ರವರು ಸ್ವಾಗತಿಸಿ,ಕಾರ್ಯಕ್ರಮದ ಸಂಚಾಲಕರಾದ ಸತೀಶ್ ಕೊಪ್ಪರಿಗೆ ವಂದಿಸಿದರು.
ಘಟಕದ ಸದಸ್ಯರ ಮಕ್ಕಳಾದ ಪ್ರಗತಿ ಮತ್ತು ಭವಿಷ್ಯ ರವರು ಕಾರ್ಯಕ್ರಮವನ್ನು ನಿರೂಪಿಸಿದರು.