ಮಂಗಳೂರು : ಹಿರಿಯ ಸಾಹಿತಿ, ನಟ, ನಿರ್ದೇಶಕ ದಿ.ವಿಶುಕುಮಾರ್ ಅವರ 16 ಕಾದಂಬರಿಗಳು ಹಾಗೂ 12 ನಾಟಕಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಜನಮಾನಸದಿಂದ ದೂರವಾಗುತ್ತಿರುವ ಅವುಗಳನ್ನು ಮತ್ತೆ ಯುವ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಯುವವಾಹಿನಿ ಸಂಸ್ಥೆಯು ಮೊದಲ ಹಂತದಲ್ಲಿ 4 ಕಾದಂಬರಿಗಳನ್ನು ಮರುಮುದ್ರಣ ಗೊಳಿಸಿ ದಿನಾಂಕ17.02.2019 ರಂದು ಮಂಗಳೂರು ಪುರಭವನದಲ್ಲಿ ಬಿಡುಗಡೆಗೊಳಿಸಿದೆ.
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಯುವವಾಹಿನಿ (ರಿ) ಸಸಿಹಿತ್ಲು ಘಟಕದ ಆತಿಥ್ಯದಲ್ಲಿ, ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿಯ ಸಹಯೋಗದೊಂದಿಗೆ ಮಂಗಳೂರು ಪುರಭವನದಲ್ಲಿ ನಡೆದ ವಿಶುಕುಮಾರ್ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ವಿಶುಕುಮಾರ್ ಅವರ ಪತ್ನಿ, ಹೈಕೋರ್ಟ್ ವಕೀಲೆ ವಿಜಯಲಕ್ಷ್ಮಿ ವಿಶುಕುಮಾರ್ ಈ ಪುಸ್ತಕಗಳನ್ನು ಅನಾವರಣ ಗೊಳಿಸಿದರು.
ಈ ಮೂಲಕ ವಿಶುಕುಮಾರ್ ವಿರಚಿತ ಕರಾವಳಿ, ಮಥನ , ಈ ಪರಿಯ ಬದುಕು, ಮತ್ತು ಕರ್ಮ ಕಾದಂಬರಿಗಳು ಸಾಹಿತ್ಯ ಲೋಕಕ್ಕೆ ಮರುಸೇರ್ಪಡೆಗೊಂಡವು. ವಾದ್ಯ ಮೇಳಗಳೊಂದಿಗೆ ಸರ್ವಾಲಂಕೃತ ಪಲ್ಲಕ್ಕಿಯಲ್ಲಿ ಈ ಕೃತಿಗಳನ್ನು ಹೊತ್ತು ತರುವ ಮೂಲಕ ಸಾಹಿತ್ಯದ ಮೌಲ್ಯವನ್ನು ಪ್ರತಿಬಿಂಬಿಸಿದ್ದು ವಿಶೇಷವಾಗಿತ್ತು.
ತಾಳ್ಮೆ, ಸರಳತೆ, ಸತ್ಯದ ಜೀವನ :
ಬಳಿಕ ಮಾತಾಡಿದ ವಿಜಯಲಕ್ಷ್ಮಿ, 32 ವರ್ಷಗಳ ಹಿಂದೆ ಅಗಲಿದ ವಿಶುಕುಮಾರ್ ಬಿಟ್ಟು ಹೋದ ಕೊಡುಗೆ, ಪ್ರತಿಭೆಯನ್ನು ದಂತಕಥೆಯಾಗಲು ಬಿಡದೆ ಜೀವಂತ ಕಥೆಯಾಗಿಸುವ ನಿಟ್ಟಿನಲ್ಲಿ ಕಾರ್ಯಗಳು ನಡೆಯುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು. “ನಾನವರನ್ನು ವಿವಾಹವಾಗುವುದಕ್ಕೆ ಮೊದಲು ಏಳುವರೆ ವರ್ಷ ಒಡನಾಟ ಹೊಂದಿದ್ದೆ. ವಿವಾಹವಾದ ಆರು ತಿಂಗಳಲ್ಲೇ ಅವರಲ್ಲಿ ಕಾನ್ಸರ್ ಲಕ್ಷಣಗಳು ಕಂಡುಬಂದವು. 10 ತಿಂಗಳಲ್ಲಿ ಹಾಸಿಗೆ ಹಿಡಿದರು. ಆದರೆ ಅವರು ಜೀವನದ ಬಹುದೊಡ್ಡ ಮೌಲ್ಯಗಳನ್ನು ಕೊಟ್ಟು ಹೋಗಿದ್ದಾರೆ.
ತಾಳ್ಮೆ, ಸರಳತೆ, ಸತ್ಯ ಅವರ ಜೀವನದ ಸರಳ ಮೌಲ್ಯಗಳಾಗಿದ್ದವು” ಎಂದು ವಿಜಯಲಕ್ಷ್ಮಿ ವಿಶುಕುಮಾರ್ ಘಟನೆಗಳ ಸಮೇತ ವಿವರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಸರಕಾರದ ನಗರಾಭಿವೃದ್ಧಿ ಸಚಿವರಾದ ಯು.ಟಿ.ಖಾದರ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ.ಭಂಡಾರಿ, ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಭಾಸ್ಕರ್ ಕೆ, ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ತುಕರಾಮ ಪೂಜಾರಿ, ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ್ ನಡುಬೈಲು, ಸಸಿಹಿತ್ಲು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಪ್ರಕಾಶ್ ಕುಮಾರ್ ಬಿ.ಎನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುನೀಲ್.ಕೆ.ಅಂಚನ್, ವಿಶುಕುಮಾರ್ ಸಾಹಿತ್ಯ ಸಮ್ಮೇಳನದ ಸಂಚಾಲಕ ಶೈಲೇಶ್ ಸಸಿಹಿತ್ಲು, , ಯುವವಾಹಿನಿ ಸಸಿಹಿತ್ಲು ಘಟಕದ ಅಧ್ಯಕ್ಷ ಭಾಸ್ಕರ್ ಕೋಟ್ಯಾನ್, ಕಾರ್ಯದರ್ಶಿ ಶಕೀಲಾ ನರೇಶ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು ಸ್ವಾಗತಿಸಿದರು, ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿಯ ಸಂಚಾಲಕ ಪ್ರದೀಪ್ ಎಸ್.ಆರ್ ವಂದಿಸಿದರು. ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿಯ ಕಾರ್ಯದರ್ಶಿ ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.
Remarkable work by Yuvavahini. It’s really a good idea of paying tribute to the great legend.