ಬ ಬಜ್ಪೆ:- ಯುವವಾಹಿನಿ ಬಜ್ಪೆ ಘಟಕದ ವತಿಯಿಂದ 8ನೇ ವರ್ಷದ ಅಟಿದ ನೆಂಪು – 2022 ಕಾರ್ಯಕ್ರಮವು ಶ್ರೀ ನಾರಾಯಣ ಗುರು ಸಭಾಭವನ ಬಜಪೆ ಇಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ.)ಬಜಪೆ -ಕರಂಬಾರು ಇವರ ಸಹಕಾರದೊಂದಿಗೆ 17 ಜುಲೈ 2022 ರಂದು ನಡೆಯಿತು. ಕಾರ್ಯಕ್ರಮವನ್ನು ಶ್ರೀ ಸ್ವಯಂಭೂಲಿಂಗೇಶ್ವರ ದೇವಸ್ಥಾನ ದೊಡ್ಡಿಕಟ್ಟ, ಬಜಪೆ ಇದರ ಅಧ್ಯಕ್ಷರಾದ ಲೋಕೇಶ್ ಆರ್. ಅಮೀನ್ ಇವರು ಕಳಸಕ್ಕೆ ಅಕ್ಕಿ ಹಾಕಿ ಹಿಂಗಾರವನ್ನು ಅರಳಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಯುವವಾಹಿನಿಯ ಯಾವುದೇ ಸಾಮಾಜಿಕ ಕಾರ್ಯಗಳಿಗೆ ನನ್ನ ಪ್ರೋತ್ಸಾಹ ಹಾಗೂ ಸಹಾಯ ಹಸ್ತ ಇದೆ ಎಂದು ಹೇಳಿ ಶುಭ ಹಾರೈಸಿದರು. ಸಾಹಿತಿ ಪ್ರಮೀಳಾ ದೀಪಕ್ ಪೆರ್ಮುದೆ ಇವರು ಆಟಿಯ ವಿಶೇಷತೆಯ ಬಗ್ಗೆ ಉಪನ್ಯಾಸ ನೀಡಿ, ಹೆತ್ತವರು ತಮ್ಮ ಮಕ್ಕಳಿಗೆ ಆಟಿಯ ವಿಶೇಷತೆಯ ಬಗ್ಗೆ ಮನವರಿಕೆ ಮಾಡಿ ಕೊಡಬೇಕು ಹಾಗೂ ಹಿಂದಿನ ಕಾಲದ ಕಷ್ಟದ ದಿನಗಳ ಬಗ್ಗೆ ತಿಳಿಯಪಡಿಸಬೇಕು. ಯುವವಾಹಿನಿ ಘಟಕವು ಪ್ರತಿವರ್ಷ ಈ ಆಟಿದ ನೆಂಪು ಕಾರ್ಯಕ್ರಮ ಏರ್ಪಡಿಸುವುದು ಶ್ಲಾಘನೀಯ ಎಂದು ಹೇಳಿದರು. ಯುವವಾಹಿನಿ ಬಜಪೆ ಘಟಕದ ಅಧ್ಯಕ್ಷರಾದ ಉಷಾ ಸುವರ್ಣ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಕಳೆದ ಸಾಲಿನ 10ನೇ ತರಗತಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ನಮ್ಮ ಸಮಾಜದ ನಾಲ್ವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸರಿತಾ ಚಾರಿಟೇಬಲ್ ಟ್ರಸ್ಟ್ ಸುಂಕದಕಟ್ಟೆ,ಬಜಪೆ ಹಾಗೂ ಸುಕುಮಾರ್ ಸಾಲಿಯಾನ್ ಸ್ವಾಮಿಲಪದವು, ಬಜಪೆ ಇವರುಗಳ ಸಹಕಾರದೊಂದಿಗೆ ಯುವವಾಹಿನಿಯ ವಿದ್ಯಾನಿಧಿಯಿಂದ ಏಳು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಅವರ ಮುಂದಿನ ಶಿಕ್ಷಣಕ್ಕೆ ಸಹಕರಿಸಲಾಯಿತು. ಪಣಂಬೂರು-ಕುಲಾಯಿ ಘಟಕದ ಆತಿಥ್ಯದಲ್ಲಿ ನಡೆದ ಮಾಧವ ಕೀರ್ತನೋತ್ಸವ ಭಜನಾ ಸ್ಪರ್ಧೆಯಲ್ಲಿ ಬಜ್ಪೆ ಘಟಕವು ಪ್ರಥಮ ಬಹುಮಾನ ಪಡೆದಿದ್ದು ಭಾಗವಹಿಸಿದ ಸದಸ್ಯರನ್ನು ಗೌರವಿಸಲಾಯಿತು. ಮುಖ್ಯ ಅತಿಥಿಯಾದ ಮೂಲ್ಕಿ -ಮೂಡಬಿದ್ರೆ ಓ ಬಿ ಸಿ ಮೋರ್ಚಾದ ಅಧ್ಯಕ್ಷರಾದ ರಾಜೇಶ್ ಅಮೀನ್ ಪೋರ್ಕೊಡಿ ಮಾತನಾಡಿ ಇಂದು ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಉತ್ತಮವಾಗಿ ಕಲಿತು ಉನ್ನತ ಹುದ್ದೆ ಪಡೆದು ನೀವು ಯುವವಾಹಿನಿಯೊಂದಿಗೆ ಕೈ ಜೋಡಿಸಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಕೊಡುವಂತಾಗಲಿ ಎಂದು ಶುಭ ಹಾರೈಸಿದರು. ಇನ್ನೊರ್ವ ಮುಖ್ಯ ಅತಿಥಿ ಯುವವಾಹಿನಿ ಕೇಂದ್ರ ಸಮಿತಿಯ ಕೋಶಾಧಿಕಾರಿಯಾದ ಜಗದೀಶ್ ಚಂದ್ರ ಮೂಡಬಿದ್ರೆ ಇವರು ಯುವವಾಹಿನಿ ಬಜಪೆ ಘಟಕದ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಅತಿಥಿಯಾಗಿ ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಯೋಗೀಶ್ ಪೂಜಾರಿ, ಕಾರ್ಯಕ್ರಮ ಸಂಚಾಲಕರಾದ ಪ್ರಜ್ವನಿ ಮಿತೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಮೊದಲು ನಾರಾಯಣ ಗುರು ಮಂದಿರದಲ್ಲಿ ಪೂಜೆ ಸಲ್ಲಿಸಿ ನಂತರ ಯುವವಾಹಿನಿ ಕುಟುಂಬ ಸದಸ್ಯರಿಂದ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು ಹಾಗೂ ಯುವವಾಹಿನಿ ಸದಸ್ಯರು ತಮ್ಮ ತಮ್ಮ ಮನೆಯಲ್ಲಿ ಆಟಿಯ ವೈಶಿಷ್ಟತೆ ಬೀರುವ ತಿಂಡಿ ತಿನಿಸು ಪದಾರ್ಥಗಳನ್ನು ಮಾಡಿ ತಂದಿದ್ದರು. ಸಾನ್ವಿ ಪ್ರಾರ್ಥಿಸಿ, ಸಂಧ್ಯಾ ಕುಲಾಯಿ ಸ್ವಾಗತಿಸಿ, ಚಂದ್ರಶೇಖರ ಪೂಜಾರಿ ವಿದ್ಯಾರ್ಥಿಗಳ ಹೆಸರನ್ನು ವಾಚಿಸಿ, ರವೀಂದ್ರ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಕಾರ್ಯದರ್ಶಿ ನಿಶಾಲ್ ಧನ್ಯವಾದಗೈದರು.