ಯಡ್ತಾಡಿ : ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಇತರ ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಾಗ ಮಾತ್ರ ಅವರ ಜೀವನಕ್ಕೆ ನಿಜವಾದ ಅಡಿಪಾಯ ಸಿಗುತ್ತದೆ. ಯುವವಾಹಿನಿ (ರಿ) ಯಡ್ತಾಡಿ ಘಟಕ ಸಾಮಾಜಿಕ ಚಟುವಟಿಕೆಗಳ ಜೊತೆಗೆ ಮಕ್ಕಳ ಬೌದ್ಧಿಕ ಚಿಂತನೆ ಹೆಚ್ಚಿಸುವ ನೆಲೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಯೋಜಿಸಿರುವುದು ಶ್ಲಾಘನೀಯ ಎಂದು ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷರಾದ ಜಯಂತ್ ನಡುಬೈಲು ತಿಳಿಸಿದರು. ಅವರು 25.04.2019 ರಂದು ಸಂಜೆ ೬:೦೦ ಘಂಟೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಡ್ತಾಡಿಯಲ್ಲಿ ಜರುಗಿದ ಯುವವಾಹಿನಿ(ರಿ) ಯಡ್ತಾಡಿ ಘಟಕದ ‘ವಿಕಸನ 2019 ಸಮಾರೋಪ ಸಮಾರಂಭ ಹಾಗು ಪದಗ್ರಹಣ’ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿದರು.
ಸಮಾರಂಭದ ಮೊದಲಿಗೆ ಶಿಬಿರದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಂತರ ನಿಶ್ಮಿತಾ, ರಶ್ಮಿತಾ ಹಾಗು ಶ್ರೀಮತಿ ಲಕ್ಷ್ಮಿ ಇವರು ನಾರಾಯಣ ಗುರುಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿದರು. ಸ್ವಾಗತ್ ವಿವಿದೋದ್ಧೇಶ ಸಹಕಾರಿ ಸಂಘ ಬಾರಕೂರು ಇದರ ಅಧ್ಯಕ್ಷರಾದ ಸುಬ್ರಮಣ್ಯ ಎನ್ ಪೂಜಾರಿ ದೀಪ ಬೆಳಗಿಸಿ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿದರು. ವಿಕಸನ-೨೦೧೯ ರ ನಿರ್ದೇಶಕರಾದ ನರೇಂದ್ರ ಕುಮಾರ್ ಕೋಟ ಅರ್ಥವತ್ತಾದ ಕಥೆಯೊಂದಿಗೆ ಮಾತನಾಡಿ, ಮಕ್ಕಳಿಗೆ ಅವರದ್ದೇ ಆದ ಪ್ರಪಂಚದಲ್ಲಿ ಬದುಕಲು ಬಿಟ್ಟು ಅವರಿಗೆ ಅಗತ್ಯವಾದ ಮಾರ್ಗದರ್ಶನವನ್ನು ಪೋಷಕರು ನೀಡಬೇಕು ಎಂದರು. ೨೦೧೭-೧೮ ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಅಧಿಕ ಅಂಕಗಳಿಸಿದ ತನವಿ ಪೂಜಾರಿ ಹಾಗೂ ಮೇಘನಾ ಸಾಯಿಬ್ರಕಟ್ಟೆ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶೀನ ಪಾಣ ಶಿರಿಯಾರ ಹಾಗೂ ರಾಷ್ಟ್ರಮಟ್ಟದ ಕ್ರೀಡಾ ಪಟುವಾದ ಶರತ್ ಪೂಜಾರಿ ಇವರನ್ನು ಸನ್ಮಾನಿಸಲಾಯಿತು. ಅಂತೆಯೇ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ ಚಂದು ಪೂಜಾರಿ ಕಾವಡಿ(ಗರಡಿ ಅರ್ಚಕರು), ಲಿಯಾಖತ್ ಅಲಿ(ರಂಗಭೂಮಿ ಕಲಾವಿದ ಹಾಗೂ ಯುವವಾಹಿನಿಯ ಹಿತೈಷಿ), ಶ್ರೀಮತಿ ಶಾಂತಾ ಪೈ (ಜನ ಮೆಚ್ಚಿನ ಶಿಕ್ಷಕಿ), ಮಂಜುನಾಥ್ ಪೂಜಾರಿ ಅಚ್ಲಾಡಿ(ಗೌರವಾನ್ವಿತ ಯೋಧರು) ಯವರನ್ನು ಗುರುತಿಸಲಾಯಿತು. ಐದು ದಿನಗಳ ವಿಶೇಷ ಶಿಬಿರದಲ್ಲಿ ತನು, ಮನ, ಧನದೊಂದಿಗೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡ ಸಂಪನ್ಮೂಲ ಶಿಕ್ಷಕ ವ್ರ0ದವರಾದ ನರೇಂದ್ರ ಕುಮಾರ್ ಕೋಟ, ನಾಗರಾಜು ಆಲ್ತಾರ್, ಸತೀಶ್ ವಡ್ಡರ್ಸೆ, ಸೋಮಪ್ಪ ಸುವರ್ಣ ಕಾವಡಿ, ಕುಮಾರ್ ಇವರನ್ನು ಸನ್ಮಾನಿಸಲಾಯಿತು.
ನಿಯೋಜಿತ ಅಧ್ಯಕ್ಷರಾದ ಗೀತಾ ಪೂಜಾರಿ ಹಾಗು ನಿಯೋಜಿತ ಕಾರ್ಯದರ್ಶಿ ನಿತೇಶ್ ಪೂಜಾರಿಯವರಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಘಟಕದ ನಿರ್ಗಮನ ಅಧ್ಯಕ್ಷರಾದ ಸತೀಶ್ ಪೂಜಾರಿಯವರು ಮಾತನಾಡಿ ಒಂದು ವರ್ಷದ ಅವಧಿಯಲ್ಲಿ ಹಲವಾರು ವಿಷಯಗಳನ್ನು ಕಲಿಸಿ ಉತ್ತಮ ಕೆಲಸ ಮಾಡಲು ಸಹಕಾರಿಯಾದ ಯುವವಾಹಿನಿಯನ್ನು ನೆನಪಿಸಿ, ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಕೃತಜ್ಞತೆ ತಿಳಿಸಿದರು. ಸಭೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ವೇಕಟೇಶ್ ಪ್ರಭು, ಹೋಟೆಲ್ ಉದ್ಯಮಿ ಜಯರಾಮ್ ಪೂಜಾರಿ, ಕೇಂದ್ರ ಸಮಿತಿ ಸಲಹೆಗಾರರಾದ ಸಂತೋಷ್ ಕುಮಾರ್, ಸತೀಶ್ ವಡ್ಡರ್ಸೆ, ಮಾಧವ ಪಾರಂಪಳ್ಳಿ, ಪ್ರಕಾಶ್ ಪೂಜಾರಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಗೌರವ ಸಲಹೆಗಾರರಾದ ರಾಜು ಪೂಜಾರಿ ಸ್ವಾಗತಿಸಿದರೆ, ಕಾರ್ಯದರ್ಶಿ ಚಂದ್ರ ಪಿ ವಾರ್ಷಿಕ ವರದಿ ಮಂಡಿಸಿದರು. ಶಿಕ್ಷಕರಾದ ನಾಗರಾಜು ಆಲ್ತಾರ್ ಹಾಗೂ ಪ್ರತಿಮಾ ರಮೇಶ್ ಕಾರ್ಯಕ್ರಮ ನಿರೂಪಿಸಿದರು. ನಿಯೋಜಿತ ಕಾರ್ಯದರ್ಶಿ ನಿತೇಶ್ ಪೂಜಾರಿ ಧನ್ಯವಾದ ಸಮರ್ಪಿಸಿದರು. ಸಮಾರೋಪ ಸಮಾರಂಭದ ನಂತರ ಮೂಲ್ಕಿ ಚಂದ್ರಶೇಖರ್ ಸುವರ್ಣ ನಿರ್ದೇಶನದ ‘ತುಳುನಾಡ ವೈಭವ’ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.