ವಿಟ್ಲ :- ಇಂದು ಬಿಲ್ಲವ ಸಮಾಜವು ಹಿರಿಯರ ಮಾರ್ಗದರ್ಶನದಲ್ಲಿ ಮುಂದುವರಿಯುತ್ತಿದೆ ಹೀಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮುಂದುವರೆದಾಗ ಲಭಿಸುವ ಆರ್ಥಿಕ ಶಕ್ತಿ, ಸಾಮರ್ಥ್ಯವನ್ನು ನಮಗಿಂತ ದುರ್ಬಲರಾಗಿರುವ, ಆಸಕ್ತರ ಕೈಹಿಡಿದೆತ್ತಲು ಬಳಸಿದಾಗ ಬಿಲ್ಲವರು ಬಲ್ಲವರಾಗುತ್ತಾರೆ, ನಿರಂತರ ಅಧ್ಯಯನ ಶೀಲರಾಗಿದ್ದಾಗ ಮಾತ್ರ ಸಮಾಜದಲ್ಲಿ ಪ್ರಬುದ್ಧರಾಗಲು ಸಾಧ್ಯ, ಇಂದು ನಮ್ಮ ಯುವಶಕ್ತಿಯನ್ನು ದೇಶದ ಅತ್ಯುತ್ತಮ ಪ್ರಜೆಗಳನ್ನಾಗಿ ರೂಪುಗೊಳಿಸಬೇಕೆಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ ಹೇಳಿದರು.
ಅವರು ವಿಟ್ಲ ಶಿವಗಿರಿಯ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದ ದೇಯಿ ಬೈದೆತಿ ವೇದಿಕೆಯಲ್ಲಿ ನಡೆದ, ವಿಟ್ಲದಲ್ಲಿ ಅಸ್ತಿತ್ವಕ್ಕೆ ಬಂದ ದ.ಕಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಕೇಂದ್ರ ಸಮಿತಿ,ಮಂಗಳೂರು ಇದರ 36ನೇ ನೂತನ ವಿಟ್ಲ ಘಟಕದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಿರಿಯರ ಮಾರ್ಗದರ್ಶನ ಮತ್ತು ಕಿರಿಯರ ಕ್ರಿಯಾಶೀಲನೆಯ ಮೂಲಕ ಯಾವುದೇ ಸಂಘಟನೆಯ ಅತ್ಯುತ್ತಮವಾಗಿ ಬೆಳೆಯುತ್ತದೆ. ಇದಕ್ಕೆ ಇಲ್ಲಿಯ ಎರಡು ಬಿಲ್ಲವ ಸಂಘ ಮತ್ತು ಯುವವಾಹಿನಿ ಆದರ್ಶವಾಗಿದೆ. ಬಿಲ್ಲವ ಸಮಾಜ ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದಾಗ ಅಂದು ಸಮಾಜ ಮುಂದುವರೆಯಲು ಸಾಧ್ಯವಿದೆ ಎಂದ ಅವರು, ಬ್ರಹ್ಮಶ್ರೀ ನಾರಾಯಣಗುರುಗಳ ತತ್ವದಂತೆ ಇಂದು ನಾವೆಲ್ಲರೂ ವಿದ್ಯಾವಂತರಾಗಿ ಮುಂದುವರೆಯುತ್ತಿದ್ದೇವೆ. ಆದರೆ ಈ ಬಗ್ಗೆ ಅತಿಯಾದ ಆತ್ಮವಿಶ್ವಾಸ ಬೇಡ, ಇಂದು ಮನುಷ್ಯರ ಮೆದುಳಿಗೆ ಅಪಾರ ಶಕ್ತಿಯಿದೆ. ಕೇವಲ ಬ್ರಹ್ಮಶ್ರೀ ನಾರಾಯಣ ಗುರುಗಳ ಪೂಜೆ ಮಾಡಿದರೆ ಸಾಲದು ,ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿ ಶುಭ ಹಾರೈಸಿದರು.
ನೂತನ ಘಟಕವು ಯಶಸ್ವಿಯಾಗಿ ಮುನ್ನಡೆಯಲಿ:
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಬಿಲ್ಲವ ಸಂಘದ ಅಧ್ಯಕ್ಷ ಹರೀಶ್ ಸಿ.ಎಚ್, ಅವರು , ಬಿಲ್ಲವ ಸಂಘ ಹಾಗೂ ಯುವವಾಹಿನಿ ಘಟಕವು ಜೊತೆಜೊತೆಯಾಗಿ ಸಾಗಿ ಸಮಾಜಮುಖಿ ಕಾರ್ಯಗಳನ್ನು ನಡೆಸುವುದು ನಮ್ಮ ಮುಖ್ಯ ಉದ್ದೇಶ, ನೆರೆಯ 16 ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಯುವಕರನ್ನು ಒಗ್ಗೂಡಿಸಿ ನೂತನ ಘಟಕವನ್ನು ರಚಿಸಿದ್ದೇವೆ. ನಾರಾಯಣ ಗುರುಗಳ ತತ್ವ ಆದರ್ಶಗಳ ಪಾಲನೆಯೊಂದಿಗೆ ನೂತನ ಘಟಕವು ಯಶಸ್ವಿಯಾಗಿ ಮುನ್ನಡೆಯಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಜಾನಪದ ಸಂಶೋಧಕರಾದ ಡಾ. ನವೀನ್ ಕುಮಾರ್ ಮರಿಕೆ ಇವರು ದಿಕ್ಸೂಚಿ ಭಾಷಣ ಮಾಡಿದರು. ಮುಖ್ಯ ಆತಿಥಿಗಳಾಗಿ ಆಗಮಿಸಿದ ನಿಕಟಪೂರ್ವ ಜಿಲ್ಲಾ ಲಯನ್ಸ್ ಗವರ್ನರ್ ಡಾ.ಗೀತ್ ಪ್ರಕಾಶ್ ಮಾತನಾಡಿ ಅಂತರಾಷ್ಟ್ರೀಯ ಸಂಸ್ಥೆಗಳಿಗೆ ಸರಿಸಮನಾಗಿ ಯುವವಾಹಿನಿ ಕೆಲಸ ಮಾಡುತ್ತಿದೆ ಎಂದರು.
ವೇದಿಕೆಯಲ್ಲಿ ಮುಂಬಯಿಯ ಪ್ಯಾಶನ್ ಕೊರಿಯೊಗ್ರಾಫರ್, ದೈವ ಪಾತ್ರಿ ಸನ್ನಿಥ್ ಪೂಜಾರಿ, ಯುವವಾಹಿನಿ ಪ್ರಧಾನ ಕಾರ್ಯದರ್ಶಿ ಅಶೋಕ್ ಕುಮಾರ್ ಪಡ್ಪು, ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಪ್ರಭಾಕರ ಸಾಲ್ಯಾನ್ ,ಪುತ್ತೂರು ಘಟಕದ ಅಧ್ಯಕ್ಷ ಅನೂಪ್ ಕುಮಾರ್, ನೂತನ ಅಧ್ಯಕ್ಷರಾದ ಯಶವಂತ ಪೂಜಾರಿ ಹಾಗೂ ಕಾರ್ಯದರ್ಶಿ ಹರೀಶ್ ಕೆ ಇವರು ಉಪಸ್ಥಿತರಿದ್ದರು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು. ಧನಲಕ್ಷ್ಮೀರಾಜೇಶ್ ಹಾಗೂ ಶೋಭಾ ಪ್ರಾರ್ಥಿಸಿದರು.ಪುತ್ತೂರು ಘಟಕದ ಅಧ್ಯಕ್ಷರಾದ ಅನೂಪ್ ಕುಮಾರ್ ಸ್ವಾಗತಿಸಿ, ನೂತನ ಕಾರ್ಯದರ್ಶಿ ಹರೀಶ್ ಕೆ ವಂದಿಸಿದರು. ಶಿಕ್ಷಕಿ ರೇಣುಕಾ ಕಣಿಯೂರು ಮತ್ತು ನವೀನ್ ಆಳಿಕೆ ಕಾರ್ಯಕ್ರಮ ನಿರ್ವಹಿಸಿದರು.