ಶಿಕ್ಷಣವು ಮಾನವನನ್ನು ಪರಿಪೂರ್ಣ ಮಾನವೀಯ ಪ್ರಜ್ಞೆಯ ನಾಗರಿಕನನ್ನಾಗಿಸುತ್ತದೆ. ಸ್ಪರ್ಧಾತ್ಮಕ ಯುಗದಲ್ಲಿ ಪಠ್ಯಚಟುವಟಿಕೆಯ ಜೊತೆಗೆ ಜೀವನ ಮೌಲ್ಯ, ಸಂವಹನ ಕೌಶಲಗಳನ್ನು ರೂಢಿಸಿಕೊಳ್ಳುವ ವ್ಯಕ್ತಿತ್ವ ವಿಕಸನಗೊಳಿಸುವ ಶಿಕ್ಷಣದ ಅಗತ್ಯತೆಯೂ ಇದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಪಡೆಯುವ ಹಂತದಲ್ಲಿ ನಿರ್ದಿಷ್ಟ ಗುರಿಯನ್ನು ಇಟ್ಟುಕೊಳ್ಳಬೇಕು. ನಿರಂತರ ಪರಿಶ್ರಮದ ಮೂಲಕ ಗುರಿಯನ್ನು ಮುಟ್ಟಲು ಸಾಧ್ಯ. ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತರಲು ಅನ್ವೇಷಣಾ-2016 ನಂತಹ ಕಾರ್ಯಾಗಾರಗಳ ಅಗತ್ಯತೆ ಇದೆ ಎಂದು ಕಕ್ಯಪದವು ಎಲ್.ಸಿ.ಆರ್. ವಿದ್ಯಾಸಂಸ್ಥೆಯ ಸಂಸ್ಥಾಪಕ ರೋಹಿನಾಥ ಪಾದೆ ಅಭಿಪ್ರಾಯಪಟ್ಟರು.
ಅವರು ಬಿ.ಸಿ.ರೋಡು ಗಾಣದಪಡ್ಪುವಿನ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಯುವವಾಹಿನಿ(ರಿ) ಬಂಟ್ವಾಳ ತಾಲೂಕು ಘಟಕದ ವತಿಯಿಂದ ನಡೆದ ’ಅನ್ವೇಷಣಾ-2016’ ಶೈಕ್ಷಣಿಕ, ವೃತ್ತಿ ಮಾರ್ಗದರ್ಶನ ಕುರಿತ ರಾಜ್ಯ ಮಟ್ಟದ ಒಂದು ದಿನದ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್ ಅನ್ವೇಷಣಾ-2016 ನ್ನು ಉದ್ಘಾಟಿಸಿದರು. ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಪ್ರಧಾನ ಕಾರ್ಯದರ್ಶಿ ಬಿ.ತಮ್ಮಯ ಶುಭಾಶಂಸನೆಗೈದರು.
ವೇದಿಕೆಯಲ್ಲಿ ಬಂಟ್ವಾಳ ತಾಲೂಕು ಬಿಲ್ಲವ ಮಹಿಳಾ ಸಮಿತಿ ಅಧ್ಯಕ್ಷೆ ಭಾರತಿ ಬಿ.ಕುಂದರ್, ಬಿಲ್ಲವ ಮಹಾಮಂಡಲದ ವಕ್ತಾರ ಹರಿಕೃಷ್ಣ ಬಂಟ್ವಾಳ ಮತ್ತು ಆರಾಧನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಕೋರ್ಯ ವೇದಿಕೆಯಲ್ಲಿದ್ದರು.
ಕಾರ್ಯಾಗಾರದ ಅಧ್ಯಕ್ಷತೆಯನ್ನು ಯುವವಾಹಿನಿ ಕೇಂದ್ರ ಸಮಿತಿಯ ವ್ಯಕ್ತಿತ್ವ ವಿಕಸನ ನಿರ್ದೇಶಕ ಗೋಪಾಲಕೃಷ್ಣ ಕುಂದರ್ ವಹಿಸಿದ್ದರು. ವಿದ್ಯಾರ್ಥಿಗಳು ಕ್ರಿಯಾಶೀಲ ಮನೋಭಾವ ರೂಢಿಸಿಕೊಳ್ಳಬೇಕು, ಕಾರ್ಯಾಗಾರದ ಯಶಸ್ಸು ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯಲ್ಲಿದೆ ಎಂದರು.
ಅನ್ವೇಷಣಾ-2016 ಕಾರ್ಯಾಗಾರದ ಸಂಯೋಜಕ ಚೇತನ್ ಎಂ., ಹಾಗೂ ವಿದ್ಯಾರ್ಥಿ ಸಂಘನೆಯ ನಿರ್ದೇಶಕ ವಿಜೆತ್ ಕೋಟ್ಯಾನ್, ಯುವವಾಹಿನಿ ಘಟಕದ ಅಧ್ಯಕ್ಷ ಅರುಣ್ ಕುಮಾರ್, ಕೋಶಾಧಿಕಾರಿ ಸತೀಶ್ ಪೂಜಾರಿ ಬಾಯಿಲ, ಕಾರ್ಯಾಗಾರದ ಸಹಸಂಚಾಲಕರಾದ ನಿತಿನ್ ಎಚ್.ಯು, ಕಿರಣ್ ರಾಜ್ ಪೂಂಜೆರಕೋಡಿ, ಉಪನ್ಯಾಸಕ ಶಿವಪ್ರಸಾದ್ ಉಪಸ್ಥಿತರಿದ್ದರು.
ಯುವವಾಹಿನಿ ಮಾಜಿ ಅಧ್ಯಕ್ಷ ಪ್ರೇಮನಾಥ ಸ್ವಾಗತಿಸಿದರು. ನಿಕಟಪೂರ್ವ ಅಧ್ಯಕ್ಷ ರಾಜೇಶ್ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಕು| ಸಹನಾ ಪ್ರಾರ್ಥಿಸಿದರು. ಯುವವಾಹಿನಿಯ ಜತೆ ಕಾರ್ಯದರ್ಶಿ ಜಯಶ್ರೀ ಕರ್ಕೇರ ಧನ್ಯವಾದಗೈದರು. ಯುವವಾಹಿನಿ ಮಾಜಿ ಅಧ್ಯಕ್ಷ ಹರೀಶ್. ಎಸ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.
Sweet memory