ಯಡ್ತಾಡಿ : ಯುವವಾಹಿನಿ (ರಿ) ಯಡ್ತಾಡಿ ಘಟಕದ ಬೇಸಿಗೆ ಶಿಬಿರ, ‘ವಿಕಸನ-2019’ ರ ಅಂಗವಾಗಿ ನಾಲ್ಕನೇ ದಿನ ಮಕ್ಕಳಿಗೆ ‘ಅಗ್ನಿ ಸುರಕ್ಷತೆಯ’ ಬಗ್ಗೆ ಅರಿವು ಮೂಡಿಸಲಾಯಿತು. ಅಂಕಿ ಅಂಶಗಳ ಪ್ರಕಾರ ಹಲವಾರು ಬೆಂಕಿ ಅವಘಢಗಳು ಅರಿವಿನ ಕೊರತೆಯಿಂದ ಉಂಟಾಗುವಂತಹದು. ಬಿಸಿಲಿನ ಬೇಗೆಯ ಈ ದಿನಗಳಲ್ಲಿ ಅಗ್ನಿ ಅನಾಹುತಗಳ ಸಾಧ್ಯತೆ ಇನ್ನೂ ಹೆಚ್ಚು. ‘ಅರಿವಿನ ತಂಗಾಳಿ’ ಹೆಸರಿನಲ್ಲಿ ನಡೆಯುತ್ತಿರುವ ಈ ಶಿಬಿರದಲ್ಲಿ ಅಗ್ನಿ ಅನಾಹುತಗಳನ್ನು ಸರಿಯಾದ ಮಾಹಿತಿಯ ಮೂಲಕ ಆದಷ್ಟು ಕಡಿಮೆ ಮಾಡುವ ಮೂಲಕ ಉದ್ದೇಶದಿಂದ ‘ಅಗ್ನಿ ಸುರಕ್ಷತೆ ಮತ್ತು ಮುಂಜಾಗ್ರತೆ ಬಗ್ಗೆ ಮಾಹಿತಿ ಮತ್ತೆ ಪ್ರಾತ್ಯಕ್ಷಿಕೆ ಯನ್ನು ಕುಂದಾಪುರ ಅಗ್ನಿಶಾಮಕ ಠಾಣೆಯಿಂದ ಏರ್ಪಡಿಸಲಾಗಿತ್ತು.
ಮೊದಲು ಉಪನ್ಯಾಸದ ಮೂಲಕ ಅಧಿಕಾರಿಗಳಾದ ರಾಘವ್ ಅವರು ಮಕ್ಕಳಿಗೆ ಮನ ಮುಟ್ಟುವಂತೆ ಬೆಂಕಿಯ ಬಗ್ಗೆ ವಿವರವಾಗಿ ತಿಳಿಸಿದರು. ಬೆಂಕಿ ಯಾವ ರೀತಿಯಲ್ಲಿ ಪಸರುತ್ತದೆ, ಅದನ್ನು ತಡೆಯಲು ಏನು ಮಾಡಬೇಕು ಮತ್ತು ಯಾಕಾಗಿ ಮಾಡಬೇಕು ಎನ್ನುವುದನ್ನು ವಿವರಿಸಿದರು. ಉಪನ್ಯಾಸದ ಜೊತೆ ಶಿಬಿರಾರ್ಥಿಗಳಿಂದ ಬೆಂಕಿ ಅವಘಡವನ್ನು ಯಾವ ರೀತಿಯಲ್ಲಿ ತಡೆಯಬಹುದೆಂಬುದಾಗಿ ಪ್ರಾಯೋಗಿಕವಾಗಿ ತಿಳಿಸಿದರು. ತನ್ಮೂಲಕ ಬೆಂಕಿ ಬಗ್ಗೆ ಇರುವ ಹೆದರಿಕೆಯನ್ನು ದೂರವಾಗಿಸಿ ಅದನ್ನು ತಡೆಯುವ ಬಗ್ಗೆ ಜಾಗ್ರತಿ ಮೂಡಿಸಿದರು. ಶಾಲೆಯ ಅಡುಗೆ ಕೆಲಸದಲ್ಲಿ ನಿರತರಾದವರಿಗೂ ಗ್ಯಾಸ್ ಸ್ಟವ್ ಮೂಲದ ಅಗ್ನಿ ದುರಂತವನ್ನು ಒಂದು ಸಾಮಾನ್ಯ ಗೋಣಿ ಚೀಲದ ಮೂಲಕ ಯಾವ ರೀತಿಯಲ್ಲಿ ತಡೆಯಬಹುದು ಎಂದು ಪ್ರಾಯೋಗಿಕವಾಗಿ ತಿಳಿಸಲಾಯಿತು. ಆಮೇಲೆ ಶಾಲೆಯ ಮೈದಾನದಲ್ಲಿ ದೊಡ್ಡ ಗಾತ್ರದ ಬೆಂಕಿಯನ್ನು ಯಾವ ರೀತಿ ಮುನ್ನೆಚ್ಚರಿಕೆ ವಹಿಸಿ ತಡೆಯಬಹುದೆಂಬ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ವಿವಿಧ ಗಾತ್ರದ ಕಟ್ಟಡಗಳ ಬೆಂಕಿಯನ್ನು ಬೇರೆ ಬೇರೆ ರೀತಿಯ ಫಿಲ್ಟರ್ ಬಳಸಿ ಯಾವ ರೀತಿ ಅಗ್ನಿ ಶಾಮಕ ದಳದವರು ನಿಯಂತ್ರಿಸುತ್ತಾರೆ ಎಂಬುದನ್ನು ಮಕ್ಕಳು ಹಾಗೂ ಯುವವಾಹಿನಿ ಸದಸ್ಯರು ಕುತೂಹಲದಿಂದ ವೀಕ್ಷಿಸಿದರು.