ಕೈ ಒಂದು ಆದರೂ ಕೈ ಬೆರಳುಗಳು ಒಮದೇ ರಿತಿ ಆಗಿರುವುದಿಲ್ಲ. ಆದರೆ ಮುಷ್ಠಿ ಬಿಗಿದರೆ ಎಲ್ಲಾ ಬೆರಳು ಒಂದೇ ಆಗಿರುತ್ತದೆ. ಅದೇ ರೀತಿ ನಮ್ಮಲ್ಲಿ ಸಂಘಟನೆಗಳು ಹತ್ತಾರು ಇದ್ದರೂ ಒಗ್ಗಟ್ಟಿನ ವಿಚಾರ ಬಂದಾಗ ನಾವೆಲ್ಲರೂ ಒಂದಾಗಿ ಇರಬೇಕು. ಯುವವಾಹಿನಿ ಸಮಾಜದಲ್ಲಿ ಶಿಸ್ತನ್ನು ಕಲಿಸುತ್ತದೆ. ಶಿಸ್ತು ಪ್ರತಿಯೊಬ್ಬರ ಮನೆಯಲ್ಲೂ ನೆಲೆಗೊಳ್ಳಬೇಕು ಎಂದು ಮುಂಬಾಯಿ ಬಿಲ್ಲವರ ಎಸೋಸಿಯೇಶನ್ ಅಧ್ಯಕ್ಷ ನಿತ್ಯಾನಂದ ಡಿ. ಕೊಟ್ಯಾನ್ ತಿಳಿಸಿದರು.
ಅವರು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕದ ಆತಿಥ್ಯದಲ್ಲಿ ಆಗಸ್ಟ್ 9 ರಂದು ಮೆಲ್ಕಾರ್‌ನ ಬಿರ್ವ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ ೨೮ ನೇ ವಾರ್ಷಿಕ ಸಮಾವೇಶದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಕೆ. ಸೇಸಪ್ಪ ಕೊಟ್ಯಾನ್ ಯುವವಾಹಿನಿಯ 28ನೇ ವಾರ್ಷಿಕ ಸಮಾವೇಶವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಇನ್ನೋರ್ವ ಮುಖ್ಯ ಅತಿಥಿ ಆಳ್ವಾಸ್ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಪ್ರೊ| ಮಧುಮಾಲ ಕೆ. ಮಾತನಾಡಿ ಸಮಾಜ ನಿರೀಕ್ಷೆಗೂ ಮೀರಿ ಬದಲಾಗುತ್ತಿದೆ. ಪಾಶ್ಚಾತ್ಯದ ಅನುಕರಣೆಗೆ ನಾವು ಮತ್ತೆ ಮತ್ತೆ ಬಲಿಯಾಗುತ್ತಿದ್ದೇವೆ. ಬದಲಾವಣೆ ಎನ್ನುವುದು ನಮ್ಮ ಮನೆ ಬಾಗಿಲಿಗೆ ತಟ್ಟಿದೆ. ಪರಿಣಾಮ ಆರೋಗ್ಯಕ್ಕೆ ಪೂರಕವಾದ ಮನೆಯಲ್ಲಿ ತಯಾರಿಸಿದ ತಿಂಡಿ ತಿನಿಸುಗಳ ಬದಲಾಗಿ ರುಚಿ ಹಾಗೂ ಆಕರ್ಷಣೆ ಹೆಸರಿನಲ್ಲಿ ಜಂಕ್ ಫುಡ್ ಸಂಸ್ಕೃತಿಗೆ ಬಲಿಯಾಗುತ್ತಿರುವುದು ವಿಷಾದನೀಯ ಈ ಬಗ್ಗೆ ನಾವು ಜಾಗೃತರಾಗಬೇಕು ಎಂದು ತಿಳಿಸಿದರು. ದ.ಕ. ಜಿಲ್ಲಾ ಮೂರ್ತೆದಾರರ ಮಹಾ ಮಂಡಲದ ಅಧ್ಯಕ್ಷರಾದ ಕೆ. ಸಂಜೀವ ಪೂಜಾರಿ ಮಾತನಾಡಿ ಯುವವಾಹಿನಿಯ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು. ಬಂಟ್ವಾಳ ತಾಲೂಕು ಬಿಲ್ಲವ ಮಹಿಳಾ ಸಮಿತಿಯ ಅಧ್ಯಕ್ಷೆ ಶ್ರೀಮತಿ ಮಾಲತಿ ಎಸ್. ಪೂಜಾರಿ ಶುಭ ಹಾರೈಕೆ ಮಾಡಿದರು. ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಪ್ರೇಮನಾಥ ಕೆ. ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಯುವವಾಹಿನಿಯ 21 ವಿವಿಧ ಘಟಕಗಳ ಅಧ್ಯಕ್ಷರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರತಿಭಾ ಪುರಸ್ಖರ, ಅಕ್ಷರ ಪುರಸ್ಕಾರ, ಗೌರವ ಅಭಿನಂದನೆ, ಯುವವಾಹಿನಿ ಯುವ ಸಾಧನಾ ಪುರಸ್ಕಾರ ನೀಡಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿವ ಸಾಧಕರನ್ನು ಗೌರವಿಸಿ ಅಭಿನಂದಿಸಲಾಯಿತು.
ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷರಾದ ಶ್ರೀ ಜಯ ಸಿ. ಸುವರ್ಣ ಇವರಿಗೆ ಸಾಮಾಜಿಕ ಕ್ಷೇತ್ರದ ಸೇವೆಗಾಗಿ ಯುವವಾಹಿನಿ ಸಾಧನಾ ಶ್ರೇಷ್ಠ ಪ್ರಶಸ್ತಿ-2015 ನೀಡಿ ಗೌರವಿಸಲಾಯಿತು.
ಬಿಲ್ಲವಾಸ್ ದುಬಾ ಹಾಗೂ ನಾರ್ಥನ್ ಎಮಿರೇಟ್ಸ್ ಸಂಸ್ಥೆಗೆ ಸಾಮಾಜಿಕ ಕ್ಷೇತ್ರದ ಸಾಧನೆಗಾಗಿ ಯುವವಾಹಿನಿ ಸಾಧನಾಶ್ರೀ ಪ್ರಶಸ್ತಿ – 2015 ನೀಡಿ ಗೌರವಿಸಲಾಯಿತು.
ಯುವವಾಹಿನಿ ಕೇಂದ್ರ ಸಮಿತಿಯ 2015-16 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜರಗಿತು. ಸಂತೋಷ್ ಕುಮಾರ್ ಉಡುಪಿ ಇವರ ಅಧ್ಯಕ್ಷತೆಯಲ್ಲಿ ನೂತನ ಪದಾಧಿಕಾರಿಗಳ ತಂಡ ಪ್ರಮಾಣ ವಚನ ಸ್ವೀಕರಿಸಿದರು. ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಪ್ರೇಮನಾಥ್ ಕೆ. ಪ್ರತಿಜ್ಞಾ ವಿಧಿ ಭೋಧಿಸಿದರು.
ಯುವವಾಹಿನಿ ಕೇಂದ್ರ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಮೋಹನ್ ಪೆಜಕ್ಕಳ 2014-15 ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು. ಯುವವಾಹಿನಿ ಕೇಂದ್ರ ಸಮಿತಿಯ ಸಮಾವೇಶ ನಿರ್ದೇಶಕರಾದ ರಾಜೇಶ್ ಸುವರ್ಣ ಸ್ವಾಗತಿಸಿದರು. ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಸಾಧು ಪೂಜಾರಿ ಪ್ರಸ್ತಾವನೆ ಮಾಡಿದರು. ಸಮಾವೇಶದ ಸಂಚಾಲಕರಾದ ತಾರಾನಾಥ್ ಕೆ. ಧನ್ಯವಾದ ನೀಡಿದರು. ನರೇಶ್ ಕುಮಾರ್ ಸಸಿಹಿತ್ಲು ಹಾಗೂ ಬಿ. ಶ್ರೀಧರ ಅಮೀನ್ ಕಾರ್ಯಕ್ರಮ ನಿರ್ವಹಿಸಿದರು.