ಬೆಳಕಿನ ಹಬ್ಬವು ಸಮಾಜ ಮುಖಿಯಾಗಿ ಅರಳುವ, ಬೆಳಗುವ ಪರಿಯಿಂದ ಭವ್ಯವಾಗಿ ಅನಾವರಣಗೊಳ್ಳುತ್ತದೆ. ನಮಗೆ ಹಬ್ಬ ಅಥವಾ ಪರ್ಬ ಎಂದರೆ ದೀಪಾವಳಿ ಅದೇ ದೀಪಗಳ ಹಬ್ಬ ತುಳುವೆರೆ ತುಡಾರ ಪರ್ಬ. ಸ್ವತಃ ತಯಾರಿಸಿದ ಗೂಡುದೀಪಗಳು, ವೈವಿದ್ಯಮಯ ರಂಗೋಲಿಯ ಚಿತ್ತಾರ, ದೀಪಗಳ ಬೆಳಗಿನ ನೋಟದ ಮೂಲಕ ಹಬ್ಬವನ್ನು ಆಚರಿಸಿ ನಮ್ಮ ಸಂಪ್ರದಾಯವನ್ನು ಉಳಿಸಿ ಬೆಳೆಸುವ ಯುವವಾಹಿನಿಯ ಶ್ರಮ ಶ್ಲಾಘನೀಯ ಎಂದು ತುಳು ಭಾಷಾ ವಿದ್ವಾಂಸರಾದ ಕೆ.ಕೆ. ಪೇಜಾವರ ತಿಳಿಸಿದರು.
ಅವರು ಯುವವಾಹಿನಿ ಬಂಟ್ವಾಳ ಘಟಕ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಆಶ್ರಯದಲ್ಲಿ ಜರುಗಿದ ತುಳುವೆರೆ ತುಡಾರ ಪರ್ಬ, ಗೂಡುದೀಪ, ರಂಗೋಲಿ ಸರ್ವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತಾನಾಡುತ್ತಾ ತಿಳಿಸಿದರು.
ಪರಸ್ಪರ ದೀಪಗಳಿಂದ ಬೆಸೆದುಕೊಂಡು ಬಂದು ಅಲೌಕಿಕ ಬೆಳಕಿನ ಚಿತ್ತಾರವನ್ನು ಪೂರ್ತಿ ಬಿಡಿಸಿದಂತೆ ಕಾಣುವ ಅಥವಾ ಅದನ್ನು ಅನುಭವಿಸುವ ಅವಕಾಶವಿರುವುದು ದೀಪಾವಳಿ ಹಬ್ಬಕ್ಕೆ ಮಾತ್ರ ಎಂದು ಕರ್ನಾಟಕ ತುಳು ಭಾಷಾ ಅಕಾಡೆಮಿ ಸದಸ್ಯ ಡಿ.ಎಂ. ಕುಲಾಲ್ ತಿಳಿಸಿದರು.
ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ ಸೇಸಪ್ಪ ಕೊಟ್ಯಾನ್ ತುಡಾರ ಪರ್ಬ ಉದ್ಘಾಟಿಸಿದರು. ಅಗ್ರಬೈಲು ಮೋಹನ ಪೂಜಾರಿಯವರು ಗೋಪೂಜೆ ನೆರವೇರಿಸಿದರು. ಉದ್ಯಮಿ ಲ| ಸದಾನಂದ ಶೆಟ್ಟಿ ರಂಗೋಲಿ ಗೂಡುದೀಪ ಸ್ಪರ್ಧೆ ಹಾಗೂ ಬಂಟ್ವಾಳ ತಾಲೂಕು ಬಿಲ್ಲವ ಮಹಿಳಾ ಸಮಿತಿಯ ಅಧ್ಯಕ್ಷೆ ಶ್ರೀಮತಿ ಮಾಲತಿ ಸಂಜೀವ ಪೂಜಾರಿ ರಂಗೋಲಿ ಸ್ಪರ್ಧೆ ಉದ್ಘಾಟಿಸಿದರು.
ವಿಶ್ವ ತುಳು ಪರ್ಬದ ಸಂಯೋಜಕ ಎ.ಸಿ.ಬಂಡಾರಿಯವರು ಸಾರ್ವಜನಿಕರು ಸ್ವತ ತಯಾರಿಸಿದ ಗೂಡುದೀಪಗಳು ಹಾಗೂ ರಂಗೋಲಿಯ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ವಿತರಿಸಿದರು.
ದ.ಕ. ಜಿಲ್ಲಾ ಪಂಚಾಯತ್ ಸದಸ್ಯ ಚೆನ್ನಪ್ಪ ಕೊಟ್ಯಾನ್ ಹಾಗೂ ಕಕ್ಯಪದವು ಬ್ರಹ್ಮ ಬೈದರ್ಕಳಗರಡಿಯ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷ ಪ್ರೇಮನಾಥ ಕೆ. ಸಭೆಯ ಅಧ್ಯಕ್ಷತೆ ವಹಿಸಿದ್ದರು.