ಅಕ್ಷಯದ ಮನೆಯಿಂದ ಅಕ್ಷರದವರೆಗೆ, ಪುತ್ತೂರಿನಿಂದ ಹತ್ತೂರವರೆಗೆ, ನನ್ನವರು ಎನ್ನುವುದರಿಂದ ನಮ್ಮವರು ಎನ್ನುವವರೆಗೆ ಒಂದು ಅದ್ಭುತ ಯುವ ಪ್ರಪಂಚದಲ್ಲಿ 365 ದಿನಗಳ ನಡಿಗೆ ಆರಂಭಿಸಿದ್ದೆ. ಇನ್ನು 60 ದಿನ ಮಾತ್ರ ಅಷ್ಟರಲ್ಲಿ ನನ್ನ ನಡಿಗೆ ಗುರಿ ಸೇರಬೇಕಿದೆ. ಸಾಕಷ್ಟು ಅನುಭವದೊಂದಿಗೆ, ಸಾಕಷ್ಟು ಮಂದಿಯ ಸ್ನೇಹವನ್ನು ಗಳಿಸಿಕೊಂಡು ಯುವವಾಹಿನಿಯಲ್ಲಿ 10 ತಿಂಗಳ ಪಯಣ ಮುಗಿಸಿದೆ. ಯುವವಾಹಿನಿ ನನ್ನನ್ನು ಎತ್ತರಕ್ಕೆ ಏರಿಸಿದೆ, ಹರಿತಗೊಳಿಸಿದೆ, ಸಾವಿರಾರು ಜನರ ಪ್ರೀತಿ ನೀಡಿದೆ, ಮರೆಯಲಸಾಧ್ಯವಾದ ಒಂದು ಹೊಸ ಅನುಭವವನ್ನು ನೀಡಿದೆ.
ಯುವವಾಹಿನಿ ಎಲ್ಲರಿಗೂ ಸಮಾನವಾದ ಅವಕಾಶ ನೀಡುತ್ತದೆ, ಇಲ್ಲಿ ಪ್ರತಿಭೆಗೆ ಮತ್ತು ದುಡಿಮೆಗಷ್ಟೇ ಬೆಲೆ. ನಮ್ಮ ನಿಮ್ಮ ಆಸ್ತಿ ಅಂತಸ್ತಿನ ಬೆಲೆಯ ಮೇಲೆ ಸ್ಥಾನಮಾನ ನಿಗದಿಯಾಗುವುದಿಲ್ಲ. ಯುವವಾಹಿನಿ ನಿಮ್ಮನ್ನು ಡಮ್ಮಿಯಾಗಲು ಬಿಡಲ್ಲ, ನಿಮ್ಮ ಸ್ಥಾನಮಾನಕ್ಕೆ ಕುತ್ತು ತರಲ್ಲ ಎನ್ನುವುದು ಸತ್ಯ. ಅದನ್ನು ನಾನು ಬಲು ಬೇಗನೇ ಅರಿತುಕೊಂಡಿದ್ದೇನೆ. ಹಾಗೆಂದು ನಾನು ಯುವವಾಹಿನಿಗೆ ಹೆಚ್ಚು ನೀಡಿದ್ದೇನೆ ಎಂದು ನನಗೆ ಒಂದು ದಿನದ ಹೆಚ್ಚಿನ ಅವಕಾಶವೂ ಇಲ್ಲಿಲ್ಲ, ನನ್ನ ಅವಧಿ ಎಣಿಸಿ 365 ದಿನ, ಅದು ಮುಗಿದೊಡನೆ ನಾನು ಇಳಿದುಹೋಗಲೇ ಬೇಕು. ಈ ಸತ್ಯವನ್ನು ಅರಿತುಕೊಂಡಾಗ ಒಂದು ಅದ್ಬುತ ಕೆಲಸ ಕಾರ್ಯ ನಮ್ಮಿಂದ ಮೂಡಿ ಬರಲು ಸಾಧ್ಯವಿದೆ.
ಯುವವಾಹಿನಿಯ ಅಧ್ಯಕ್ಷಗಾದಿಯ ನೈಜ್ಯತೆ ಅರಿವಾಗುವ ಗಳಿಗೆಯಲ್ಲಿ ಮೊದಲಾಕ್ಷರ ಬರೆದು ನಿಮ್ಮ ಮುಂದಿರಿಸಿದ್ದೇ, ಆವಾಗಿನ ಅಳುಕು ಇಂದಿಲ್ಲ, ಆದರೆ ಅದೆಷ್ಟು ಬೇಗ ದಿನ ಹೋಯಿತಲ್ಲ ಎನ್ನುವ ಆಲೋಚನೆ ಮೂಡಿದೆ. ನೀಡಿದ ಭರವಸೆಗಳನ್ನು ಕೈಗೂಡಿಸಿದ ಸಂತೃಪ್ತಿ ನನಗಿದೆ. ಯುವವಾಹಿನಯನ್ನು ಬಲ ಪಡಿಸಿದ ಖುಷಿಯೂ ಇದೆ. ಇನ್ನಷ್ಟು ಕೆಲಸ ಮಾಡಬೇಕು ಎನ್ನುವ ತುಡಿತವಿತ್ತು, ಆದರೆ ದಿನ ಸರಿದು ಹೋಗಿದೆ.
ನನ್ನ ಅವಧಿಯಲ್ಲಿ ಒಂದಕ್ಕಿಂತ ಒಂದು ಘಟಕದ ಕಾರ್ಯಕ್ರಮಗಳು ಶ್ರೇಷ್ಟತೆಯನ್ನು ಉಂಟುಮಾಡಿತ್ತು. ಯುವವಾಹಿನಿ ಸಸಿಹಿತ್ಲು ಘಟಕ ವಿಶುಕುಮಾರ್ ಹೆಸರಿನಲ್ಲಿ ಒಂದು ದಿನದ ವಿಶುಕುಮಾರ್ ಸಮ್ಮೇಳನ ಮಾಡಿ, ಯುವವಹಿನಿ ಮತ್ತು ವಿಶುಕುಮರ್ ಹೆಸರನ್ನು ಸ್ಥಿರಸ್ಥಾಯಿಯಾಗಿಸಿದ್ದರೆ, ಕೂಳೂರು ಘಟಕ ವೈಪಿಎಲ್ ಕ್ರಿಕೆಟ್ ಕ್ರೀಡಾರಂಗದಲ್ಲಿ ಯುವವಾಹಿನಿ ಹೆಸರನ್ನು ಅಗ್ರಪಂಕ್ತಿಗೆ ತಂದಿತ್ತು. ಮಾಣಿ ಘಟಕ ವಿಶ್ವಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿಸಿದೆ ಹೀಗೆ ಸಾಲು ಸಾಲು ಕಾರ್ಯಕ್ರಮಗಳ ನಡುವೆ ಕಾರ್ಕಳದಲ್ಲಿ ಯುವವಾಹಿನಿ ತನ್ನ ಎಗ್ಗೆ ಚಾಚಿತು. ಉತ್ಸಾಹಿ ಯುವ ಸಮುದಾಯವನ್ನೊಳಗೊಂಡ ಕಾರ್ಕಳ ಘಟಕ ಅಸ್ಥಿತ್ವಕ್ಕೆ ಬಂದರೆ. ಬೆಂಗಳೂರು ಘಟಕ ಉದ್ಯೋಗ ಅರಸಿ ಬರುವವರಿಗೆ ಆಶ್ರಯದ ಸಂಕಲ್ಪ ತೊಟ್ಟಿದೆ. ಹೀಗೆ ಒಂದೊಂದು ಘಟಕದ ಕೆಲಸ ಕಾರ್ಯವೂ ಅದ್ಬುತ ಎಲ್ಲವನ್ನೂ ವರ್ಣಿಸುತ್ತಾ ಸಾಗಿದರೆ ಸಿಂಚನವೊಂದರ ಸಂಚಿಕೆ ಅದಕ್ಕೆ ಮೀಸಲಾದೀತು.
ಯುವವಾಹಿನಿ ಘಟಕಗಳ ಈ ಎಲ್ಲಾ ಕೆಲಸ ಕಾರ್ಯಗಳು ನಮ್ಮ ಬದ್ದತೆಯನ್ನು ತೋರಿಸುತ್ತದೆ. ನಮ್ಮ ಪ್ರೀತಿ, ಗೌರವ ನಮ್ಮನ್ನು ಬಲಿಷ್ಠಗೊಳಿಸುತ್ತಿದೆ. ಇದೆಲ್ಲ ನಿರಂತರತೆಯ ಸಂಕೇತ, ನಮ್ಮಲ್ಲಿ ಒಂದು ವರುಷದ ಅವಕಾಶವೇ ನಮ್ಮ ಗಟ್ಟಿಗೊಳಿಸುತ್ತದೆ, ನಮ್ಮನ್ನು ಕ್ರೀಯಾಶೀಲರನ್ನಾಗಿಸುತ್ತದೆ. ನನ್ನ ಒಂದು ವರುಷದ ಅವಧಿಯಲ್ಲಿ ಎಲ್ಲರೂ ನನ್ನೊಂದಿಗಿದ್ದು ಹರಸಿ ಹಾರೈಸಿ ಬೆಂಬಲಿಸಿ ಮುನ್ನಡೆಸಿದ್ದೀರಿ ಎಲ್ಲರಿಗು ನಾನು ಅಭಿವಂದಿಸುತ್ತೇನೆ.
ಇದು ನನ್ನ ಅಧಿಕಾರಾವಧಿಯಲ್ಲಿ ಹೊರಬರುತ್ತಿರುವ ಕೊನೆಯ ಯುವಸಿಂಚನ. ಈ ಸಾಲಿನಲ್ಲಿ ವರ್ಣರಂಜಿತ ಪುಸ್ತಕ ರೂಪದ ಎಲ್ಲಾ ಯುವಸಿಂಚನ ಸಂಚಿಕೆಯೂ ಅದ್ಭುತವಾಗಿ ಮೂಡಿ ಬಂರಲು ಕಾರಣರಾದ ಯುವಸಿಂಚನದ ಸಂಪಾದಕೀಯ ಮಂಡಳಿಯನ್ನು ಅಭಿನಂದಿಸುತ್ತೇನೆ.
ಅಗಸ್ಟ್ 11 ರಂದು ಯುವವಾಹಿನಿಯ ಸಂಸ್ಥೆಯ 32ನೇ ವಾರ್ಷಿಕ ಸಮಾವೇಶನ್ನು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಾಲಯದ ಜಾತ್ರಾ ಗದ್ದೆಯಲ್ಲಿ ವಿಶಿಷ್ಟ ಮತ್ತು ಅರ್ಥಪೂರ್ಣ ನಡೆಸಲು ನಿಮ್ಮೆಲ್ಲರ ಸಹಕಾರವನ್ನು ಯಾಚಿಸುತ್ತಿದ್ದೇನೆ.
ನಿಮ್ಮ ಈ ಉತ್ಸಾಹ ಪ್ರೀತಿ ಎಂದೆಂದಿಗೂ ಸದಾ ಹೀಗೆ ಇರಲೆಂದು ಆಶಿಸುತ್ತೇನೆ.
—-ಜಯಂತ್ ನಡುಬೈಲ್