ಉಡುಪಿ : ಯುವವಾಹಿನಿ ಉಡುಪಿ ಘಟಕದ ವತಿಯಿಂದ ವಿದ್ಯಾನಿಧಿ ವಿತರಣಾ ಕಾರ್ಯಕ್ರಮ ದಿನಾಂಕ 7/7/2019 ರಂದು ಘಟಕದ ಸಭಾಂಗಣದಲ್ಲಿ ಘಟಕದ ಅಧ್ಯಕ್ಷರಾದ ನಾರಾಯಣ್ ಬಿ. ಎಸ್. ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಘಟಕದ ಸಲಹೆಗಾರರು, ಕೆಂದ್ರ ಸಮಿತಿಯ ಮಾಜಿಅಧ್ಯಕ್ಷರಾದ ಸಂತೋಷ್ ಕುಮಾರ್ ಸ್ವಾಗತಿಸಿದರು, ಮಾಜಿ ಅಧ್ಯಕ್ಷ ರಾದ ಶಂಕರ್ ಪೂಜಾರಿ ಪ್ರಸ್ತಾವನೆ ಮಾಡಿದರು. ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರವೀಣ್.ಎಂ. ಪೂಜಾರಿ, ವಕೀಲರು ಹಾಗೂ ಜಿಲ್ಲಾಧ್ಯಕ್ಷರು ಉಡುಪಿ ಬಿಲ್ಲವ ಯುವ ವೇದಿಕೆ(ರಿ) ಉಡುಪಿ ಜಿಲ್ಲೆ ಇವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಸಮಾಜದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಇದ್ದಾರೆ, ಅವರಿಗೆ ಸರಿಯಾಗಿ ಮಾರ್ಗದರ್ಶನ ನೀಡಿದರೆ ಮುಂದೆ ಸಾಮಾಜದಲ್ಲಿ ಉತ್ತಮ ಪ್ರಜೆಗಳಾಗಬಹುದು ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ಹಿತವಚನ ನೀಡಲು ನರೇಂದ್ರ ಕುಮಾರ್ ಕೋಟ, ಪ್ರಾಧ್ಯಾಪಕರು, ವಿವೇಕಾನಂದ ಹೆಮ್ಮಕಳ ಪ್ರೌಢಶಾಲೆ, ಕೋಟ ಇವರು ಆಗಮಿಸಿ ಸಮಾಜ ಧನಾತ್ಮಕವಾಗಿ ಚಿಂತನೆ ಮಾಡಿದರೆ ಯಾವುದೇ ವಿಷಯದಲ್ಲಿ ಹಿಂದೆ ಇಲ್ಲ, ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಮುಂದೆ ಬರಬೇಕು ಎಂದು ತಿಳಿಸಿದರು. ಪಿ ಯು ಸಿ ಯಲ್ಲಿ ಉತ್ತಮ ಅಂಕವನ್ನು ಪಡೆದ ನಮ್ಮ ಘಟಕ ಸದಸ್ಯರ ಮಕ್ಕಳಾದ , ಶಾರ್ವರಿ ಕಿರಣ್ ನೇಹಾಲ್ ಮತ್ತು ಎಸ್. ಎಸ್. ಎಲ್. ಸಿ ಯಲ್ಲಿ ಉತ್ತಮ ಅಂಕವನ್ನು ಪಡೆದ ರಷ್ಮಿತಾ ಪ್ರವೀಣ್ ಸಾಲಿಯಾನ್ ರನ್ನು ಸನ್ಮಾನ ಮಾಡಲಾಯಿತು. ಸುಮಾರು ಹತ್ತೊಂಬತ್ತು ವಿದ್ಯಾರ್ಥಿಗಳಿಗೆ ರೂ.68,000/- ವಿದ್ಯಾರ್ಥಿವೇತನವನ್ನು ನೀಡಲಾಯಿತು. ಮಕ್ಕಳ ಭವಿಷ್ಯ ನಿರ್ಮಾಣ ನಿರ್ದೇಶಕ ರಾದ ಶ್ರೀ ಅಶೋಕ್ ಕೋಟಿಯನ್ ಇವರು ಮಾತನಾಡಿ ನಮ್ಮ ಸಾಮಾಜದಲ್ಲಿ ತುಂಬಾ ಬಡ ಕುಟುಂಬದ ಮಕ್ಕಳನ್ನು ಆಯ್ಕೆ ಮಾಡಿದ್ದೇವೆ ಎಂದು ತಿಳಿಸಿದರು. ಮುಖ್ಯ ಸಲಹೆ ಗಾರರಾದ ಶಂಕರ ಪೂಜಾರಿ ದ್ವಾರಕ, ಮಹಿಳಾ ಸಂಚಾಲಕಿ ಶಕುಂತಳಾ ಸುಕೇಶ್ ಹಾಗೂ ಕಾರ್ಯದರ್ಶಿ ಮಹಾಬಲ ಅಮೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯುವವಾಹಿನಿಯ ಸದಸ್ಯರೆಲ್ಲರೂ ಸಮವಸ್ತ್ರದಲ್ಲಿ ಭಾಗವಹಿಸಿದ್ದರು. ಮಹೇಶ್ ಇವರು ಕಾರ್ಯಕ್ರಮ ನಿರೂಪಿಸಿದರು, ಕಾರ್ಯದರ್ಶಿಯವರು ಧನ್ಯವಾದ ಸಮರ್ಪಿಸಿದರು.