ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ ಸಿದ್ಧಾಂತಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಬದುಕಿಗೊಂದು ಅರ್ಥ ಬರಲು ಸಾಧ್ಯ ಮತ್ತು ನಾವು ಸಮುದಾಯ ಅಭಿವೃದ್ಧಿಯ ಜತೆಗೆ ಸಮಾಜದ ಅಭಿವೃದ್ಧಿಯ ಕಡೆಗೂ ದೃಷ್ಟ ಹಾಯಿಸಬೇಕು ಎಂದು ಪುತ್ತೂರು ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅದ್ಯಕ್ಷ ಜಯಂತ ನಡುಬೈಲು ತಿಳಿಸಿದರು.
ಉಪ್ಪಿನಂಗಡಿ ಸ.ಮಾ.ಹಿ.ಪ್ರಾಥಮಿಕ ಶಾಲಾ ಸಭಾಭವನದಲ್ಲಿ ಜರಗಿದ ಉಪ್ಪಿನಂಗಡಿ ಯುವವಾಹಿನಿಯ 2016-17 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ, ಅಭಿನಂದನೆ ಹಾಗೂ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಅಸಮಾನ ಸಾಮಾಜಿಕ ವ್ಯವಸ್ಥೆಯ ಕಾಲಘಟ್ಟದಲ್ಲಿ ಸಮಾನ ನಾಗರಿಕ ತತ್ವವನ್ನು ಪ್ರತಿಪಾದಿಸಿ ಸರ್ವರಿಗೂ ಮಾದರಿ ಸಂದೇಶ ನೀಡುವ ಮೂಲಕ ಬ್ರಹ್ಮಶ್ರೀ ನಾರಾಯಣಗುರು ಸಾಮಾಜಿಕ ಪರಿವರ್ತನೆಗೆ ಕಾರಣರಾಗಿದ್ದಾರೆ. ಸಮುದಾಯದವರು ಅವರ ತತ್ವ ಚಿಂತನೆಗಳನ್ನು ಅಳವಡಿಸಿಕೊಂಡು ಸ್ವಾಭಿಮಾನದ ಬದುಕಿನ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಯುವವಾಹಿನಿ ಕೇಂದ್ರ ಸಮಿತಿ ಅದ್ಯಕ್ಷ ಪದ್ಮನಾಭ ಮರೋಳಿ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಉಪನ್ಯಾಸಕ ನವೀನ್ ಕುಮಾರ್ ಮರಿಕೆ ದಿಕ್ಸೂಚಿ ಭಾಷಣ ಮಾಡಿ ಬಿಲ್ಲವ ಸಂಘಟನೆಗಳು ಹತ್ತು ಹಲವು ಸಮಾಜಮುಖಿ ಕಾರ್ಯಗಳೊಂದಿಗೆ ವ್ಯವಸ್ಥಿತವಾಗಿ ಮುನ್ನಡೆದು ಸಮಾಜಕ್ಕೆ ಮಾದರಿಯಾಗಿ ಕಲೆ ಸಂಸ್ಕೃತಿಯ ಉಳವಿಗಾಗಿ ಕೊಡುಗೆ ನೀಡಿದೆ ಎಂದರು
2016-17 ನೇ ಸಾಲಿನ ನೂತನ ಅಧ್ಯಕ್ಷರಾಗಿದ್ದ ಅಶೋಕ್ ಕುಮಾರ್ ಪಾಲೇರಿ, ಕಾರ್ಯದರ್ಶಿಯಾಗಿ ಮನೋಜ್ ಎನ್. ಸಾಲ್ಯಾನ್ ಸುಣ್ಣಾಜೆ,ಜತೆ ಕಾರ್ಯದರ್ಶಿಯಾಗಿ ಸಂತೋಷ್ ಕುಮಾರ್ ದಡ್ಡು, ಕೋಶಾಧಿಕಾರಿಯಾಗಿ ಅನಿಲ್ ಕುಮಾರ್ ದಡ್ಡು ಮತ್ತಿತರರು ಪ್ರಮಾಣ ವಚನ ಸ್ವೀಕರಿಸಿದರು
ನಿಕಟಪೂರ್ವ ಅದ್ಯಕ್ಷ ನವೀನ್ ಪಡ್ಪು ಸ್ವಾಗತಿಸಿದರು, ಮಾಜಿ ಅದ್ಯಕ್ಷ ಲೋಕೇಶ್ ಬೆತ್ತೋಡಿ ಕಾರ್ಯಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ಮನೋಜ್ ಎನ್. ಸಾಲ್ಯಾನ್ ಸುಣ್ಣಾಜೆ ಧನ್ಯವಾದ ನೀಡಿದರು.