ಪುತ್ತೂರು : ಯುವವಾಹಿನಿ ಪುತ್ತೂರು ಘಟಕ ಹಾಗೂ ತಾಲೂಕು ಬಿಲ್ಲವ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಪುತ್ತೂರು-ಬಪ್ಪಳಿಗೆ ಬ್ರಹ್ಮಶ್ರಿ ನಾರಾಯಣ ಗುರು ಸಭಾಭವನದಲ್ಲಿ ಯುವವಾಹಿನಿ ಕೇಂದ್ರ ಸಮಿತಿ, ಮಂಗಳೂರು ಇದರ ವ್ಯಾಪ್ತಿಯಲ್ಲಿ ಬರುವ ಯುವವಾಹಿನಿ ಘಟಕಗಳ ಸದಸ್ಯರಿಗೆ ಜೂ.23 ರಂದು ಅಪರಾಹ್ನ ಹಮ್ಮಿಕೊಂಡ ಯುವ ಮನಸ್ಸುಗಳ ಸಮ್ಮಿಲನ ‘ಬಾಂಧವ್ಯ’ ಕಾರ್ಯಕ್ರಮವನ್ನು ಅಯೋಜಿಸಲಾಗಿತ್ತು.
ಮೊಬೈಲ್, ಫೇಸ್‌ಬುಕ್‌ನಲ್ಲಿ ಸದಾ ಚಾಟಿಂಗ್ ಮಾಡುತ್ತಾ ಮಗ್ನರಾಗುವ ಇಂದಿನ ಆಧುನಿಕ ಯುಗದ ಯುವ ಸಮೂಹಕ್ಕೆ ತಮ್ಮ ಭವಿಷ್ಯದ ಸುಂದರ ಬದುಕು ಯಾವ ತೆರನಾಗಿರಬೇಕು ಎಂಬ ವಿಚಾರವಾಗಿ ಯುವ ಸಮೂಹದ ಮನಸ್ಸುಗಳನ್ನು ಒಂದೆಡೆ ಸೇರಿಸಿ ಅವರಿಗೆ ವೈಯಕ್ತಿಕವಾಗಿ, ಕೌಟುಂಭಿಕವಾಗಿ, ಔದ್ಯೋಗಿಕವಾಗಿ ಮತ್ತು ಸಾಮಾಜಿಕವಾಗಿ ಸಮಾಜದಲ್ಲಿ ಸಂತೋಷವಾಗಿ ಹೇಗೆ ಬದುಕನ್ನು ಸಾಗಿಸಬೇಕು ಎನ್ನುವ ನಿಟ್ಟಿನಲ್ಲಿ ಯಾವುದೇ ಭಾಷಣಕ್ಕೆ ಆಸ್ಪದ ಕೊಡದೆ ಕೇವಲ ಸಾಂಸ್ಕೃತಿಕವಾಗಿ ಮನಸ್ಸಿಗೆ ಮುದ ನೀಡುವ `ಮಾತು, ಹರಟೆ, ಆಟ, ಹಾಸ್ಯ, ನೃತ್ಯ, ಮನೋರಂಜನಾ ಆಟ’ದಲ್ಲಿ ಯುವ ಸಮೂಹವು ‘ಇದು ನಮ್ಮ ಕಾರ್ಯಕ್ರಮ’ ಎಂಬಂತೆ ಉಲ್ಲಾಸಭರಿತರಾಗಿ ಪಾಲ್ಗೊಂಡು ಒಂದು ಅಪೂರ್ವ ಯಶಸ್ವಿ ಕಾರ್ಯಕ್ರಮ ಬಾಂಧವ್ಯ.
ಯುವವಾಹಿನಿ ಕೇಂದ್ರ ಸಮಿತಿಯ ವ್ಯಾಪ್ತಿಗೊಳಪಟ್ಟ ಒಟ್ಟು 34 ಘಟಕಗಳ ಪೈಕಿ 26 ಘಟಕಗಳಿಂದ ಸದಸ್ಯರು ಸಾಕ್ಷಿಯೆನಿಸಿದ ಈ ಅಪೂರ್ವ ಕಾರ್ಯಕ್ರಮದಲ್ಲಿ ಬಹಳ ಶಿಸ್ತಿನಿಂದ ಹಾಗೂ ಉಲ್ಲಾಸದಿಂದ ಪಾಲ್ಗೊಂಡು ಆಯೋಜಕರ ಮೆಚ್ಚುಗೆಗೆ ಪಾತ್ರವಾಗಿದೆ. ನಗೆಗಡಲಿನಲ್ಲಿ ತೇಲಾಡಿಸಿದ ವಿಠಲ ನಾಯಕ್‌ರವರ ಹಾಸ್ಯ:ಕಲ್ಲಡ್ಕ ವಿಠಲ ನಾಯಕ್‌ರವರು ವಿಷಯಾಧಾರಿತ ವಿಚಾರವನ್ನು ಮಂಡಿಸುವ ರೀತಿ ಪ್ರೇಕ್ಷಕರನ್ನು ನಿಜಕ್ಕೂ ತುದಿಗಾಲಿನಲ್ಲಿ ನಿಲ್ಲಿಸುತ್ತದೆ. ಅವರು ‘ಸಂಸಾರ’ ಎಂಬ ವಿಚಾರದಡಿಯಲ್ಲಿ ಮಂಡಿಸಿದ ಭಾಷಣದಲ್ಲಿನ ತುಣುಕುಗಳು ನೆರೆದ ಯುವ ಸಮೂಹವನ್ನು ನಗೆಗಡಲಿನಲ್ಲಿ ತೇಲಾಡಿಸಿತ್ತು. ಕೂಡು ಕುಟುಂಬ ಹಾಗೂ ಅವಿಭಕ್ತ ಕುಟುಂಬದಲ್ಲಿನ ಸಾಮ್ಯತೆಗಳು, ಪಿತೃದೇವೋಭವ, ಮಾತೃದೇವೋಭವ ಎಂಬ ಶಬ್ದ ಇಂದು ಕೇವಲ ಎಟಿಎಂ ಮೆಷಿನ್‌ಗಳಾಗಿರುವುದು, ಹೆತ್ತವರು ಹಣ ಮತ್ತು ಅಂಕಗಳಿಗೆ ಜೋತು ಬಿದ್ದು ಮಕ್ಕಳ ಸುಂದರ ಭವಿಷ್ಯವನ್ನು ಕಸಿಯುತ್ತಿರುವುದು, ಎಜ್ಯುಕೇಶನ್ ಹಾಗೂ ಸಿಲೆಬಸ್ ಇವುಗಳ ನಡುವಿನ ಅರ್ಥವನ್ನು ಅರ್ಥೈಸದಿರುವುದು, ಕುಟುಂಬ ಪ್ರಾಧಾನ್ಯತೆ ನೀಡುತ್ತಾ ಕುಟುಂಬದಲ್ಲಿ ಮಾನವೀಯ ಹಾಗೂ ಭಾವಾನಾತ್ಮಕ ಸಂಬಂಧಗಳೊಂದಿಗೆ ಸಂಸ್ಕೃತಿ, ಸಂಸ್ಕಾರದಿಂದ ದೂರಾಗುತ್ತಿರುವುದು, ಯುವಸಮೂಹವು ಹೆತ್ತವರ ಕಷ್ಟ-ಕಾರ್ಪಣ್ಯವನ್ನು ಅರಿಯದೆ ಅವರಾಡುವ ಒಳ್ಳೆಯ ಮಾತುಗಳಿಗೆ ಬೇಸತ್ತು ಆತ್ಮಹತ್ಯೆಯಂತಹ ಬಾಲಿಶ ನಿರ್ಧಾರವನ್ನು ತಳೆಯುತ್ತಿರುವುದು, ಪ್ರಕೃತಿ ಜೊತೆಗೆ ಆಟವಾಡಬೇಕಾಗಿದ್ದ ಮಗುವನ್ನು ಪ್ರಾಯ ತುಂಬುವ ಮೊದಲೇ ಶಾಲೆಗೆ ಸೇರ್ಪಡಿಸಿ, ಮಗುವಿನ ಬಾಲ್ಯವನ್ನು ಕಸಿಯುವ ಮೂಲಕ ಮಕ್ಕಳು ತಮ್ಮ 16ನೇ ವರ್ಷದಲ್ಲಿಯೇ ಖಿನ್ನತೆಗೆ ಒಳಗಾಗುವಂತೆ ಮಾಡುವುದು, ಸಂಸ್ಕಾರಭರಿತ ಹಾಡುಗಳು ಮತ್ತು ಯುವಸಮೂಹದ ಹಾದಿಯನ್ನು ಬದಲಿಸುವ ಇಂದಿನ ಹಾಡುಗಳನ್ನು ತಮ್ಮದೇ ಹಾಸ್ಯದ ಧಾಟಿಯಲ್ಲಿ ಹೇಳುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.
ಯುವ ‘ನವ’ ಮನಸ್ಸುಗಳಾಗಿರಲಿ-ಡಾ|ಬೆಜ್ಜಂಗಳ: ಸಂಪನ್ಮೂಲ ವ್ಯಕ್ತಿ ಡಾ|ರಾಜೇಶ್ ಬೆಜ್ಜಂಗಳರವರು ಮಾತು, ಹರಟೆ, ಆಟವನ್ನೊಳಗೊಂಡ ‘ಯುವ ಮನಸ್ಸುಗಳು’ ಕಾರ್ಯಕ್ರಮವನ್ನು ನಡೆಸಿಕೊಡುತ್ತಾ ಮಾತನಾಡಿ, ರೋಗ ಬರುವುದು ಮಾನವನ ಮನಸ್ಸಿನಲ್ಲಿ ಹುದುಗಿರುವ ಕೆಟ್ಟ ಭಾವನೆಗಳಿಂದಾಗಿದೆ. ಮಾನವ ತನ್ನಲ್ಲಿನ ನಕಾರಾತ್ಮಕ ದೃಷ್ಟಿಕೋನವನ್ನು ಬದಲಾಯಿಸಿ ಸಕಾರಾತ್ಮಕ ದೃಷ್ಟಿಕೋನವನ್ನು ತಳೆಯಬೇಕಾಗಿದೆ. ಮನಸ್ಸು ಎಂಬುದು ಮಾನವನ ದೇಹದ ನಾನಾ ಭಾಗಗಳಲ್ಲಿ ಆವರಿಸಿಕೊಂಡಿರುತ್ತದೆ ವಿನಃ ಮಾನವನಲ್ಲಿ ‘ಬ್ರೈನ್’ನಲ್ಲಿನ ಮನಸ್ಸು ಅಲ್ಲ. ದೇಹ ಹಾಗೂ ಜೀವಕ್ಕೆ ಪ್ರಾಯವಾಗುತ್ತದೆ ನಿಜ ಆದರೆ ಮನಸ್ಸಿಗಲ್ಲ ಎಂಬುದು ನಾವು ತಿಳಿಯಬೇಕಾಗಿದೆ ಎಂದರು.
ಮನೋರಂಜನಾ ಸ್ಪರ್ಧೆಗಳು:ದಿನೇಶ್ ಸುವರ್ಣ ರಾಯಿರವರು ಹಾಜರಿದ್ದ ಮಕ್ಕಳಿಗೆ, ಯುವಸಮೂಹಕ್ಕೆ, ಹಿರಿಯರಿಗೆ, ಪುರುಷರಿಗೆ, ಮಹಿಳೆಯರಿಗೆ ವಿವಿಧ ತೆರನಾದ ಹಾಸ್ಯ ಮಿಶ್ರಿತ ಮನೋರಂಜನಾ ಆಟವನ್ನು ನೆರವೇರಿಸಿದ್ದು, ಹಾಜರಿದ್ದ ಬಿಲ್ಲವ ಸಮುದಾಯ ಸಂತೋಷಭರಿತರಾಗಿ ಮನೋರಂಜನಾ ಆಟದಲ್ಲಿ ಪಾಲ್ಗೊಂಡಿದ್ದರು. ರಾತ್ರಿ ಆಗಮಿಸಿದವರಿಗೆ ಭರ್ಜರಿ ಫಲಾಹಾರ ಹಾಗೂ ಭೋಜನವನ್ನು ಏರ್ಪಡಿಸಲಾಗಿತ್ತು.ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ ಸ್ವಾಗತಿಸಿ, ಕಾರ್ಯದರ್ಶಿ ಪ್ರಶಾಂತ್ ಪಲ್ಲತ್ತಡ್ಕ ವಂದಿಸಿದರು. ಪುಟಾಣಿ ವೈಷ್ಣವಿ ಪ್ರಾರ್ಥಿಸಿದರು. ಯುವವಾಹಿನಿ ಪುತ್ತೂರು ಘಟಕದ ಗೌರವ ಸಲಹೆಗಾರ ಡಾ.ಸದಾನಂದ ಕುಂದರ್, ತಾಲೂಕು ಬಿಲ್ಲವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೌಶಿಕ್ ಸುವರ್ಣ, ಕಾರ್ಯದರ್ಶಿ ಪ್ರಿಯಾಶ್ರೀರವರು ಉದ್ಘಾಟನಾ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಯುವವಾಹಿನಿ ವಾರ್ಷಿಕ ಸಮಾವೇಶದ ನಿರ್ದೇಶಕ ಶಶಿಧರ್ ಕಿನ್ನಿಮಜಲು ಕಾರ್ಯಕ್ರಮ ನಿರ್ವಹಿಸಿದರು.ಯುವವಾಹಿನಿ ಪುತ್ತೂರು ಘಟಕ ಹಾಗೂ ತಾಲೂಕು ಬಿಲ್ಲವ ವಿದ್ಯಾರ್ಥಿ ಸಂಘವು ಹಮ್ಮಿಕೊಂಡ ಬಾಂಧವ್ಯ ವಿಶಿಷ್ಟ ಕಾರ್ಯಕ್ರಮಕ್ಕೆ ಅಧಿಕ ಸಂಖ್ಯೆಯಲ್ಲಿ ಸದಸ್ಯರು ಆಗಮಿಸಿದರು. .ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಹಾಗೂ ಯುವವಾಹಿನಿ ಕೇಂದ್ರ ಸಮಿತಿ
ಮಂಗಳೂರು ಇದರ ಅಧ್ಯಕ್ಷರಾಗಿರುವ ಜಯಂತ್ ನಡುಬೈಲು, ಪುತ್ತೂರು ಘಟಕದ ಗೌರವ ಸಲಹೆಗಾರರು ಡಾ| ಸದಾನಂದ ಕುಂದಾರ್ ರವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಅಲ್ಲದೆ ಆಗಸ್ಟ್ ತಿಂಗಳಲ್ಲಿ ನಡೆಯುವ ಯುವವಾಹಿನಿ ಕೇಂದ್ರ ಸಮಿತಿಯ 32ನೇ ಬೃಹತ್ ಸಮಾವೇಶದ ಆಮಂತ್ರಣ ಪತ್ರಿಕೆಯನ್ನು ಜಯಂತ್ ನಡುಬೈಲುರವರು ಬಿಡುಗಡೆಗೊಳಿಸಿದರು. ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು, ವಿವಿಧ ಘಟಕಗಳ ಅಧ್ಯಕ್ಷರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.