ದಿನಾಂಕ 22-1-2017 ರಂದು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ(ನಿ) ಮಂಗಳೂರು, ದಿ ಕ್ರಿಶ್ಚಿಯನ್ ಎಜ್ಯುಕೇಶನ್ ಸೊಸೈಟಿ (ರಿ) ಮಂಗಳೂರು, ರೋಟರಿ ಕ್ಲಬ್ ಮಂಗಳೂರು, ಯುವವಾಹಿನಿ (ರಿ) ಮಂಗಳೂರು ಘಟಕ ಮತ್ತು I.A.S. ಮಂಗಳೂರು ಸಂಸ್ಥೆಗಳ ಸಹಯೋಗದೊಂದಿಗೆ UPSC/KAS/IBPS ಉಚಿತ ಪ್ರೇರಣಾ ಶಿಬಿರವು ಜರಗಿತು. ಕಾರ್ಯಕ್ರಮವನ್ನು ದ.ಕ. ಜಿಲ್ಲಾ ಎಸ್‌ಪಿ ಭೂಷಣ್ ಗುಲಾಬ್ ರಾವ್ ಬೋರಸೆ IPS ಉದ್ಘಾಟಿಸಿ, ಮಾತನಾಡುತ್ತಾ ಸೇವಾ ಮನೋಭಾವ ಇರುವವರು ಕಠಿಣ ಅಭ್ಯಾಸ, ತರಬೇತು ಪಡೆದು ಜನ ಸೇವೆ ಮಾಡುವ ಮನೋಭಾವವಿದ್ದರೆ ಮಾತ್ರ ಐ.ಎ.ಎಸ್, ಕೆ.ಎ.ಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕೇ ಹೊರತು ಇತರರ ಒತ್ತಾಯ ಅಥವಾ ಯಾವುದೇ ಸೌಲಭ್ಯ ಪಡೆಯುವ ಉದ್ದೇಶದಿಂದ ಅಲ್ಲ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಮಾತನಾಡಿ ಸಂಘವು ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಸತತ ಮೂರು ವರ್ಷಗಳಿಂದ IAS ಪ್ರೇರಣಾ/ತರಬೇತಿ ಶಿಬಿರವನ್ನು ಹಮ್ಮಿಕೊಂಡಿರುವುದಲ್ಲದೆ, ಹೊರ ರಾಜ್ಯಗಳಿಗೆ ಹೋಗಿ ತರಬೇತಿ ಪಡೆಯಲು, ಅಸಹಾಯಕ ಪ್ರತಿಭೆಗಳಿಗೆ ಒಂದು ವರ್ಷ ಉಚಿತ ತರಬೇತಿ ನೀಡುತ್ತಿದೆ ಎಂದರು. ಗೌರವ ಅತಿಥಿಗಳಾಗಿ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಪುತ್ತೂರು ಉಪವಿಭಾಗ ಸಹಾಯಕ ಆಯುಕ್ತ ರಘುನಂದನ್ ಮೂರ್ತಿ ಮಾತನಾಡಿ ಪೋಷಕರ ಪ್ರೋತ್ಸಾಹ, ನಿರಂತರ ಅಧ್ಯಯನ, ಅಭ್ಯಾಸ, ತಯಾರಿ, ಮರಳಿ ಯತ್ನದ ಮನೋಭಾವ ಅಗತ್ಯ ಎಂದರು. IAS ಪ್ರೋಬೇಶನರ್ ಗಾರ್ಗಿ ಜೈನ್ IAS ಇವರು ಮಾತನಾಡಿ ನಿರಂತರವಾದ ಕಠಿಣ ಅಭ್ಯಾಸದಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧ್ಯ ಎಂದರು.
ಮಂಗಳೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಡಾ. ಸದಾನಂದ ಪೆರ್ಲ ಮಾತನಾಡಿ, ಈ ಕಾಲದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಪತ್ರಿಕೆ, ರೇಡಿಯೋವನ್ನು ಯಾವ ರೀತಿ ಪರಿಣಾಮಕಾರಿಯಾಗಿ ಬಳಸಬಹುದೆಂಬ ಮಾಹಿತಿ ನೀಡಿದರು. ಸರ್ವಜ್ಞ IAS ಅಕಾಡೆಮಿ ಮಂಗಳೂರು ಇದರ ನಿರ್ದೇಶಕರಾದ ಸುರೇಶ್ ಎಮ್.ಎಸ್. ಇವರು ಉನ್ನತ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವ ತಯಾರಿ ಮತ್ತು ತರಬೇತಿಯ ಬಗ್ಗೆ ಮಾಹಿತಿ ನೀಡಿದರು. ರೋಟರಿ ಕ್ಲಬ್‌ನ ಉಪಾಧ್ಯಕ್ಷರಾದ ವಸಂತ ಶೆಣೈ, ಯುವವಾಹಿನಿ (ರಿ) ಮಂಗಳೂರು ಘಟಕದ ಅಧ್ಯಕ್ಷ ಸುನಿಲ್ ಕೆ. ಅಂಚನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಆತ್ಮಶಕ್ತಿ ಸಂಘದ ಉಪಾಧ್ಯಕ್ಷ ನೇಮಿರಾಜ್ ಪಿ. ಸ್ವಾಗತಿಸಿದರು. ವಿಜಯ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.