ಮಂಗಳೂರು : ಹದಿಹರೆಯದ ಅವಧಿಯು ಏರಿಳಿತದಿಂದ ಕೂಡಿರುತ್ತದೆ. ವ್ಯಕ್ತಿಯ ಬಾಲ್ಯದ ಸುರಕ್ಷಿತ ಹಿಡಿತದಿಂದ ಪ್ರೌಡಿಮೆಯ ಕಡೆಗೆ ಹೆಜ್ಜೆಯಿಡುತ್ತಾನೆ. ಈ ಹಂತದಲ್ಲಿ ಮಕ್ಜಳೆಡೆಗೆ ಗಮನ ನೀಡಿ ಅವರ ಮನೋವಿಕಾಸದ ಬಗ್ಗೆ ಕಾಳಜಿ ವಹಿಸಬೇಕು ಎಂದು ಖ್ಯಾತ ಮನೋವೈದ್ಯರಾದ ಡಾ.ಅರುಣಾ ಯಡಿಯಾಳ್ ತಿಳಿಸಿದರು.
ಅವರು ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ಮಂಗಳೂರಿನ ಇಂದಿರಾ ಪ್ರಿಯದರ್ಶಿನಿ ಉದ್ಯಾನವನದಲ್ಲಿ ದಿನಾಂಕ 23.03.2019ರಂದು ನಡೆದ ಮನೆ, ಮನಸ್ಸು, ಜೀವನ ಕನಸುಗಳ ಜೊತೆ ಮಾತುಕತೆ ಮನದ ಮಾತು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಒಬ್ಬನು ಯೋಚಿಸುವ ರೀತಿ, ಭಾವನೆಗಳ ಮೇಲಿನ ನಿಯಂತ್ರಣ ಮತ್ತು ವರ್ತನೆಯಲ್ಲಾಗುವ ಅಸಾಮಾನ್ಯ ಬದಲಾವಣೆಯೇ ಮಾನಸಿಕ ತೊಂದರೆ. ಲೋಕದ ಎಲ್ಲಾ ಕಡೆಗಳಲ್ಲೂ ಕೋಟಿಗಟ್ಟಲೆ ಜನರಿಗೆ ಮಾನಸಿಕ ತೊಂದರೆಗಳಿವೆ. ಇದು ಅವರ ಬಂಧುಮಿತ್ರರ ಬದುಕನ್ನೂ ಬಾಧಿಸುತ್ತದೆ. ಜೀವನದ ಒಂದಲ್ಲ ಒಂದು ಹಂತದಲ್ಲಿ ಪ್ರತಿ ನಾಲ್ಕು ಜನರಲ್ಲಿ ಒಬ್ಬನು ಮಾನಸಿಕ ತೊಂದರೆಗೆ ಒಳಗಾಗುತ್ತಾನೆ. ಲೋಕದಲ್ಲಿ ಹೆಚ್ಚಿನವರನ್ನು ಬಾಧಿಸುವಂಥ ಕಾಯಿಲೆ ಖಿನ್ನತೆ. ಗಂಭೀರವಾದ ಮಾನಸಿಕ ತೊಂದರೆಗಳು. ಅವು ಒಬ್ಬ ವ್ಯಕ್ತಿಯನ್ನು ಎಷ್ಟು ಬಾಧಿಸುತ್ತವೆಂದರೆ ಅವನಿಂದ ಸಾಮಾನ್ಯ ಕೆಲಸಗಳನ್ನು ಮಾಡಲೂ ಕಷ್ಟವಾಗುತ್ತದೆ ಎಂದು ಮನದ ಮಾತು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಡಾ.ಅರುಣಾ ಯಡಿಯಾಳ್ ತಿಳಿಸಿದರು.
ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದ ಈ ಕಾರ್ಯಾಗಾರದಲ್ಲಿ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು. ಉತ್ತಮ ಪ್ರಶ್ನೆಗಾಗಿ ಶಿಕ್ಷಕಿ ಅಮಿತಾಂಜಲಿ ಕಿರಣ್ ಉಡುಪಿ ಇವರು ಬಹುಮಾನ ಪಡಕೊಂಡರು. ಶ್ಯಾಮಲ ವಿಕ್ರಮ್ ಕಾರ್ಯಾಗಾರವನ್ನು ಉದ್ಘಾಟಿಸಿದರು. ಯುವವಾಹಿನಿ(ರಿ) ಮಂಗಳೂರು ಮಹಿಳಾ ಘಟಕದ ಅಧ್ಯಕ್ಷರಾದ ರಶ್ಮಿ.ಸಿ ಕರ್ಕೆರಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಸಲಹೆಗಾರರಾದ ಜಿತೇಂದ್ರ ಜೆ.ಸುವರ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಿಸೆಸ್ ಮಂಗಳೂರು 2018 ಪ್ರಶಸ್ತಿಯನ್ನು ಪಡಕೊಂಡ ಸುಧೀಕ್ಷಾ ಕಿರಣ್ ಸುವರ್ಣ ಇವರನ್ನು ಸನ್ಮಾನಿಸಲಾಯಿತು. ಮಹಿಳಾ ಘಟಕದ ಸೇವಾ ಕಾರ್ಯಕ್ರಮದ ಅಂಗವಾಗಿ ಎರಡು ಕಸದ ತೊಟ್ಟಿಯನ್ನು ಇಂದಿರಾ ಪ್ರಿಯದರ್ಶಿನಿ ಉದ್ಯಾನವನಕ್ಕೆ ಹಸ್ತಾಂತರಿಸಲಾಯಿತು. ಕಾರ್ಯಕ್ರಮದ ಬಳಿಕ ಮಹಿಳಾ ಘಟಕದ ಸದಸ್ಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.ಕಾರ್ಯಕ್ರಮದ ಸಂಚಾಲಕರಾದ ಸರಸ್ವತಿ, ಸಹಸಂಚಾಲಕರಾದ ಲೋಲಾಕ್ಷಿ ದೇವೇಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯುವವಾಹಿನಿ (ರಿ) ಮಹಿಳಾ ಘಟಕದ ಘಟಕದ ಉಪಾಧ್ಯಕ್ಷರಾದ ಉಮಾ ಶ್ರೀಕಾಂತ್ ಸ್ವಾಗತಿಸಿದರು. ಕಾರ್ಯಕ್ರಮದ ಸಂಚಾಲಕರಾದ ಸರಸ್ವತಿ ವಂದಿಸಿದರು. ಶುಭಾರಾಜೇಂದ್ರ ಕಾರ್ಯಕ್ರಮ ನಿರೂಪಿಸಿದರು ನಿರೂಪಿಸಿದರು.