ಸಮಾಜದಲ್ಲಿ ಅಧರ್ಮ ತುಂಬಿದ್ದ ಸಂದರ್ಭ ಶಸ್ತ್ರಬಲದ ಮೂಲಕ ಧರ್ಮ ಸ್ಥಾಪನೆ ಮಾಡಿದ ಕೋಟಿ ಚೆನ್ನಯರು ರಾಮ-ಲಕ್ಷ್ಮಣರಿಗೆ ಸಮಾನರು ’ವಸುಧೈವ ಕುಟುಂಬಕಂ’ ಸಂದೇಶ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿಗಳ ಆಶಯದಂತೆ ಶಾಂತಿ ನೆಲೆಸಬೇಕಾದರೆ ಧರ್ಮ ಕ್ಷೇತ್ರಗಳ ಉನ್ನತಿಯಾಗಬೇಕು. ಕೋಟಿ-ಚೆನ್ನಯರು, ಮಾತೆ ದೇಯಿ ಬೈದ್ಯೆತಿಯ ಕ್ಷೇತ್ರ ಅಭಿವೃದ್ಧಿಗೆ ಕೈಂಕರ್ಯ ತೊಡುವ ಮೂಲಕ ಸುವರ್ಣಾಕ್ಷರದಲ್ಲಿ ಬರೆದಿಡುವ ಸಂದರ್ಭ ಸೃಷ್ಟಿಯಾಗಿದೆ ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರದ ಮಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಮಾತೆ ದೇಯಿ ಬೈದ್ಯೆತಿ ಮತ್ತು ಕೋಟಿ-ಚೆನ್ನಯರ ಮೂಲಸ್ಥಾನವಾಗಿರುವ ಪುತ್ತೂರು ತಾಲೂಕು ಬಡಗನ್ನೂರು ಗ್ರಾಮದ ಗೆಜ್ಜೆಗಿರಿ ನಂದನ ಬಿತ್ತಿಲ್‌ನಲ್ಲಿ ಮೂಲಸ್ಥಾನ ಗರಡಿ ಸೇರಿ 9 ಐತಿಹಾಸಿಕ ಸ್ಥಳಗಳ ಪುನರುತ್ಥಾನಕ್ಕೆ 19-02-2017 ರಂದು ನಡೆದ ಶಿಲಾನ್ಯಾಸ ಕಾರ್ಯಕ್ರಮದ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಸಭಾ ಕಾರ್ಯಕ್ರಮ ಉದ್ಘಾಟಿಸಿದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಸಾಮಾಜಿಕ ಅಸಮಾನತೆ ವಿರುದ್ಧ ಧ್ವನಿಯೆತ್ತಿ ಹೋರಾಟದ ಕಿಚ್ಚು ಹಚ್ಚಿದವರು ಕೋಟಿ-ಚೆನ್ನಯರು. ಅವರ ಮೂಲ ಕ್ಷೇತ್ರ ಅಭಿವೃದ್ಧಿಗೆ ಎಲ್ಲ ಸಹಕಾರ ನೀಡಲಾಗುವುದು. ನಾರಾಯಣ ಗುರುಸ್ವಾಮಿ ಅವರ ಸಿದ್ಧಾಂತ ವರ್ತಮಾನದಲ್ಲಿ ಅನುಷ್ಠಾನದ ಅಗತ್ಯವಿದೆ. ಪಡುಮಲೆ ಕ್ಷೇತ್ರದ ಮುಡುಪಿನಡ್ಕದಲ್ಲಿ ಮಾತೆ ದೆಯಿ ಬೈದ್ಯೆತಿ ಔಷಧ ವನ ನಿರ್ಮಾಣದ ಅವಕಾಶ ಸಿಕ್ಕಿರುವುದಕ್ಕೆ ಸಂತೋಷವಿದೆ. 2ನೇ ಹಂತದ ಅಭಿವೃದ್ಧಿ ಕಾರ್ಯ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಶಿಲಾನ್ಯಾಸ ಕಾರ್ಯಕ್ರಮಕ್ಕೆ ಕುಂದಾಪುರ, ಉಡುಪಿ, ಕಾರ್ಕಳ, ಮೂಡಬಿದ್ರೆ ಇನ್ನಿತರ ಕಡೆಗಳಿಂದ ತಂಡೋಪ ತಂಡವಾಗಿ ಜನಸಾಗರ ಹರಿದು ಬಂತು. ಸುಮಾರು ೩೦೦ಕ್ಕೂ ಅಧಿಕ ಬಸ್‌ಗಳಲ್ಲಿ, ಕಾರು, ಮುಂತಾದ ವಿವಿಧ ವಾಹನಗಳಲ್ಲಿ ಜನರು ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದರು. ನಿರೀಕ್ಷೆಗೂ ಮೀರಿ ಜನಸಾಗರ ಸಂಗಮಗೊಳ್ಳುವ ಮೂಲಕ ಗೆಜ್ಜೆಗಿರಿ ಕ್ಷೇತ್ರ ದಾಖಲೆ ಬರೆಯಿತು. ದೇಶ-ವಿದೇಶಗಳಿಂದ ಅತಿಥಿ ಗಣ್ಯರು ಆಗಮಿಸಿದ್ದರು. ಆಗಮಿಸಿದ ಎಲ್ಲ ಭಕ್ತಾದಿಗಳಿಗೆ ಬೆಳಗ್ಗಿನ ಉಪಹಾರ, ಮಧ್ಯಾಹ್ನ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಭಕ್ತಾದಿಗಳ ವಾಹನ ನಿಲುಗಡೆ ಅಲ್ಲಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಶಿಲಾನ್ಯಾಸ ಕಾರ್ಯಕ್ರಮದ ಅಂಗವಾಗಿ ಭಾನುವಾರ ಬೆಳಿಗ್ಗೆ ಕ್ಷೇತ್ರಕ್ಕೆ ಬೃಹತ್ ವಾಹನ ಜಾಥಾ ಏರ್ಪಡಿಸಲಾಗಿತ್ತು. ಮಂಗಳೂರು, ಕಾರ್ಕಳ, ಮೂಡಬಿದ್ರೆ, ಬಂಟ್ವಾಳ, ಗುರುವಾಯನಕೆರೆ ಮುಂತಾದ ಕಡೆಗಳಿಂದ ವಾಹನ ಜಾಥಾ ಆಗಮಿಸಿತ್ತು.