ಬೆಳ್ತಂಗಡಿ: ”ಮಹಿಳೆ ಇನ್ನೊಬ್ಬರ ಮುಂದೆ ಕೈ ಚಾಚಿ ಬದುಕುವುದಕ್ಕಿಂತ ತಾನೇ ಹಣ ಗಳಿಸಿಕೊಳ್ಳಬೇಕು. ಆಕೆ ಅರ್ಥಿಕವಾಗಿ ಸದೃಢವಾದಾಗ ಸಮಸ್ಯೆ ದೂರವಾಗುವುದರ ಜೊತೆಗೆ ಸಮಾಜದಲ್ಲಿ ಗೌರವ, ಸ್ಥಾನಮಾನ ಸಿಗುವುದು’ ಎಂದು ಮಂಗಳೂರು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕಿ ರೇಖಾ ಗೋಪಾಲ್ ಹೇಳಿದರು.
ಅವರು ದಿನಾಂಕ 13.03.2022 ರಂದು ಬೆಳ್ತಂಗಡಿಯ ಸುವರ್ಣ ಆರ್ಕೆಡ್,ಇದರ ಸಭಾಂಗಣದಲ್ಲಿ ಬೆಳ್ತಂಗಡಿ ಯುವವಾಹಿನಿ ಘಟಕ, ಯುವವಾಹಿನಿ ಮಹಿಳಾ ಸಂಚಾಲನ ಸಮಿತಿ, ಬೆಳ್ತಂಗಡಿ ಇವರ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ “ಚುಕ್ಕಿಯಿಂದ ಚಂದ್ರಮನೆಡೆಗೆ” ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. ಬೆಳ್ತಂಗಡಿ ಘಟಕದ ಸಲಹೆಗಾರ ಸದಾನಂದ ಪೂಜಾರಿ ಉಂಗಿಲಬೈಲು ಉದ್ಘಾಟಿಸಿ ಮಾತನಾಡಿ, ಮಹಿಳೆಯರ ಶೋಷಣೆ ಆದಾಗ ಎಲ್ಲರೂ ಒಂದಾಗಿ ಪ್ರತಿಭಟಿಸಬೇಕು. ಮಹಿಳೆಗೆ ಮಾತೆಯ ಗೌರವ ನೀಡಬೇಕು’ ಎಂದರು.
ಸಿಂಧೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳ್ತಂಗಡಿ ಯುವವಾಹಿನಿ ಘಟಕದ ಅಧ್ಯಕ್ಷೆ ಸುಜಾತಾ ಅಣ್ಣಿ ಪೂಜಾರಿ ಮಾತನಾಡಿ, ‘ಮಹಿಳೆ ಸಮಾಜದಲ್ಲಿ ಜವಾಬ್ದಾರಿ ನಿಭಾಯಿಸುವ ಸಂದರ್ಭ ಟೀಕೆಗಳು ಸಾಮಾನ್ಯ. ತಪ್ಪು ಮಾಡದೇ ಇದ್ದಾಗ ಟೀಕೆಗಳಿಗೆ ಅಂಜಬೇಕಾಗಿಲ್ಲ’ ಎಂದರು. ಕಾರ್ಯಕ್ರಮದಲ್ಲಿ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ನಿರ್ದೇಶಕಿ ಪ್ರೇಮಾ ಉಮೇಶ್, ಮಹಿಳಾ ಬಿಲ್ಲವ ವೇದಿಕೆಯ ಉಪಾಧ್ಯಕ್ಷೆ ಕೇಶವತಿ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯದರ್ಶಿ ಪ್ರಮೀಳಾ ಇವರನ್ನು ಗೌರವಿಸಿ ಅಭಿನಂದಿಸಲಾಯಿತು. ವೇದಿಕೆಯಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಎಂ ಕೆ ಪ್ರಸಾದ್, ಘಟಕದ ಕಾರ್ಯದರ್ಶಿ ಸಂತೋಷ್ ಅರಳಿ, ಮಹಿಳಾ ಸಂಚಾಲನ ಸಮಿತಿ ಅಧ್ಯಕ್ಷೆ ವನಿತಾ ಜನಾರ್ದನ್, ವೇದಾಪ್ರಭಾಕರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಘಟಕದ ಸಲಹೆಗಾರರು ಮಾಜಿ ಅಧ್ಯಕ್ಷರು ಎಲ್ಲಾ ಸದಸ್ಯರು ಪದಾಧಿಕಾರಿಗಳು ಭಾಗವಹಿಸಿದ್ದರು. ಘಟಕದ ಮಹಿಳಾ ನಿರ್ದೇಶಕಿ ಬೇಬಿಂದ್ರ ಪ್ರಾರ್ಥಿಸಿದರು, ಮಹಿಳಾ ಸಂಚಲನ ಸಮಿತಿಯ ವನಿತಾ ಜನಾರ್ದನ್ ಸ್ವಾಗತಿಸಿ, ಮಹಿಳಾ ಸಂಚಲನ ಸಮಿತಿಯ ಕಾರ್ಯದರ್ಶಿ ವೇದ ಪ್ರಭಾಕರ್ ಧನ್ಯವಾದಗೈದರು. ಕಾರ್ಯಕ್ರಮವನ್ನು ಚಂದ್ರಹಾಸ ಬಳೆಂಜ ನಿರೂಪಿಸಿದರು.