ಕೂಳೂರು : ನಮ್ಮ ಪೂರ್ವಜರು ಆಟಿ ತಿಂಗಳಲ್ಲಿ ಬರುವ ರೋಗ ರುಜಿನಗಳನ್ನು ತಡೆಗಟ್ಟಲು ಹಲವಾರು ಆಚರಣೆಗಳನ್ನು ಕಾರ್ಯ ರೂಪಕ್ಕೆ ತಂದು ಅದನ್ನು ಆಚರಿಸುತ್ತಿದ್ದರು. ನಿಜವಾಗಿಯೂ ಆಟಿ ಆಚರಣೆಯು ಮೂಢನಂಬಿಕೆಯಲ್ಲ ಅದು ತುಳುವರ ಮೂಲನಂಬಿಕೆ ಎಂದು ಬೆಸೆಂಟ್ ಕಾಲೇಜಿನ ಉಪನ್ಯಾಸಕಿ ರಾಜೇಶ್ವರಿ ತಿಳಿಸಿದರು.
ಅವರು ದಿನಾಂಕ 21.07.19 ರಂದು ಯುವವಾಹಿನಿ (ರಿ) ಕೂಳೂರು ಘಟಕದ ವತಿಯಿಂದ ನಡೆದ ಆಟಿದ ಪೊರ್ಲು-2019 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಯುವವಾಹಿನಿಯ ಮುಖ್ಯ ಧ್ಯೇಯ ಸಂಪರ್ಕದ ನೆಲೆಯಲ್ಲಿ ಕಾರ್ಯಕ್ರಮವು ಘಟಕದ ಸದಸ್ಯರಾದ ಜಯಶ್ರೀ ಹಾಗೂ ಶೋಭ ಇವರ ಮನೆಯಲ್ಲಿ ನಡೆಯಿತು.
ಇನ್ನೋರ್ವ ಮುಖ್ಯ ಅತಿಥಿ ಬಾಸ್ಕರ್ ಪೂಜಾರಿ ರವರು ಹಲಸಿನ ಹಣ್ಣು ತುಂಡು ಮಾಡುವ ಮೂಲಕ ವಿಭಿನ್ನವಾಗಿ ಉದ್ಘಾಟಿಸಿದರು. ಯುವವಾಹಿನಿ (ರಿ) ಕೂಳೂರು ಘಟಕದ ಅಧ್ಯಕ್ಷರಾದ ಭಾಸ್ಕರ ಕೋಟ್ಯಾನ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ವೇದಿಕೆಯಲ್ಲಿರುವ ಎಲ್ಲರಿಗೂ ಎಲೆ ಅಡಿಕೆ ಕೊಟ್ಟು ಶಾಲು ಹೊದಿಸಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಘಟಕದ ಸಲಹೆಗಾರರಾದ ನೇಮಿರಾಜ್, ಕಾರ್ಯಕ್ರಮದ ಸಂಚಾಲಕರಾದ ಶೋಭ. ಟಿ. ಕರ್ಕೇರ, ಕಾರ್ಯದರ್ಶಿ ಮಧುಶ್ರೀ ಪ್ರಶಾಂತ್, ಯುವವಾಹಿನಿ ಕೇಂದ್ರ ಸಮಿತಿಯ ಸ್ಥಾಪಕ ಅಧ್ಯಕ್ಷರಾದ ಸಂಜೀವ ಪೂಜಾರಿ, ಘಟಕದ ನಿಕಟಪೂರ್ವ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್, ಮಾಜಿ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್ ಉಪಸ್ಥಿತರಿದ್ದರು.
ಆಟಿ ಆಚರಣೆಗೆ ಸಂಬಂಧಿಸಿದಂತೆ ರಸಪ್ರಶ್ನೆ ಸ್ಪರ್ಧೆ ಹಾಗೂ ವಿವಿಧ ಆಟಗಳನ್ನು ಘಟಕದ ಕಾರ್ಯದರ್ಶಿ ಮಧುಶ್ರೀ ಪ್ರಶಾಂತ್ ನಡೆಸಿಕೊಟ್ಟರು. ಹಿರಿಯ ಸದಸ್ಯರಾದ ಜಾನಕಿ, ಸುಶೀಲಾ ಹಾಗೂ ಸೀತ ರವರಿಂದ ತುಳು ಪಾರ್ದನ, ಘಟಕದ ಸದಸ್ಯರಾದ ವಿಮಲ, ಜಾನಕಿ ಯವರಿಂದ ಆಟಿ ಕಳೆಂಜ ಪ್ರದರ್ಶನ ಇವೆಲ್ಲವೂ ಕಾರ್ಯಕ್ರಮದ ವಿಶೇಷತೆಗಳಾಗಿತ್ತು. ಕಾರ್ಯಕ್ರಮದಲ್ಲಿ ಸೇಸಪ್ಪ ಪೂಜಾರಿ ಹಾಗೂ ಗಿರಿಜ ಪೂಜಾರ್ತಿ ಇವರು ಹಿರಿಯ ಕೃಷಿಕರಾಗಿದ್ದು, ಈಗಲೂ ಕೃಷಿ ಮಾಡುತ್ತಿದ್ದಾರೆ. ಇವರಿಗೆ ವೇದಿಕೆಯಲ್ಲಿರುವ ಗಣ್ಯರು ಸೇರಿ ಅಭಿನಂದಿಸಿದರು. ಮನೆಯ ಒಡತಿ ಮೀನಾಕ್ಷಿ ಸದಾಶಿವ ಇವರಿಗೆ ಅಧ್ಯಕ್ಷರು ಸ್ಮರಣಿಕೆ ನೀಡಿ ಗೌರವಿಸಿದರು. ಘಟಕದ ಸದಸ್ಯ ಹೇಮಂತ್ ಪ್ರಾರ್ಥಿಸಿದರು. ಘಟಕದ ಸ್ಥಾಪಕ ಅಧ್ಯಕ್ಷರಾದ ಸುಜಿತ್ ರಾಜ್ ನಿರೂಪಿಸಿದರು. ಸಂಚಾಲಕರಾದ ಶೋಭ. ಟಿ ರವರು ವಂದಿಸಿದರು. ಆಟಿ ತಿಂಗಳಲ್ಲಿ ತಯಾರಿಸುವ ಸುಮಾರು 20 ಬಗೆಯ ತಿಂಡಿ ತಿನಿಸುಗಳನ್ನು ಘಟಕದ ಸದಸ್ಯರು ತಯಾರಿಸಿ ತಂದಿದ್ದರು. ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.