ಮಾಣಿ : ಹೆಣ್ಣು ಜಗದ ಕಣ್ಣು,ಮಹಿಳೆ ತನ್ನ ಮೌಲ್ಯಯುತ ಸಮಯವನ್ನು ತನ್ನ ಮನೆಗಾಗಿ ಮಾತ್ರ ಮೀಸಲಿರಿಸಿದೆ ಹೊರಜಗತ್ತಿಗೆ ತೆರೆದುಕೊಳ್ಳಬೇಕು.ತನ್ನವರ ಒಳಿತಿನೊಂದಿಗೆ ಸಂಸ್ಕಾರಯುತ ಜೀವನದ ಮಾದರಿಯಾಗಿ ಇತರರ ಬದುಕಿಗೂ ದಾರಿದೀಪವಾಗಬೇಕೆಂದು ವಿಶ್ವ ಮಹಿಳಾ ದಿನಾಚರಣೆಯ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿದ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ(ರಿ) ಮಾಣಿ ಇದರ ಮಹಿಳಾ ಸಮಿತಿಯ ಅಧ್ಯಕ್ಷರಾದ ತ್ರಿವೇಣಿ ರಮೇಶ್ ಮುಜಲ ತಿಳಿಸಿದರು.
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಮಹಿಳಾ ನಿರ್ದೇಶಕರಾದ ಪಾರ್ವತಿ ಅಮಿನ್ ಅವರು ಯುವವಾಹಿನಿ ಸಮಾಜಿಕ ಕಳಕಳಿ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು.
” ತಾಯಿಯ ಮಡಿಲು ಮಿಗಿಲು” ಎಂಬುದನ್ನು ಅರಿತು ಮಹಿಳೆಗೆ ಮಹನೀಯರು ಗೌರವ ನೀಡಲು ಆರಂಭಿಸಿದ್ದಲ್ಲಿ ಸುಸ್ಥಿರ ಸಮಾಜದ ನಿರ್ಮಾಣ ಸಾಧ್ಯ. ಕಾನೂನು ಬಲಗೊಂಡಲ್ಲಿ ಸ್ತ್ರೀ ತಾರತಮ್ಯ ಕೊನೆಯಾಗಬಹುದು. ಮನೆಯಂಗಳದ ಮೌಲ್ಯಯುತ ಸಂಸ್ಕೃತಿಯೇ ಉತ್ತಮ ಸಮಾಜಕ್ಕೆ ಬುನಾದಿಯಾಗಬಹುದೆಂದು ಸಂವಾದ ಭೂಮಿಕೆಯಲ್ಲಿ ಅತಿಥಿಗಳಾಗಿದ್ದ ಜೆಸಿಐ ವಲಯದ ತರಬೇತುದಾರರಾದ ಗುಣವತಿ ರಮೇಶ್ ನುಡಿದರು.
“ಬಾಲ್ಯದಲ್ಲಿಯೇ ಬದುಕಿನ ಕಷ್ಟದ ಅರಿವನ್ನು ಮಕ್ಕಳಲ್ಲಿ ಮೂಡಿಸಬೇಕು, ಹಡೆದ ತಾಯಿಯ ನೋವನ್ನು ಅರಿಯುವ ಮನಸು ಮಗುವಿಗೆ ದೊರೆಯುವಂತಾಗಬೇಕು.
ಹೀಗಾದರೆ ಅಸಮಾನತೆ ರಹಿತ ಸಮಾಜವನ್ನು ಹುಟ್ಟು ಹಾಕಲು ಸಾಧ್ಯ ಎಂದು ಡಿಪಾರ್ಟ್ಮೆಂಟ್ ಆಫ್ ಸೋಶಿಯಲ್ ವರ್ಕ್ಸ್ ಆಳ್ವಾಸ್ ಕಾಲೇಜ್, ಮೂಡಬಿದ್ರೆ ಇದರ ಎಸೋಸಿಯೆಟ್ ಪ್ರೊಫೆಸರ್ ಡಾ.ಮಧುಮಾಲಾ.ಕೆ ತಿಳಿಸಿದರು.
ಮಹಿಳೆ ಎಂದರೆ ಮೂರಕ್ಷರದ ಪದವಲ್ಲ.” ಭೂಮಿ,ಭಾನು,ಗರ್ಭ” ಈ ಮೂರು ಲೋಕಗಳನ್ನು ತೋರಿಸಬಲ್ಲ ವಿಸ್ಮಯ ಸ್ವರೂಪಿ.ಹೆಣ್ಣನ್ನು ಹೆಣ್ಣಾಗಿ ಬದುಕಲು ಬಿಡಬೇಕು. ಹೆಣ್ಣಿಗಾಗುತ್ತಿರುವ ಅನ್ಯಾಯದ ವಿರುದ್ಧ ಪ್ರತಿಯೊಬ್ಬರೂ ಸೆಟೆದು ನಿಲ್ಲುವಂತಾಬೇಕು ಎಂದು ಖ್ಯಾತ ಸಾಹಿತಿ ಹಾಗೂ ಸಾಮಾಜಿಕ ಹೋರಾಟಗಾರರಾದ ಅತ್ರಾಡಿ ಅಮೃತ ಶೆಟ್ಟಿ ಹೇಳಿದರು.
“ನಮ್ಮನ್ನು ಹಡೆದವಳು ಹೆಣ್ಣೆ,ಪೂರೆಯುವವಳು ಹೆಣ್ಣೇ” ಮಹಿಳೆಯು ಶೋಷಣೆಯನ್ನು ಮೆಟ್ಟಿ ನಿಲ್ಲುವಂತಹ ಸ್ವಭಾವವನ್ನು ರೂಢಿಸಿಕೊಳ್ಳಬೇಕು.ಹೆತ್ತವರು ಮಕ್ಕಳನ್ನು ಸ್ನೇಹಿತರಂತೆ ಕಂಡಾಗ ಮಾತ್ರ ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳುವ ಮನೋಭಾವವನ್ನು ಬೆಳೆಸಿಕೊಳ್ಳುತ್ತಾರೆ ಎಂದು ಬಂಟ್ವಾಳದ ಮಹಿಳಾ ಅಭಿವೃದ್ಧಿ ಇಲಾಖೆಯ ವಕೀಲರು ಹಾಗೂ ಸಂಧಾನಕಾರರಾದ ಆಶಾಮಣಿ ರೈ ಹೇಳಿದರು.
ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ನಾರಾಯಣ ಗುರು ಸೇವಾ ಸಂಘ ಮಾಣಿ,ಮಹಿಳಾ ಸಮಿತಿ ಮಾಣಿ,ಯುವವಾಹಿನಿ (ರಿ.) ಕೇಂದ್ರ ಸಮಿತಿ ಮತ್ತು ಯುವವಾಹಿನಿ(ರಿ.) ಮಾಣಿ ಘಟಕ ಜಂಟಿಯಾಗಿ ದಿನಾಂಕ 21.04.2019 ರಂದು ನಾರಾಯಣ ಗುರು ಸಮುದಾಯ ಭವನ ಮಾಣಿಯಲ್ಲಿ ಜರುಗಿದ “ಮಹಿಳಾ, ಶೋಷಣೆ, ದೌರ್ಜನ್ಯ,ಅತ್ಯಾಚಾರ” ಕುರಿತು ಸಂವಾದ ಕಾರ್ಯಕ್ರಮ ನಡೆಯಿತು. ಈ ಸಂವಾದದಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚಿಸಿ ಅನಿಸಿಕೆ ವ್ಯಕ್ತಪಡಿಸಲಾಯಿತು.
ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘ(ರಿ.) ಮಾಣಿ ಇದರ ಅಧ್ಯಕ್ಷರಾದ ಶ್ರೀ ನಾರಾಯಣ ಸಾಲ್ಯಾನ್ ಇವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಬ್ರಹ್ಮ ಶ್ರೀ ನಾರಾಯಣ ಗುರುಸೇವಾ ಸಂಘ ಇದರ ಗೌರವಾಧ್ಯಕ್ಷರಾದ ಶ್ರೀ ಈಶ್ವರ ಪೂಜಾರಿ ಹಿರ್ತಡ್ಕ,ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷರಾದ ಜಯಂತ್ ನಡುಬೈಲು, ಯುವವಾಹಿನಿ ಮಾಣಿ ಘಟಕದ ಅಧ್ಯಕ್ಷರಾದ ಹರೀಶ್ ಪೂಜಾರಿ ಬಾಕಿಲ,ಕೇಂದ್ರ ಸಮಿತಿಯ ಮಾಣಿ ಘಟಕದ ಸಲಹೆಗಾರದ ರವಿಚಂದ್ರ, ಕೇಂದ್ರ ಸಮಿತಿ ಮಾಜಿ ಅಧ್ಯಕ್ಷರು ಪ್ರೇಮನಾಥ್ ಕೆ. ಬಂಟ್ವಾಳ, ಕೇಂದ್ರ ಸಮಿತಿಯ ಮಹಿಳಾ ನಿರ್ದೇಶಕರಾದ ಪಾರ್ವತಿ ಅಮೀನ್, ರೋಹಿನಿ ಶ್ರೀನಿವಾಸ ಪೆರಾಜೆ, ಮಹಿಳಾ ನಿರ್ದೇಶಕರು ಯುವವಾಹಿನಿ ಮಾಣಿ ಘಟಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಮಾರಂಭದಲ್ಲಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ತುಕಾರಾಂ ಪೂಜಾರಿ, ಬಂಟ್ವಾಳ ಘಟಕದ ಉಪಾಧ್ಯಕ್ಷರಾದ ಸತೀಶ್ ಬಾಯಿಲ,ಕೊಲ್ಯ ಘಟಕದ ಕಾರ್ಯದರ್ಶಿ ಮತ್ತು ಸದಸ್ಯರು, ಮಾಣಿ ಘಟಕದ ನಿ.ಪೂ ಅಧ್ಯಕ್ಷರು ರಾಜೇಶ್ ಬಾಬನಕಟ್ಟೆ, ಉಪಾಧ್ಯಕ್ಷರಾದ ರಮೇಶ್ ಮುಜಲ,ಪ್ರಶಾಂತ್ ಪುಂಜಾವು, ಕಾರ್ಯದರ್ಶಿ ಸುಜಿತ್ ಅಂಚನ್,ಕೊಶಧಿಕಾರಿ ಶಿವರಾಜ್ P.R ಉಪಸ್ಥಿತರಿದ್ದರು.
ನೀತಾ ಕುಕ್ಕರಬೆಟ್ಟು ಸ್ವಾಗತಿಸಿದರು, ಗೀತಾ ಚಂದ್ರಶೇಖರ ಗೋಳಿಕಟ್ಟೆ ವಂದಿಸಿದರು, ತೃಪ್ತಿ ಮಿತ್ತೂರು ಕಾರ್ಯಕ್ರಮ ನಿರೂಪಿಸಿದರು.