ಕಡಬ :- ದಿನಾಂಕ 12.03.2022 ರಂದು ಯುವವಾಹಿನಿ (ರಿ.) ಕಡಬ ಘಟಕದ ವತಿಯಿಂದ SSLC ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತರಭೇತಿ ಕಾರ್ಯಗಾರ “ವಿದ್ಯಾ ಸ್ಪೂರ್ತಿ” ಕಾರ್ಯಕ್ರಮವು ಕಡಬ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷರಾದ ಸತೀಶ್ ಕುಮಾರ್ ಕೆಡೆಂಜಿ “ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ SSLC ಯ ಅಂಕಗಳು ಮಾನ ದಂಡವಾಗುತ್ತದೆ ಹಾಗೆಯೇ ಈ ಅದ್ಭುತ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡು, ಮುಂದಿನ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ದೇಶದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕೆಂದು ತಿಳಿಸುವುದರೊಂದಿಗೆ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಕಡಬ ಪೊಲೀಸ್ ಠಾಣೆ ಉಪ ನೀರೀಕ್ಷಕರಾದ ರುಕ್ಮ ನಾಯ್ಕ್ ಇವರು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆಯಬೇಕಾದರೆ ಎಸ್.ಎಸ್.ಎಲ್.ಸಿ ಘಟ್ಟವೆಂಬುದು ಪ್ರಮುಖವಾಗಿರುವುದು, ಹಾಗೆಯೇ ಮೊಬೈಲ್ ಬಳಕೆಯನ್ನು ಕಡಿಮೆ ಬಳಸಿ ನಿಮ್ಮ ಭವಿಷ್ಯವು ಉಜ್ವಲವಾಗಿರುವುದೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಫಾದರ್ ಅರುಣ್ ವಿಲ್ಸನ್ ಲೋಬೊ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣವನ್ನು ಪಡೆದು ಪ್ರಪಂಚಕ್ಕೆ ನಕ್ಷತ್ರಗಳಾಗಿ ಪ್ರಜ್ವಲಿಸಬೇಕು ಹಾಗೆಯೇ ಮನೆಗೆ ದೀಪಗಳಾಗಿರಬೇಕೆಂದು ತಿಳಿಸಿದರು. ಪುತ್ತೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಲೋಕೇಶ್ ಸಿ ಇವರು ಈ ತರಬೇತಿಯ ಪ್ರಯೋಜನವು ಎಸ್.ಎಸ್.ಎಲ್.ಸಿ ಗೆ ಮಾತ್ರ ಸೀಮಿತವಾಗಿರದೆ ಮುಂದಿನ ವಿದ್ಯಾಭ್ಯಾಸಕ್ಕೂ ಸದುಪಯೋಗವಾಗಲಿದೆ ಹಾಗೂ ತಂದೆ ತಾಯಿಯ ಕನಸನ್ನು ನನಸು ಮಾಡಿ ಮತ್ತು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಿರಿ ಎಂದು ಹಾರೈಸಿದರು.
ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು ಮಾತನಾಡಿ ಪರಿಪೂರ್ಣತೆ ಮತ್ತು ಶ್ರದ್ದೆಯನ್ನು ಈ ಅದ್ಭುತ ತರಬೇತಿಯಲ್ಲಿ ಪಡೆದುಕೊಳ್ಳಿ ಎಂದು ಶುಭ ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ ಕಡಬ ಘಟಕದ ಅಧ್ಯಕ್ಷರಾದ ಪ್ರವೀಣ್ ಓಂಕಲ್ ವಹಿಸಿದ್ದರು. ವೇದಿಕೆಯಲ್ಲಿ ಯುವ ಉದ್ಯಮಿ ಅಭಿಲಾಶ್ ಪಿ. ಕೆ ನೂಜಿಬಾಳ್ತಿಲ, ಕೇಂದ್ರ ಸಮಿತಿಯ ನಾರಾಯಣ ಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕರಾದ ಬಾಬು ಪೂಜಾರಿ, ಕೇಂದ್ರ ಸಮಿತಿ ಮಂಗಳೂರು ಇದರ ಸಂಘಟನಾ ಕಾರ್ಯದರ್ಶಿ ಶಿವಪ್ರಸಾದ್ ನೂಚಿಲ, ಘಟಕದ ವಿದ್ಯಾನಿಧಿ ನಿರ್ದೇಶಕರಾದ ಜಯಪ್ರಕಾಶ್ ದೋಳ ಹಾಜರಿದ್ದರು. ಶಿವಪ್ರಸಾದ್ ಮರ್ಧಾಳ ಸ್ವಾಗತಿಸಿ, ಕಾರ್ಯದರ್ಶಿ ಕೃಷ್ಣಪ್ಪ ಅಮೈ ವಂದಿಸಿ, ಸುಪ್ರಿತಾ ಚರಣ್ ಪಾಲಪ್ಪೆ ಕಡಬ ನಿರೂಪಿಸಿದರು.
ತರಭೇತಿದಾರರಾಗಿ ಜೆಸೀ ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ 13 ಶಾಲೆಯ 750 ವಿದ್ಯಾರ್ಥಿಗಳು ಎರಡು ಹಂತದಲ್ಲಿ ತರಬೇತಿ ಪಡೆದರು. ಈ ಕಾರ್ಯಕ್ರಮದಲ್ಲಿ 13 ಶಾಲಾ ಶಿಕ್ಷಕರು ಕೂಡ ಭಾಗವಹಿಸಿದರು, ಯುವವಾಹಿನಿ(ರಿ.) ಕಡಬ ಘಟಕದ ಸದಸ್ಯರು ಕಾರ್ಯಕ್ರಮ ನಿರ್ವಹಿಸಿದರು.