ಮಂಗಳೂರು : ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಂದೇಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆದಾಗ ಸಾರ್ಥಕತೆ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಮಂಗಳೂರು ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್ ನ ನಿರ್ದೇಶಕಿ ಪ್ರೊ.ಹಿಲ್ಡಾ ರಾಯಪ್ಪನ್ ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ ಹಾಗೂ ಯುವವಾಹಿನಿ(ರಿ) ಕೇಂದ್ರ ಸಮಿತಿ ಮತ್ತು ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರು ಪುರಭವನದಲ್ಲಿ ದಿನಾಂಕ 14. 2.2019 ರಂದು ಮಂಗಳೂರು ವಿ.ವಿ ವ್ಯಾಪ್ತಿಯ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜೀವನ ಸಾಧನೆ ಅರಿವು ವಿದ್ಯಾರ್ಥಿ ಸಂವಾದ “ಗುರು ಸಂದೇಶ” ಅಂದು ಇಂದು ಮುಂದೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಾರಾಯಣ ಗುರುಗಳು ಪರಿವರ್ತನೆಯ ಹರಿಕಾರ. ಶೋಷಣೆ ಮುಕ್ತ,ಸ್ವತಂತ್ರ, ಸ್ವಾಭಿಮಾನದ ಸಮಾಜ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿ ಹೊಸ ಕ್ರಾಂತಿಯನ್ನೇ ಮಾಡಿದ ಅವರು ಪ್ರತಿಯೊಬ್ಬ ಮನುಷ್ಯನಲ್ಲೂ ದೇವರನ್ನು ಕಂಡವರು.ಯಾವಾಗ ನಾವು ಪ್ರತಿಯೋರ್ವ ಮನುಷ್ಯನಲ್ಲಿ ದೇವರನ್ನು ಕಾಣುತ್ತೇವೆಯೋ ಆವಾಗ ಅಲ್ಲಿ ಶೋಷಣೆ ,ದೌರ್ಜನ್ಯ, ಅವಮಾನಗಳಿಗೆ ಅಸಮಾನತೆಗಳಿಗೆ ಅವಕಾಶವಿರುವುದಿಲ್ಲ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರು ವಿಶ್ವವಿದ್ಯಾನಿಲಯ ಹಣಕಾಸು ಅಧಿಕಾರಿ ದಯಾನಂದ ನಾಯಕ್ ಅವರು ನಾರಾಯಣ ಗುರುಗಳು ವಿಶ್ವಮಾನವತೆಯನ್ನು ಜಗತ್ತಿಗೆ ಸಾರಿದ ಮಹಾನ್ ದಾರ್ಶನಿಕರು ಎಂದು ಬಣ್ಣಿಸಿದರು.ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್ ಅವರು ನಾರಾಯಣ ಗುರುಗಳು ಒಂದು ಸಮುದಾಯಕ್ಕೆ ಗುರು ಅಲ್ಲ ಅವರು ಲೋಕದ ಗುರು, ಅವರ ಸಂದೇಶ ಸರ್ವಕಾಲಕ್ಕೂ ಪ್ರಸ್ತುತವಾಗಿರುವಂತಹದ್ದು ಎಂದರು.
ವಿಶ್ವವಿದ್ಯಾನಿಲಯ ಉಪ ಕುಲಸಚಿವ ಪ್ರಭಾಕರ್ ನೀರುಮಾರ್ಗ ಅವರು ವಿ.ವಿ.ಯ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ ವಿಶ್ವವಿದ್ಯಾನಿಲಯದ ಪಕ್ಕದಲ್ಲಿ ಸುಮಾರು 4.5 ಕೋಟಿ ರೂಪಾಯಿ ವೆಚ್ಚದಲ್ಲಿ ಗುರುಗಳ ಧ್ಯಾನ ಮಂದಿರ ನಿರ್ಮಾಣವಾಗಲಿದೆ ಎಂದರು.
ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜಕಿ ಪ್ರೊ.ವಿನೀತಾ.ಕೆ. ಅವರುಕಾಲೇಜು ವಿದ್ಯಾರ್ಥಿಗಳಿಗೆ ಗುರುಗಳ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಮತ್ತು ಇಂತಹ ಕಾರ್ಯಕ್ರಮದಲ್ಲಿ ಹೆಚ್ಚು ಪಾಲ್ಗೊಳ್ಳಿ ಎಂದು ಸಲಹೆ ನೀಡಿದರು. ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠದ ನಿರ್ದೇಶಕ ಮುದ್ದು ಮೂಡುಬೆಳ್ಳೆ ಕಾರ್ಯಕ್ರಮದ ಉದ್ದೇಶ ವಿವರಿಸಿದರು.
ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ವಿಚಾರ ಮಂಡಿಸಿದರು. ಪ್ರಾಧ್ಯಾಪಕ, ತರಬೇತುದಾರ ಅರವಿಂದ ಚೊಕ್ಕಾಡಿ ಸಂವಾದ ಸಮನ್ವಯಕಾರ ರಾಗಿದ್ದರು. ಹಾಗೂ “ಗುರು ಪ್ರಥಮ” ಎಂಬ ನೃತ್ಯರೂಪಕವನ್ನು ಅರವಿಂದ ಚೊಕ್ಕಾಡಿಯವರ ನಿರ್ದೇಶನದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮುಂಡಾಜೆ ಮತ್ತು ಇಂದಿರಾ ಗಾಂಧಿ ವಸತಿ ಶಾಲೆ ಹೊಸಂಗಡಿಯ ವಿದ್ಯಾರ್ಥಿಗಳು ಬಹಳ ಸುಂದರವಾಗಿ ಪ್ರಸ್ತುತಿ ಪಡಿಸಿದರು.
ಯುವವಾಹಿನಿ(ರಿ) ಕೇಂದ್ರ ಸಮಿತಿಯ ಅಧ್ಯಕ್ಷ ಶ್ರೀ ಜಯಂತ್ ನಡುಬೈಲ್ ಸ್ವಾಗತಿಸಿದರು. ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಅಧ್ಯಕ್ಷ ಜಗದೀಶ್ ಸುವರ್ಣ ಉಪಸ್ಥಿತರಿದ್ದರು. ಯುವವಾಹಿನಿ ಕೇಂದ್ರ ಸಮಿತಿಯ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕ ಸಂಜೀವ ಸುವರ್ಣ ವಂದಿಸಿದರು. ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು ಮತ್ತು ಶಶಿಧರ್ ಕಿನ್ನಿಮಜಲು ನಿರೂಪಿಸಿದರು.