ಮಂಗಳೂರು : ವೇದಿಕೆಯ ಮೇಲೆ ಮಾತು ಆರಂಭಿಸುತ್ತಿದ್ದಂತೆ ಸ್ವಲ್ಪ ಸಮಯದ ಕೂಡಲೇ ವಿಶುಕುಮಾರ್ ಬದುಕಿನ ಚಿತ್ರಣ ರೂಪುಗೊಳ್ಳುವಂತಿತ್ತು. ತಮ್ಮ ಕಾವ್ಯದ ಪದಗಳ ಜೋಡಣೆಯೊಡನೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಸಾಹಿತಿಯ ಜೀವನದ ಕಥೆಗೆ ಸಾಕ್ಷಿಯಾಗಿದ್ದರು..ಜೊತೆಗೆ ಮೇಳೈಸುವ ರಾಗಲಾಪದೊಡನೆ ಅಲ್ಲೇ ಬದಿಯಲ್ಲಿ ಶರವೇಗದಿ ಸಾಗುತ್ತಿದ್ದ ಚಿತ್ರ ಪಟಲ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿತ್ತು.
ಹೌದು,,ಇದು 2019 ಫೆಬ್ರವರಿ 17ರಂದು ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ, ಯುವವಾಹಿನಿ ಸಸಿಹಿತ್ಲು ಘಟಕದ ಆತಿಥ್ಯದಲ್ಲಿ ಮಂಗಳೂರು ಪುರಭವನದಲ್ಲಿ ನಡೆದ ವಿಶುಕುಮಾರ್ ಕನ್ನಡ ಸಾಹಿತ್ಯ ಸಮ್ಮೇಳನದ ಕಾವ್ಯ ಕುಂಚ ಗಾಯನದಲ್ಲಿ ವಿಶುಕುಮಾರ್ ಎಂಬ ವೇದಿಕೆಯ ಚಿತ್ರಣ..
ವೇದಿಕೆಯಲ್ಲಿ ಸಾಹಿತ್ಯಾಸಕ್ತರ ಸಂಗಮವಾಗಿತ್ತು. ಒಬ್ಬರಾದ ಮೇಲೆ ಮತ್ತೊಬ್ಬರು ಎಂಬಂತೆ ಐದು ಸಾಹಿತಿಗಳು ವಿಶುಕುಮಾರ್ ಕಾವ್ಯ ಚರಿತ್ರೆಗೆ ಸಾಕ್ಷಿಯಾಗಿದ್ದರು.. ವಿಜಯಲಕ್ಷ್ಮಿ ಕಟೀಲ್, ಪ್ರಮೀಳಾ ದೀಪಕ್, ಸುಮತಿ, ಯೋಗೀಶ್ ಕೈರೋಡಿ, ನರೇಶ್ ಕುಮಾರ್ ಸಸಿಹಿತ್ಲು ಇವರೆಲ್ಲರ ಅದ್ಭುತ ನೋಟದಲ್ಲಿ ವಿಶುಕುಮಾರ್ ಬದುಕು – ಬವಣೆಗಳೆಲ್ಲವೂ ಅಕ್ಷರ ರೂಪದಲ್ಲಿ ಬಿಂಬಿತವಾಗಿದ್ದವು.. ಇದಕ್ಕೆ ಸರಿಹೊಂದುವಂತೆ ಶ್ರುತಿ ಬದ್ಧ ನಾದಕ್ಕೆ ದನಿಯಾದವರು ಭಾಸ್ಕರ್ ರಾವ್ ಬಿಸಿರೋಡ್.. ನಾದ ಕಂಠ ಸಿರಿಗೆ ನೆರೆದಿದ್ದ ಜನಸ್ತೋಮ ತೂಗುತ್ತಿತ್ತು. ಅತೀವ ಆಸಕ್ತಿಯಿಂದ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದ ಸಾಹಿತ್ಯಾಭಿಮಾನಿಗಳ ದಂಡೇ ಇತ್ತು.. ಅಲ್ಲೇ ಪಕ್ಕದಲ್ಲಿ ಹಲವು ಬಣ್ಣಗಳನ್ನು ಹಿಡಿದುಕೊಂಡು, ಬೇಗ ಬೇಗನೆ ವರ್ಣಗಳಲ್ಲೇ ಚಿತ್ತಾರ ಬಿಡಿಸುತ್ತಿದ್ದ ಕಲೆಗಾರ.. ತನ್ನ ಕೈಚಳಕದಿಂದ ವಿಶುಕುಮಾರ್ ವ್ಯಕ್ತಿತ್ವವನ್ನು ವೇದಿಕೆ ಮೇಲೆ ತಂದಿಟ್ಟಿದ್ದರು.. ನೋಡುಗರೆಲ್ಲರೂ ಮೂಕವಿಸ್ಮಿತರಾಗಿದ್ದರು. ಈ ಕುಂಚಕ್ಕೆ ಕಾರಣರಾಗಿದ್ದು ಯುವ ಕಲಾವಿದ ದೀಪೇಶ್ ರಾಜ್..
ಹೀಗೆ ವೇದಿಕೆ ಮೇಲಿನ ಎಲ್ಲಾ ಕಲಾವಿದರು – ಸಾಹಿತ್ಯಾಸಕ್ತರು ಅಭೂತಪೂರ್ವ ಕ್ಷಣವೊಂದಕ್ಕೆ ಸಾಕ್ಷಿಯಾಗಿದ್ದರು. ಈ ಕಾರ್ಯಕ್ರಮವನ್ನು ಪ್ರಜ್ಞಾ ಬಿ ಓಡಿಲ್ನಾಳ ನಿರೂಪಿಸಿದರು..
ವರದಿ : ಪ್ರಜ್ಞಾ ಬಿ ಓಡಿಲ್ನಾಳ