ಬೆಳಕಿನ ಹಬ್ಬ ದೀಪಾವಳಿಯನ್ನು ಯುವವಾಹಿನಿ ಕಾಪು ಘಟಕದ ನೇತೃತ್ವದಲ್ಲಿ ಕಾಪು ಕೊರಗಜ್ಜ ದೈವಸ್ಥಾನದ ಬಳಿ ಕೊರಗರ ಕಾಲೋನಿಯಲ್ಲಿ ಶುಕ್ರವಾರ ವಿಶಿಷ್ಟವಾಗಿ ಆಚರಿಸಲಾಯಿತು.
ಮಹಿಳೆಯರಿಗೆ ಸೀರೆ, ಗಂಡಸರಿಗೆ ಶಾಲು, ಲುಂಗಿ ಡ್ರೆಸ್ ಹಾಗೂ ಸಿಹಿ ತಿಂಡಿ ವಿತರಣೆ ಮಾಡಲಾಯಿತು. ಕಾಲೋನಿಯ ಕುಟುಂಬಗಳ ಸದಸ್ಯರು ಈ ವಿಶಿಷ್ಟ ದೀಪಾವಳಿಯಲ್ಲಿ ಪಾಲ್ಗೊಂಡು ಸಂಭ್ರಮಪಟ್ಟರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ ಉದ್ಘಾಟಿಸಿ ಮಾತನಾಡಿ, ಹಿಂದೂಗಳ ದೊಡ್ಡ ಹಬ್ಬ ಆಗಿರುವ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಆಚರಣೆಗೆ ಯಾವುದೇ ಜಾತಿ, ಮತಗಳ ಭೇದ ಭಾವ ಇಲ್ಲ. ಎಲ್ಲ ವರ್ಗದ ಜನರೂ ಕೂಡಾ ತಮ್ಮ ಇತಿಮಿತಿಗೆ ತಕ್ಕಂತೆ ದೀಪಾವಳಿ ಆಚರಿಸುತ್ತಾರೆ. ಮೂಲ ಜನಾಂಗದ ಜನರು ತಮ್ಮ ಕಾಲೊನಿಗಳಲ್ಲಿ ಇಂದಿಗೂ ಕೂಡಾ ಅಬ್ಬರವಿಲ್ಲದ ಸಾಂಪ್ರದಾಯಿಕ ಶೈಲಿಯ ದೀಪಾವಳಿಯನ್ನು ಆಚರಿಸಿಕೊಂಡು ಬರುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ತುಳುನಾಡಿನ ಜನರ ಕೃಷಿ ಪ್ರಧಾನವಾದ ಜೀವನ ಪದ್ಧತಿಯಲ್ಲಿ ದೀಪಾವಳಿ ಎಂದರೆ ಆದು ದೊಡ್ಡ ಹಬ್ಬ. ಯುವ ವಾಹಿನಿ ಕಾಪು ಘಟಕವು ಮಾದರಿ ರೀತಿಯಲ್ಲಿ ದೀಪಾವಳಿ ಸಂಭ್ರಮವನ್ನು ಆಚರಿಸುತ್ತಿದ್ದು, ಈ ಮೂಲಕ ಸಮಾಜಿಕ ಸಾಮರಸ್ಯದ ಬದುಕು ಇನ್ನಷ್ಟು ಇಮ್ಮಡಿಗೊಳ್ಳಲು ಸಾಧ್ಯವಿದೆ ಎಂದು ಪತ್ರಕರ್ತ ರಾಕೇಶ್ ಕುಂಜೂರು ಹೇಳಿದರು.
ಯುವವಾಹಿನಿ ಕಾಪು ಘಟಕದ ಅಧ್ಯಕ್ಷ ದೀಪಕ್ ಕುಮಾರ್ ಎರ್ಮಾಳ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಕಾಂಗ್ರೆಸ್ ಮುಖಂಡ ಮನ್ಹರ್ ಇಬ್ರಾಹಿಂ, ಪುರಸಭೆ ಸದಸ್ಯರಾದ ಕೆ.ಎಚ್. ಉಸ್ಮಾನ್, ಶಾಂತಲತಾ ಶೆಟ್ಟಿ, ಸುಲೋಚನಾ ಬಂಗೇರ, ಅಶ್ವಿನಿ, ಬಡಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶರ್ಮಿಳಾ, ಉಡುಪಿ ಜಿಲ್ಲಾ ಬಿಲ್ಲವ ಪರಿಷತ್‌ನ ಮಹಿಳಾ ಘಟಕದ ಸಂಚಾಲಕಿ ಆಶಾ ಕಟಪಾಡಿ, ಯುವವಾಹಿನಿ ಉಪಾಧ್ಯಕ್ಷ ಶಶಿಧರ್ ಸುವರ್ಣ, ಕಾಪು ಬಿಲ್ಲವರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಆಶಾ ಶಂಕರ್ ಉಪಸ್ಥಿತರಿದ್ದರು.
ಯುವವಾಹಿನಿ ಕಾಪು ಘಟಕದ ನಿಯೋಜಿತ ಅಧ್ಯಕ್ಷ ನಾಗೇಶ್ ಸುವರ್ಣ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.