ವೇಣೂರು: ಮಳೆಗಾಲದಲ್ಲಿ ನಮಗೆ ನೀರಿನ ಮಹತ್ವ ಗೊತ್ತಾಗುವುದಿಲ್ಲ. ಬೇಸಿಗೆಕಾಲ ಬಂತೆಂದರೆ ಹನಿ ನೀರಿಗೆ ಹಾಹಾಕಾರ ಶುರುವಾಗುತ್ತದೆ. ನೀರಿನ ಜಾಗೃತಿ ಮಳೆಗಾಲದಲ್ಲೇ ಶುರುವಾಗಬೇಕು. ಅದಕ್ಕಾಗಿ ಎಲ್ಲೆಡೆ ಜನತೆ ಮಳೆಕೊಯ್ಲು ಹಾಗೂ ಜನಮರುಪೂರಣಕ್ಕೆ ಒತ್ತು ನೀಡಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋಜನೆಯ ವೇಣೂರು ವಲಯ ಮೇಲ್ವಿಚಾರಕ ಯೋಗೀಶ್ ಹೇಳಿದರು.
ಬಜಿರೆ ಸ.ಉ.ಪ್ರಾ. ಶಾಲೆಯಲ್ಲಿ ಯುವವಾಹಿನಿ ವೇಣೂರು ಘಟಕ ಹಾಗೂ ಲಯನ್ಸ್ ಕ್ಲಬ್ ವತಿಯಿಂದ ಜರಗಿದ ಜಲಮರುಪೂರಣ ಹಾಗೂ ಮಳೆಕೊಯ್ಲು ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ ವೇಣೂರು ಘಟಕ ಹಾಗೂ ಲಯನ್ಸ್ ಕ್ಲಬ್ ಅಧ್ಯಕ್ಷ ನವೀನ್ ಪಚ್ಚೇರಿ ವಹಿಸಿ, ಯುವವಾಹಿನಿ ವೇಣೂರು ಘಟಕ , ಲಯನ್ಸ್ ಕ್ಲಬ್ ವತಿಯಿಂದ ಹಾಗೂ ದಾನಿಗಳ ಸಹಕಾರದೊಂದಿಗೆ ಬಜಿರೆ ಶಾಲೆಯಲ್ಲಿ ಮಳೆಕೊಯ್ಲುವಿನ ವಿಧಾನವನ್ನು ಅಳವಡಿಸಲಾಗಿದೆ. ಇದು ಎಲ್ಲೆಡೆ ನಿರ್ಮಾಣಕ್ಕೆ ಪ್ರೇರಣೆ ಆಗಲಿ ಎಂದರು.
ವೇಣೂರು ಗ್ರಾ.ಪಂ. ಉಪಾಧ್ಯಕ್ಷ ಅರುಣ್ ಕ್ರಾಸ್ತ, ಎಸ್‌ಡಿಎಂಸಿ ಅಧ್ಯಕ್ಷ ಸತೀಶ್ ಹೆಗ್ಡೆ, ಉಪಾಧ್ಯಕ್ಷ ಶಿವಾನಂದ ಗೌಡ, ಯುವವಾಹಿನಿ ಕೇಂದ್ರ ಸಮಿತಿ ನಾಮನಿರ್ದೇಶಿತ ನಿರ್ದೇಶಕ ಯೋಗೀಶ್ ಬಿಕ್ರೊಟ್ಟು, ವೇಣೂರು ಗ್ರಾ.ಪಂ. ಸದಸ್ಯರಾದ ವಿಶಾಲಾಕ್ಷಿ ಶೇಖರ ಪೂಜಾರಿ, ಗಂಗಾಶೇಖರ್, ಎಸ್‌ಡಿಎಂಸಿ ಸದಸ್ಯರು ಹಾಗೂ ವಿದ್ಯಾರ್ಥಿ ಪೋಷಕರು ಉಪಸ್ಥಿತರಿದ್ದರು.
ಶಿಕ್ಷಕ ವೃಂದ, ಯುವವಾಹಿನಿ ಹಾಗೂ ಲಯನ್ಸ್ ಕ್ಲಬ್ ಸದಸ್ಯರು ಸಹಕರಿಸಿದರು. ಯುವವಾಹಿನಿ ವೇಣೂರು ಘಟಕದ ಕೊಶಾಧಿಕಾರಿ ಹರೀಶ್ ಪಿ.ಎಸ್. ಸ್ವಾಗತಿಸಿ, ಲಯನ್ಸ್ ಕ್ಲಬ್ ಸದಸ್ಯ ಹರೀಶ್ ಕುಮಾರ್ ವಂದಿಸಿದರು. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ನಿರಂಜನ ಬಿ. ನಿರ್ವಹಿಸಿದರು.