ಮಾಣಿ :- “ಒಂದೇ ಜಾತಿ ಒಂದೇ ಮತ ಒಂದೇ ದೇವರು” ಎನ್ನುವ ಬ್ರಹ್ಮ ಶ್ರೀ ನಾರಾಯಣ ಗುರುಗಳ ತತ್ವದ ಸತ್ವ ನಮಗೆಲ್ಲರಿಗೂ ಆದರ್ಶ, ಅವರ ಪ್ರತಿಯೊಂದು ಸಂದೇಶ ಮನುಕುಲಕ್ಕೆ ಒಳಿತು ನೀಡುತ್ತಾ ಬಂದಿದೆ. ಗುರುಗಳ ತತ್ವ ಸಂದೇಶಗಳು ಪ್ರತಿಯೊಬ್ಬರಿಗೂ ತಿಳಿಯಬೇಕು, ಪ್ರತಿ ಮನೆಗೂ ತಲುಪಬೇಕು ಎನ್ನುವ ದೃಷ್ಟಿಯಿಂದ “ಮನೆ ಮನೆಗೆ ಗುರು ತತ್ವ ಸಂಚಾರ” ಎನ್ನುವ ಕಾರ್ಯಕ್ರಮವನ್ನು ಮಾಣಿ ಘಟಕದ ವತಿಯಿಂದ ಕಳೆದ ಸಾಲಿನಲ್ಲಿ ಆಯೋಜಿಸಲಾಗಿತ್ತು. ಈ ಸಾಲಿನ ಎರಡನೇ ಕಾರ್ಯಕ್ರಮವನ್ನು ಜನಾರ್ಧನ ಪೂಜಾರಿ ಅರೆಬೆಟ್ಟು,ವೀರಕಂಭ ಇವರ ಮನೆಯಲ್ಲಿ ದಿನಾಂಕ 29-05-2022ರಂದು ನಡೆಸಲಾಯಿತು. ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಮನೆಯ ಯಜಮಾನರಾದ ಜನಾರ್ಧನರವರು ಗುರುಗಳ ಶ್ಲೋಕದೊಂದಿಗೆ, ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ನಂತರ ಗುರುಗಳ ತತ್ವ, ಸಂದೇಶ ಮತ್ತು ಗುರುಗಳು ಸಮಾಜಕ್ಕೆ ನೀಡಿದ ಕೊಡುಗೆಯ ಬಗ್ಗೆ ಸದಸ್ಯರಿಗೆ ಮನ ಮುಟ್ಟುವಂತೆ ಘಟಕದ ಕೋಶಾಧಿಕಾರಿಯಾದ ರಾಜೇಶ್ ಎಸ್ ಬಲ್ಯ ರವರು ತಿಳಿಸಿದರು. ಬಿಲ್ಲವ ಗ್ರಾಮ ಸಮಿತಿ ವೀರಕಂಬ ಇದರ ಅಧ್ಯಕ್ಷರಾದ ಜಯಪ್ರಕಾಶ್ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಘಟಕದ ಅಧ್ಯಕ್ಷರಾದ ಜಯಂತ ಬರಿಮಾರು ರವರು ಇದೊಂದು ಉತ್ತಮ ಕಾರ್ಯಕ್ರಮ, ಗುರುಗಳ ಸಂದೇಶ ಎಲ್ಲರಿಗೂ ತಲುಪಬೇಕು ಮತ್ತು ಇಂತಹ ಕಾರ್ಯಕ್ರಮ ಇನ್ನಷ್ಟು ಆಗಬೇಕು ಎಂದರು.
ನಂತರ ಕಾರ್ಯಕ್ರಮವನ್ನು ಮಾಡಲು ಅವಕಾಶ ಮಾಡಿಕೊಟ್ಟ ಜನಾರ್ಧನ ಪೂಜಾರಿ ಮತ್ತು ಅವರ ಕುಟುಂಬದವರನ್ನು ಘಟಕದ ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಘಟಕದ ಗೌರವ ಸಲಹೆಗಾರರಾದ ಯಶೋಧರ ಮಾಣಿ,ಘಟಕದ ಮಾಜಿ ಅಧ್ಯಕ್ಷರಾದ ಹರೀಶ್ ಪೂಜಾರಿ ಬಾಕಿಲ, ಘಟಕದ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ಪ್ರವೀಣ್ ಕೋಟ್ಯಾನ್, ಸತೀಶ್ ಬಾಯಿಲ, ದೈವ ಪಾತ್ರಿಯಾದ ಶೇಖರ ಅರೆಬೆಟ್ಟು,ಅರೆಬೆಟ್ಟು ಗುತ್ತುವಿನ ರತ್ನಾಕರ ಭಂಡಾರಿ,ರಾಮಚಂದ್ರ ಪೂಜಾರಿ,ಬಿಲ್ಲವ ಗ್ರಾಮ ಸಮಿತಿ ಕಲ್ಲಡ್ಕ ವಲಯದ ಅಧ್ಯಕ್ಷರಾದ ಕೃಷ್ಣಪ್ಪ ಪೂಜಾರಿ,ವೆಂಕ್ಕಪ್ಪ ಪೂಜಾರಿ ಗೋಳಿಮಾರ್,ಕೊರಗಪ್ಪ ಪೂಜಾರಿ ಕೇಪುಲಕೋಡಿ ರವರು ಉಪಸ್ಥಿತರಿದ್ದರು. ಘಟಕದ ಸಂಘಟನಾ ಕಾರ್ಯದರ್ಶಿ ಜನಾರ್ಧನ ಪೂಜಾರಿ ಕೊಡಂಗೆ ವಂದನಾರ್ಪಣೆಗೈದರು. ಘಟಕದ ನಿಕಟ ಪೂರ್ವ ಅಧ್ಯಕ್ಷರಾದ ಪ್ರಶಾಂತ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.